ADVERTISEMENT

5 ಕೆ.ಜಿ ಅಕ್ಕಿ, ₹170 ಖಾತೆಗೆ: ರಾಜ್ಯ ಸರ್ಕಾರದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 9:24 IST
Last Updated 28 ಜೂನ್ 2023, 9:24 IST
ವಿಧಾನಸೌಧ
ವಿಧಾನಸೌಧ    

ಬೆಂಗಳೂರು: ಕಾಂಗ್ರೆಸ್‌ನ ‘ಗ್ಯಾರಂಟಿ’ ಯೋಜನೆಯಡಿ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ ‘ಅನ್ನಭಾಗ್ಯ’ದಡಿ ತಲಾ 10 ಕೆ.ಜಿ ಅಕ್ಕಿ ವಿತರಿಸುವ ಯೋಜನೆಗೆ, ಅಕ್ಕಿ ಹೊಂದಿಸಲು ಸಾಧ್ಯವಾಗದೇ ಇರುವುದರಿಂದ ತಲಾ 5 ಕೆ.ಜಿ ಅಕ್ಕಿ ಹಾಗೂ ಬಾಕಿ 5 ಕೆ.ಜಿ ಅಕ್ಕಿ ಬದಲು ₹170 ಅನ್ನು ಫಲಾನುಭವಿ ಖಾತೆಗೆ ಜಮೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕೇಂದ್ರ ಸರ್ಕಾರ ಈ ಹಿಂದೆ ವ್ಯಕ್ತಿಗೆ ತಲಾ 5 ಕೆ.ಜಿ ನೀಡುತ್ತಿರುವುದನ್ನು ಬಿಟ್ಟು ಹೆಚ್ಚುವರಿ ಅಕ್ಕಿ ಸರಬರಾಜು ಮಾಡಲು ಒಪ್ಪಿರಲಿಲ್ಲ. ಕೇಂದ್ರದಿಂದ ಅಕ್ಕಿ ಸಿಗುವುದಿಲ್ಲ ಎಂಬುದು
ಖಾತರಿಯಾಗುತ್ತಿದ್ದಂತೆ  ಪಂಜಾಬ್‌, ತೆಲಂಗಾಣ, ಆಂಧ್ರಪ್ರದೇಶ ಮತ್ತು ಛತ್ತಿಸಗಢ ರಾಜ್ಯಗಳಿಂದ ಅಕ್ಕಿ ಖರೀದಿಸುವ ಬಗ್ಗೆ ರಾಜ್ಯ ಸರ್ಕಾರ ಪ್ರಯತ್ನ ನಡೆಸಿತ್ತು. ಕೆಲವು ರಾಜ್ಯಗಳು ತಮ್ಮ ಬಳಿ ಅಕ್ಕಿ ಇಲ್ಲ ಎಂದರೆ, ಇನ್ನು ಕೆಲವು ರಾಜ್ಯಗಳು ಹೆಚ್ಚಿನ ದರಪಟ್ಟಿ ನೀಡಿದ್ದವು.

ಜುಲೈ 1ರಿಂದಲೇ ಅನ್ನಭಾಗ್ಯ ಜಾರಿ ಮಾಡುವ ವಾಗ್ದಾನವನ್ನು ಪೂರೈಸಬೇಕಾದ ಕಾರಣಕ್ಕೆ ಅಕ್ಕಿ ಬದಲು ಭಾರತೀಯ ಆಹಾರ ನಿಗಮದ (ಎಫ್‌ಸಿಐ) ನಿಗದಿ ದರದಂತೆ ತಲಾ ಕೆ.ಜಿ.ಗೆ ₹34 ನೀಡುವ ಮಹತ್ವದ ನಿರ್ಣಯವನ್ನು ಬುಧವಾರ ನಡೆದ ಸಚಿವ ಸಂಪುಟ ಸಭೆ ತೆಗೆದುಕೊಂಡಿತು.

ADVERTISEMENT

ಜುಲೈ 1ರಿಂದಲೇ ಬಿಪಿಎಲ್‌ ಕುಟುಂಬ ಒಂದು ಕೆ.ಜಿ ಅಕ್ಕಿಯ ದರ ₹34 ರಂತೆ ಒಬ್ಬ ವ್ಯಕ್ತಿಗೆ ಒಟ್ಟು ಐದು ಕೆ.ಜಿಗೆ ₹170 ಅನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆ (ಡಿಬಿಟಿ) ಮಾಡಲು ಸಭೆ ನಿರ್ಧರಿಸಿತು. ಇದರಿಂದ 85 ಲಕ್ಷ ಬಿಪಿಎಲ್ ಕುಟುಂಬಕ್ಕೆ ಅನುಕೂಲವಾಗಲಿದೆ.

