ADVERTISEMENT

ಮತ್ತಷ್ಟು ಪ್ರಶ್ನೆ ಸೋರಿಕೆ: ಪ್ರಾಧ್ಯಾಪಕರ ವಿಚಾರಣೆ

ಹಣದ ವಹಿವಾಟು ಬಗ್ಗೆ ಸಿಗದ ಮಾಹಿತಿ l ಪರಿಶೀಲನೆ ಬಳಿಕ ಮುಂದಿನ ಕ್ರಮ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 18:22 IST
Last Updated 29 ಏಪ್ರಿಲ್ 2022, 18:22 IST

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಪ್ರಶ್ನೆಗಳ ಸೋರಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮಲ್ಲೇಶ್ವರ ಠಾಣೆಯ ಪೊಲೀಸರು ಆರೋಪಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್.ನಾಗರಾಜ್ ಅವರ ವಿಚಾರಣೆ ಮುಂದುವರಿಸಿದ್ದಾರೆ.

ನಾಗರಾಜ್ ಅವರು ಸಿದ್ಧಪಡಿಸಿದ್ದ ಭೂಗೋಳಶಾಸ್ತ್ರ ವಿಷಯದ 18 ಪ್ರಶ್ನೆಗಳು ಸೋರಿಕೆ ಆಗಿದ್ದವು. ಈ ಪ್ರಶ್ನೆಗಳಲ್ಲದೆ, ಮತ್ತಷ್ಟು ಪ್ರಶ್ನೆಗಳು ಸೋರಿಕೆಯಾಗಿರುವ ಅನುಮಾನ ಪೊಲೀಸರಿಗೆ ಬಂದಿದೆ. ಹೀಗಾಗಿ, ಪ್ರಶ್ನೆಗಳನ್ನು ಸಿದ್ಧಪಡಿಸಿದ್ದ ಪ್ರಾಧ್ಯಾ‍ಪಕರು, ಉಪನ್ಯಾಸಕರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

‘ಮಾರ್ಚ್ 14ರಂದು ನಡೆದಿದ್ದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯ ಪ್ರಶ್ನೆಗಳು ಸೋರಿಕೆಯಾಗಿವೆ’ ಎಂಬುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ದೂರು ನೀಡುತ್ತಿದ್ದಂತೆ, ಪರೀಕ್ಷೆ ಅಭ್ಯರ್ಥಿಯೂ ಆಗಿದ್ದ ಅತಿಥಿ ಉಪನ್ಯಾಸಕಿ ಆರ್.ಸೌಮ್ಯಾ ಅವರನ್ನು ಬಂಧಿಸಲಾಗಿತ್ತು. ಅವರು ನೀಡಿದ್ದ ಮಾಹಿತಿಯನ್ವಯ ಕುಲಸಚಿವ ನಾಗರಾಜ್ ಅವರನ್ನೂ ಬಂಧಿಸಲಾಗಿದೆ.

ADVERTISEMENT

‘ಈ ಇಬ್ಬರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅವುಗಳ ಪರಿ ಶೀಲನೆ ನಂತರ ಮತ್ತಷ್ಟು ಪ್ರಶ್ನೆಗಳು ಸೋರಿಕೆಯಾಗಿರುವ ಅನುಮಾನ ಬಂದಿ ದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಉಪನ್ಯಾಸಕರ ಮಾಹಿತಿಯನ್ನು ಕೆಇಎ ಅಧಿಕಾರಿಗಳಿಂದ ಪಡೆದುಕೊಳ್ಳಲಾಗಿದೆ. ಅವರೆಲ್ಲರನ್ನೂ ಬೆಂಗಳೂರಿಗೆ ಕರೆಸಿ ವಿಚಾರಣೆ ನಡೆಸ ಲಾಗುತ್ತಿದೆ. ಇವರ ಹೇಳಿಕೆ ಪಡೆದು ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದೂ ತಿಳಿಸಿವೆ.

ಹಣದ ವಹಿವಾಟು, ಸಿಗದ ಮಾಹಿತಿ: ‘ಆರ್. ಸೌಮ್ಯಾ, ಸ್ನೇಹದ ಕಾರಣಕ್ಕೆ ಸ್ನೇಹಿತೆಗೆ ಪ್ರಶ್ನೆಗಳನ್ನು ಕಳುಹಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಆದರೆ, ಹಣಕ್ಕೆ ಪ್ರಶ್ನೆಗಳನ್ನು ಮಾರಿಕೊಂಡ ಬಗ್ಗೆ ಪುರಾವೆ ಸಿಕ್ಕಿಲ್ಲ’ ಎಂದು ಪೊಲೀಸರು ಹೇಳಿದರು.

