ADVERTISEMENT

ಅನ್ನಭಾಗ್ಯದ ಅಕ್ಕಿ ಕಳ್ಳಸಾಗಣೆ: ಹೈಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:26 IST
Last Updated 4 ಜುಲೈ 2024, 15:26 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ಬಡವರಿಗಾಗಿ ರೂಪಿಸಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೋಟೆಲ್‌ಗಳಿಗೆ ಮಾರಾಟ ಮಾಡುವ ಮಾಫಿಯಾ ವಿರುದ್ಧ ಆಯಾ ಜಿಲ್ಲಾಧಿಕಾರಿಗಳು ಹೆಚ್ಚಿನ ನಿಗಾ ವಹಿಸುವ ಮೂಲಕ ಅಯೋಗ್ಯರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೈಕೋರ್ಟ್‌ ಕಿಡಿಕಾರಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಈ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ‘ಅಕ್ಕಿ ಕಳ್ಳಸಾಗಣೆ ಮಾಡುವ ಡಾನ್‌ಗಳನ್ನು ರಾಜಕಾರಣಿಗಳು ರಕ್ಷಿಸಲು ಮುಂದಾಗಿ ಅವರ ಬೆನ್ನಿಗೆ ನಿಲ್ಲುತ್ತಾರೆ’ ಎಂದು ಆಕ್ರೋಶ ಹೊರಹಾಕಿತು. 

ADVERTISEMENT

‘ಕಳ್ಳಸಾಗಣೆದಾರರು ಸರಕು ಪಟ್ಟಿ, ಸಿ ಫಾರಂ ಮತ್ತು ರಸೀದಿಯಂಥ ಅಗತ್ಯ ದಾಖಲೆಗಳಿಲ್ಲದೆ ಅಕ್ಕಿಯನ್ನು ಟ್ರಕ್‌ಗಳಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುತ್ತಾರೆ. ಇಂತಹವರನ್ನು ಪತ್ತೆ ಹಚ್ಚಿದಾಗ ಅವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವ ಅಧಿಕಾರ ಸ್ಥಳೀಯ ಜಿಲ್ಲಾಧಿಕಾರಿಗೆ ಇರುತ್ತದೆ. ಆದರೆ, ಅವರನ್ನು ಬಚಾವು ಮಾಡುವಂತಹ ವ್ಯವಸ್ಥೆ ಇದೆಯಲ್ಲಾ’ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿತು.

‘ಕಾನೂನನ್ನು ಎಷ್ಟೇ ಬಿಗಿಗೊಳಿಸಿದರೂ ಇಂದು ಕಳ್ಳಸಾಗಣೆದಾರರು, ‘ನಿನ್ನ ಮೊಣಕೈಗೆ ಹತ್ತಿರುವ ಜೇನುತುಪ್ಪವನ್ನು ನಾನು ನೆಕ್ಕುತ್ತೇನೆ. ನನ್ನ ಮೊಣಕೈಗೆ ಮೆತ್ತಿರುವ ಜೇನುತುಪ್ಪವನ್ನು ನೀನು ನೆಕ್ಕು’ ಎಂಬಂತಹ ಮಟ್ಟಕ್ಕೆ ಇಳಿದಿದ್ದಾರೆ. ಅನ್ನಭಾಗ್ಯದಲ್ಲಿ ನನ್ನ–ನಿಮ್ಮ ದುಡ್ಡು ಅಡಗಿರುತ್ತದೆ. ಸರ್ಕಾರ ಅದಕ್ಕೆ ಸಹಾಯಧನ ನೀಡುವ ಮೂಲಕ ಬಡವರ ಉದ್ಧಾರಕ್ಕೆ ಎಂದು ಯೋಜನೆ ಜಾರಿಗೊಳಿಸಿರುತ್ತದೆ. ಇದನ್ನು ನಾವ್ಯಾರೂ ಮರೆಯಬಾರದು’ ಎಂದು ಹೇಳಿತು.

‘ಯಾರೊ ಕೆಲವು ಅದೃಷ್ಟವಂತರು ತಮ್ಮ ತಂದೆ–ತಾತ ಮಾಡಿದ ಪುಣ್ಯದಿಂದ ಇವತ್ತು ಸಮಾಜದಲ್ಲಿ ಉತ್ತಮ ಸ್ಥಾನಮಾನ ಅನುಭವಿಸುತ್ತಿದ್ದಾರೆ. ಆದರೆ, ಬಡವರಿಗೆ ಅಂತಹ ಭಾಗ್ಯ ಇರುವುದಿಲ್ಲ. ಬಡವರ ಪಾಲಿನ ಕಲ್ಯಾಣ ಕಾರ್ಯಕ್ರಮದ ಅಕ್ಕಿ ಕಾಳಸಂತೆಯಲ್ಲಿ ಹೋಟೆಲ್‌ಗಳಿಗೆ ಹೋಗುವುದನ್ನು ನಾವೆಲ್ಲರೂ ನೋಡುತ್ತಾ ಕುಳಿತರೆ ಹೇಗೆ? ಸಾರ್ವಜನಿಕ ವಿತರಣಾ ಯೋಜನೆ ಅಡಿಯಲ್ಲಿನ ಅನ್ನಭಾಗ್ಯದಂಥ ಜನಪರ ಯೋಜನೆ ನಿಜವಾದ ಬಡವರಿಗೆ ತಲುಪಬೇಕು’ ಎಂದು ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.