ದುಡ್ಡು ಕೊಡುವುದು ತಾತ್ಕಾಲಿಕ ವ್ಯವಸ್ಥೆ. ಅಕ್ಕಿ ಸಿಗುವವರೆಗೆ ಹಣ ನೀಡುತ್ತೇವೆ. ಅನ್ನಭಾಗ್ಯಕ್ಕೆ ಬೇಕಾಗಿರುವಷ್ಟು ಪ್ರಮಾಣದ ಅಕ್ಕಿ ಸಿಕ್ಕಿದ ಬಳಿಕ ನೇರ ನಗದು ಜಮೆ ಮಾಡುವ ಯೋಜನೆ ಇರುವುದಿಲ್ಲ
–ಕೆ.ಎಚ್. ಮುನಿಯಪ್ಪ ಆಹಾರ ಸಚಿವ

ಬೊಮ್ಮಾಯಿ ಬಿಎಸ್‌ವೈ ಅಕ್ಕಿ ಕೊಡಿಸಿ: ಸಿದ್ದರಾಮಯ್ಯ ‘ಐದು ಕೆ.ಜಿ. ಅಕ್ಕಿ ಕೊಡಿ. ಉಳಿದ ಅಕ್ಕಿ ಕೊಡಲು ಆಗದಿದ್ದರೆ ಫಲಾನುಭವಿಗಳ ಖಾತೆಗೆ ಹಣ ಹಾಕಿ ಎಂದು ಬಿಟ್ಟಿ ಉಪದೇಶ ನೀಡುವ ಬಸವರಾಜ ಬೊಮ್ಮಾಯಿ ಬಿ.ಎಸ್‌.ಯಡಿಯೂರಪ್ಪ ಮೊದಲಾದ ಬಿಜೆಪಿ ನಾಯಕರು ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿಸಲು ಒಂದು ಬಾರಿಯೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು. ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು ‘ಅನ್ನಭಾಗ್ಯ ರಾಜ್ಯದ ಬಡವರಿಗಾಗಿ ರೂಪಿಸಿದ ಕಾರ್ಯಕ್ರಮ. ಬಡವರಿಗೆ ಅಕ್ಕಿ ನೀಡುವುದಕ್ಕಿಂತ ಅನ್ನಭಾಗ್ಯ ಜಾರಿಯಾಗಬಾರದು ಎನ್ನುವುದರಲ್ಲೇ ಅವರಿಗೆ ಹೆಚ್ಚು ಖುಷಿ ಸಿಗುತ್ತದೆ. ಇದು ರಾಜ್ಯ ಬಿಜೆಪಿ ನಾಯಕರ ನೈಜ ಮುಖ’ ಎಂದು ಟೀಕಿಸಿದರು. ‘ಕೇಂದ್ರ ಸಚಿವರಾದ ಅಮಿತ್‌ ಶಾ ಪೀಯೂಷ್ ಗೋಯಲ್‌ ಅವರನ್ನು ಭೇಟಿ ಮಾಡಿ ಅಕ್ಕಿ ಸರಬರಾಜು ಮಾಡಲು ಮನವಿ ಮಾಡಿದ್ದೆವು. ಮೂರು ಸಂಸ್ಥೆಗಳು ಅಕ್ಕಿ ಪೂರೈಸಲು ಹೆಚ್ಚು ದರ ನಮೂದಿಸಿದ್ದವು. ಹಾಗಾಗಿ ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್‌ ಕರೆಯಲು ನಿರ್ಧರಿಸಿದ್ದೇವೆ. ಕೇಂದ್ರ ನೀಡದಿದ್ದರೂ ಆಂಧ್ರಪ್ರದೇಶ ತೆಲಂಗಾಣ ಪಂಜಾಬ್‌ ಸೇರಿದಂತೆ ಇತರೆ ರಾಜ್ಯಗಳಿಂದ ಅಕ್ಕಿ ತರಿಸಲು ಪ್ರಯತ್ನ ನಡೆದಿತ್ತು’ ಎಂದು ವಿವರಿಸಿದರು.

