ಬೆಂಗಳೂರು: ರಾಜ್ಯದ ಖಡಕ್ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಂಗಳವಾರ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬದುಕಿನ ಎಲ್ಲ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. ನನ್ನ ಖಾಕಿ ಬದುಕು ಈಗ ಮುಗಿದಿದೆ ಎಂದು ನಾನು ತೀರ್ಮಾನಿಸಿದ್ದೇನೆ’ ಎಂದರು.
ಅಭಿಮಾನಿಗಳಿಗೆ ಪತ್ರ: ರಾಜೀನಾಮೆ ಸಂಬಂಧ ಅಭಿಮಾನಿಗಳಿಗೆ ಅಣ್ಣಾಮಲೈ ಪತ್ರ ಬರೆದಿದ್ದಾರೆ.
‘ಲೋಕಸಭಾ ಚುನಾವಣೆಗೂ ಮೊದಲೇ ರಾಜೀನಾಮೆ ಬಗ್ಗೆ ನಿರ್ಧರಿಸಿದ್ದೆ. ಚುನಾವಣಾ ಸಮಯದಲ್ಲಿ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹಿಂದೆ ಸರಿಯಲು ಮನಸ್ಸು ಒಪ್ಪಲಿಲ್ಲ. ಇಂದು (2019ರ ಮೇ 28) ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.
‘ಐಪಿಎಸ್ ಸೇವೆಗೆ ಸೇರಿ 9 ವರ್ಷಗಳಾಗಿವೆ. ಪ್ರತಿ ಕ್ಷಣವನ್ನೂ ಖಾಕಿ ಜೊತೆ ಬದುಕಿದೆ. ಪೊಲೀಸ್ ಕೆಲಸಕ್ಕಿಂತ ಸರಿಸಮನಾದ ಕೆಲಸ ಮತ್ತೊಂದಿಲ್ಲ. ಇದು ದೇವರಿಗೆ ಬಹಳ ಹತ್ತಿರವಾದ ಕೆಲಸ. ಜವಾಬ್ದಾರಿಯುತ ಕೆಲಸ. ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ.
ಅಂತೆಯೇ ಸಾಕಷ್ಟು ವೈಯಕ್ತಿಕ ಸಭೆ, ಸಮಾರಂಭ, ಕುಟುಂಬದ ಕೆಲಸ–ಕಾರ್ಯಗಳನ್ನೂ ಕಳೆದುಕೊಂಡು ನೊಂದಿದ್ದೇನೆ. ಇವತ್ತು ಈ ಮಟ್ಟಕ್ಕೆ ಬೆಳೆಯಲು ಸಹಕರಿಸಿದ ಹಲವರಿಗೆ, ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ಆಪ್ತರು ಮೃತಪಟ್ಟಾಗ ಅಂತ್ಯಕ್ರಿಯೆಗೂ ಹೋಗಲಾಗಲಿಲ್ಲ. ಇದು ನನ್ನನ್ನು ಆಗಾಗ ಚಿಂತನೆಗೆ ಈಡು ಮಾಡಿದ್ದು ಸುಳ್ಳಲ್ಲ.’
‘ಕಳೆದ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಆ ಯಾತ್ರೆ ಕಣ್ಣು ತೆರೆಸಿತು. ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು ತೀವ್ರವಾಗಿ ಕಾಡಿತು. ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನು ನಾನೇ ಓದಿಕೊಳ್ಳಲು ವೇದಿಕೆಯನ್ನೂ ಸೃಷ್ಟಿಸಿತು. ನನ್ನಿಂದ ಯಾರಿಗಾದರೂ ಯಾವುದೇ ಸಮಯದಲ್ಲಾದರೂ ಮನಸ್ಸಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ....’ ಎಂದು ಅಣ್ಣಾಮಲೈ ಕೋರಿದ್ದಾರೆ.
‘5 ವರ್ಷಗಳಲ್ಲಿ 21 ದಿನ ಮಾತ್ರ ರಜೆ‘
‘ಪೊಲೀಸ್ ಇಲಾಖೆಯದ್ದು ಒತ್ತಡದ ಕೆಲಸ. ನಾನೇ ಐದು ವರ್ಷದಲ್ಲಿ 21 ದಿನ ಮಾತ್ರ ರಜೆ ತೆಗೆದುಕೊಂಡಿದ್ದೇನೆ’ ಎಂದು ಅಣ್ಣಾಮಲೈ ಹೇಳಿದರು.
‘ನಾಳೆ ಬೆಳಿಗ್ಗೆ ನಾನು ಇರುತ್ತೇನೂ ಇಲ್ಲವೋ ಗೊತ್ತಿಲ್ಲ. ಅನ್ನಿಸಿದ್ದನ್ನು ಇವಾಗಲೇ ಮಾಡುವ ಸ್ವಭಾವ ನನ್ನದು. ನನಗೆ ಸ್ವಾತಂತ್ರ್ಯ ಬೇಕು. ಹೀಗಾಗಿ ಈ ನಿರ್ಧಾರ. ನನ್ನೂರಿಗೆ ಹೋಗುತ್ತೇನೆ. ಕುಟುಂಬಕ್ಕೆ ಸಮಯ ಕೊಡುತ್ತೇನೆ. ಆರು ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ರಾಜಕಾರಣಿಗಳ ಕಿರುಕುಳದಿಂದ ರಾಜೀನಾಮೆ ಕೊಟ್ಟಿದ್ದಾರೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಅದು ನಿಜವಲ್ಲ. ಜೊತೆಗೆ, ರಾಜಕೀಯಕ್ಕೆ ಹೋಗುವ ಬಗ್ಗೆ ಯಾರ ಜೊತೆಯೂ ಯಾವ ಪಕ್ಷದೊಂದಿಗೂ ಮಾತನಾಡಿಲ್ಲ’ ಎಂದು ಹೇಳಿದರು.
***
ಮಗನಿಗೆ ಒಳ್ಳೆಯ ತಂದೆಯಾಗಿ ಆತನ ಜೊತೆ ಕಾಲ ಕಳೆಯಬೇಕಿದೆ. ನನ್ನ ಕುಟುಂಬದತ್ತ ಹೊರಳಬೇಕಿದೆ. ಜೀವನ ಇನ್ನೂ ತುಂಬಾ ಇದೆ. ಜೀವನದ ಅತೀ ಚಿಕ್ಕ ಘಟನೆ, ವಿಷಯಗಳನ್ನು ಸವಿಯಲು ಸಮಯ ಬೇಕಿದೆ
ಅಣ್ಣಾಮಲೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.