ಸೋರಿಕೆಯಾದ ಪ್ರಶ್ನೆಗಳನ್ನು ನಂಬದ ಸ್ನೇಹಿತೆ’

‘ಪರೀಕ್ಷೆಗೆ ಮುನ್ನ ಸೌಮ್ಯಾ ಸ್ನೇಹಿತೆಯ ಮೊಬೈಲ್ ವಾಟ್ಸ್‌ಆ್ಯಪ್‌ಗೆ ಪ್ರಶ್ನೆಗಳನ್ನು ಕಳುಹಿಸಿದ್ದರು. ಆದರೆ, ಪ್ರಶ್ನೆಗಳನ್ನು ಸ್ನೇಹಿತೆ ನಂಬಿರಲಿಲ್ಲ. ದಾರಿ ತಪ್ಪಿಸಲು ಸೌಮ್ಯಾ ಹೀಗೆ ಮಾಡುತ್ತಿರ ಬಹುದೆಂದು ತಿಳಿದು ಸ್ನೇಹಿತೆ ಸುಮ್ಮನಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ನೇಹಿತೆಯನ್ನೂ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಕೃತ್ಯದಲ್ಲಿ ಆಕೆಯು ಭಾಗಿಯಾಗಿರುವ ನಿಖರ ಪುರಾವೆ ಸಿಕ್ಕಿಲ್ಲ’ ಎಂದೂ ತಿಳಿಸಿವೆ.

ಪ್ರಶ್ನೆಪತ್ರಿಕೆ ದೋಷ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಾಜೂಕಿನ ಉತ್ತರ

ಬೆಂಗಳೂರು: ‘ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ವಿಷಯದ ಪರೀಕ್ಷೆಯಲ್ಲಿ ಕೆಲವು ಕಾಗುಣಿತ ಮತ್ತು ಮುದ್ರಣ ದೋಷಗಳ ಬಗ್ಗೆ ವಿಷಯ ತಜ್ಞರ ವರದಿ ಅನುಸಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಕೆಇಎ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಹಲವಾರು ಲೋಪದೋಷಗಳಿವೆ ಎಂದು ಶಿವಮೊಗ್ಗದ ಡಾ.ಎಂ.ರವಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರಿಗೆ ವಿವರಣೆ ನೀಡಿರುವ ಕೆಇಎ, ಕೇವಲ ಐದು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದೆ.

ದೂರು–ಉತ್ತರ ಹೀಗಿದೆ

l ದೂರು: ಎ4 ಸರಣಿ ಪತ್ರಿಕೆಯ ಪ್ರಶ್ನೆ ಸಂಖ್ಯೆ 2ರಲ್ಲಿ
ಎಚ್‌.ಎಲ್‌. ನಾಗೇಗೌಡರ ‘ಪದವವೆ ನಮ್ಮ ಎದೆಯಲ್ಲಿ’ ಕೃತಿಯ ಹೆಸರನ್ನು ‘ಪದವಿವೆ ನನ್ನ ಎದೆಯಲ್ಲಿ’ ಎಂದು ಮಾಡಲಾಗಿದೆ.

ಕೆಇಎ:‘ಪದವವೆ’ ಮತ್ತು ’ಪದವಿವೆ’ ಎರಡರ ನಡುವೆ ಸಣ್ಣದಾದ ಕಾಗುಣಿತದ ವ್ಯತ್ಯಾಸವಿದೆ.