ಮೊದಲ ತುತ್ತಿನಲ್ಲಿಯೇ ಜನರಿಗೆ ಕಲ್ಲು: ಬೊಮ್ಮಾಯಿ

ಅನ್ನಭಾಗ್ಯ ಯೋಜನೆಯ ಮೊದಲ ತುತ್ತಿನಲ್ಲಿಯೇ ಜನರಿಗೆ ಕಲ್ಲು ಸಿಕ್ಕಿದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಗ್ಯಾರಂಟಿ ಯೋಜನೆಯ ಜಾರಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ದೋಖಾ ಮಾಡಿದೆ. ಹತ್ತು ಕೆ.ಜಿ ಅಕ್ಕಿ ಕೊಡುವ ಗ್ಯಾರಂಟಿ ನೀಡಿ ಈಗ ಒಬ್ಬರಿಗೆ ₹170 ಹಾಕುವುದಾಗಿ ಹೇಳಿರುವುದು ಸರ್ಕಾರದ ವಂಚನೆಯ ಇನ್ನೊಂದು ಮುಖ ಬಯಲಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಹತ್ತು ಕೆ.ಜಿ ಅಕ್ಕಿ ಕೊಡಿ, ಇಲ್ಲವೇ ಮಾರುಕಟ್ಟೆ ದರದಲ್ಲಿ ಪ್ರತಿ ಕೆ.ಜಿಗೆ ₹60  ಗಳಂತೆ ಹತ್ತು ಕೆ.ಜಿಗೆ ತಗಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮಾತು ತಪ್ಪಿದ್ದಕ್ಕಾಗಿ‌ ಜನರ ಕ್ಷಮೆ ಕೇಳಿ ಎಂದು ಅವರು ಆಗ್ರಹಿಸಿದ್ದಾರೆ.

ಎರಡೂವರೆ ಕೆ.ಜಿ: ಕಾಂಗ್ರೆಸ್ ಸರ್ಕಾರ ಅಕ್ಕಿ ಬದಲಿಗೆ ಕೊಡುವ ಹಣದಿಂದ ಮಾರುಕಟ್ಟೆಯಲ್ಲಿ ಕೇವಲ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಖರೀದಿಸಬಹುದಾಗಿದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ‘ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಅಕ್ಕಿಗೆ ₹50 ರಿಂದ ₹60 ಬೆಲೆ ಇದೆ. ಇವರು ಕೊಡುವ ₹34 ರಲ್ಲಿ ಎಷ್ಟು ಅಕ್ಕಿ ಖರೀದಿಸಬಹುದು? ಕೋವಿಡ್‌ ಕಾಲದಿಂದ ಹಿಡಿದು ಕಳೆದ ಡಿಸೆಂಬರ್‌ವರೆಗೆ ಮೋದಿ ಸರ್ಕಾರ ತಲಾ 10 ಕೆ.ಜಿ ಅಕ್ಕಿಯನ್ನು ನೀಡಿದೆ’ ಎಂದು ಹೇಳಿದರು. ‘ಚುನಾವಣೆ ಸಂದರ್ಭದಲ್ಲಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಆ ಪ್ರಕಾರ ಈಗಾಗಲೇ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿಯೂ ಸೇರಿ ಒಟ್ಟು 15 ಕೆ.ಜಿ ಅಕ್ಕಿ ನೀಡಬೇಕಾಗಿದ್ದ ರಾಜ್ಯ ಸರ್ಕಾರ ಈಗ 5 ಕೆ.ಜಿ ನೀಡುವುದಾಗಿ ಹೇಳುವ ಮೂಲಕ ಕೊಟ್ಟ ಮಾತಿಗೆ ತಪ್ಪಿದೆ’ ಎಂದರು. ‘ಎಷ್ಟೇ ಖರ್ಚಾದರೂ ಸರಿ ನಾವು ಅಕ್ಕಿಯನ್ನೇ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಅಕ್ಕಿ ಕೊಡಲು ಆಗಲ್ಲ ಹಣ ಕೊಡುತ್ತೇವೆ ಎಂದು ಹೇಳಿ ಜನರ ದಾರಿ ತಪ್ಪಿಸಿದ್ದಾರೆ’ ಎಂದು  ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.