l ದೂರು: ಪ್ರಶ್ನೆ ಸಂಖ್ಯೆ 45ರಲ್ಲಿ ವಚನಕಾರ ಅಲ್ಲಮಪ್ರಭು ಅವರ ‘ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ’ ಎಂಬ ವಚನವನ್ನು ‘ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡ ನೋಡವ್ವಾ’ ಎಂದು ಕೊಡಲಾಗಿದೆ. ಬಿ.ವಿ.ಮಲ್ಲಾಪುರರ ಸಂಪಾದಕತ್ವದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಅಲ್ಲಮ ಪ್ರಭುದೇವರ ವಚನ ಸಂಪುಟ–2ರಲ್ಲಿ ಮತ್ತು ಇದೇ ಪ್ರಾಧಿಕಾರವು ಎಂ.ಎಂ.ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ ಸಂಪುಟಗಳಲ್ಲಿಯೂ ‘ಗಂಡನವ್ವಾ’ ಎಂದೇ ಇದೆ. ಪ್ರಶ್ನೆಗಾಗಿ ವಚನದ ಸಾಲನ್ನು ತೆಗೆದ ಮಹಾಶಯರು ಯಾವ ಪುಸ್ತಕವನ್ನು ಆಕರವಾಗಿ ಇಟ್ಟುಕೊಂಡಿದ್ದರು ಎನ್ನುವುದು ತಿಳಿಯದು.

ಕೆಇಎ: ‘ವಚನಗಳು ಮೌಖಿಕ ಪರಂಪರೆಯಿಂದ ಬಂದಂತ ಸಾಹಿತ್ಯ ಪ್ರಕಾರವಾಗಿದ್ದು, ಭಾವಾರ್ಥ ಒಂದೇ ಇರುತ್ತದೆ. ಗಂಡನವ್ವಾ ಹಾಗೂ ಗಂಡ ನೋಡವ್ವಾ ಎರಡರ ನಡುವೆ ಅರ್ಥದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ’ .

l ದೂರು: ಪ್ರಶ್ನೆ ಸಂಖ್ಯೆ 53ರಲ್ಲಿ ‘ಚಾಮುಂಡರಾಯ ಪುರಾಣ’ ಎಂದು ಬರೆಯಲಾಗಿದೆ. ಈ ಕೃತಿಯನ್ನು ನಮಗೆ ‘ಚಾವುಂಡರಾಯ ಪುರಾಣ’ವೆಂದು ಓದಿಸಿದ್ದು ಮತ್ತು ನಾವು ಓದಿದ್ದು ಹೀಗೆಲ್ಲಾ ನಮಗೆ ಅಕ್ಷರ ದೋಷಗಳ ಮೂಲಕ ‘ಮುಂಡಾ’ಯಿಸಲಾಗಿದೆ.

ಕೆಇಎ: ‘ಚಾಮುಂಡರಾಯ’ ಮತ್ತು ‘ಚಾವುಂಡರಾಯ’ ಎರಡು ಚಾಲ್ತಿಯಲ್ಲಿರುವ ಪದಗಳಾಗಿವೆ .

l ದೂರು: ಪ್ರಶ್ನೆ ಸಂಖ್ಯೆ 74ರ ಸರಿಯಾದ ಹೊಂದಾಣಿಕೆಯನ್ನು ಗುರುತಿಸಲು ಸೂಚಿಸಿದ್ದಾರೆ. ದುರಂತ ಅಂದರೆ ಸರಿ ಉತ್ತರದ ಆಯ್ಕೆಯಲ್ಲಿನ ಲೇಖಕರ ಹೆಸರೇ ತಪ್ಪಾಗಿದೆ. ನಮಗೆ ಲೇಖಕ ರಾಘವೇಂದ್ರ ಖಾಸನೀಸ ಗೊತ್ತಿತ್ತು. ‘ನಾಘವೇಂದ್ರ ಖಾಸನೀಸ’ ಗೊತ್ತಿರಲಿಲ್ಲ.

l ದೂರು: ಪ್ರಶ್ನೆ ಸಂಖ್ಯೆ 121ರಲ್ಲಿಯೂ ಜೀ.ಶಂ.ಪರಮಶಿವಯ್ಯನವರ ಹೆಸರನ್ನು ‘ಜೀ.ಕಂ. ಪರಮಶಿವಯ್ಯ’ ಬರೆದಿದ್ದಾರೆ.

ಕೆಇಎ(ಒಂದೇ ಉತ್ತರ): ಪ್ರಶ್ನೆಪತ್ರಿಕೆಯಲ್ಲಿ ಒಂದೆರಡು ಕಡೆ ಕಾಗುಣಿತ ದೋಷಗಳಿದ್ದು, ಮೌಲ್ಯಮಾಪನದ ಸಮಯದಲ್ಲಿ ತಜ್ಞರ ವರದಿಯಂತೆ ಕ್ರಮವಹಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.