ADVERTISEMENT

ಬೇಡಿಕೆಗಳ ಕುರಿತು 18ರಂದು ವೈದ್ಯರು–ಸಚಿವರ ನಡುವೆ ಮತ್ತೊಂದು ಸುತ್ತಿನ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 11:11 IST
Last Updated 15 ಸೆಪ್ಟೆಂಬರ್ 2020, 11:11 IST
ಪ್ರತಿಭಟನಾ ನಿರತ ವೈದ್ಯರ ಪ್ರಾತಿನಿಧಿಕ ಚಿತ್ರ
ಪ್ರತಿಭಟನಾ ನಿರತ ವೈದ್ಯರ ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಸರ್ಕಾರಿ ವೈದ್ಯಾಧಿಕಾರಿಗಳ ಬೇಡಿಕೆಯ ಕುರಿತು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಜೊತೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿ ಸಂಘದ ಪದಾಧಿಕಾರಿಗಳು ನಡೆಸಿದ ಸಭೆ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ.

ಸಭೆಯ ಬಳಿಕ ಮಾತನಾಡಿದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಜಿ.ಎ. ಶ್ರೀನಿವಾಸ್, ‘ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳ ಕುರಿತು ಸಚಿವರುಗಳು ನೀಡಿದ ಭರವಸೆಯ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿರುವ ಸಂಘದ ಪದಾಧಿಕಾರಿಗಳ ಜೊತೆ ವಿಚಾರ ವಿನಿಮಯ ಮಾಡಿಕೊಂಡ ಬಳಿಕ ಇದೇ 18ರಂದು ಮತ್ತೊಮ್ಮೆ ಸಚಿವರ ಜೊತೆ ಚರ್ಚಿಸುತ್ತೇವೆ. ಅಲ್ಲಿಯವರೆಗೆ ಎಲ್ಲ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸುವ ಮೂಲಕ ‘ಸಹಕಾರ’ ಮುಷ್ಕರ ಮುಂದುವರಿಯಲಿದೆ’ ಎಂದರು.

‘ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ, ಈ ಬಗ್ಗೆ ಸಂಘದ ಎಲ್ಲ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕವಷ್ಟೆ ನಮ್ಮ ತೀರ್ಮಾನವನ್ನು ತಿಳಿಸುತ್ತೇವೆ. ಅಲ್ಲದೆ, ಮುಂದೇನು ಮಾಡಬೇಕು ಎಂಬ ಬಗ್ಗೆಯೂ ಅಂದಿನ ಸಭೆಯಲ್ಲಿ ತೀರ್ಮಾನಕ್ಕೆ ಬರುತ್ತೇವೆ’ ಎಂದರು.

ADVERTISEMENT

ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ವೈದ್ಯರ ಸೇವೆಯನ್ನು ಸರ್ಕಾರ ಆದ್ಯತೆಯ ಮೇಲೆ ಪರಿಗಣಿಸಲಿದೆ. ವೇತನ ಹೆಚ್ಚಿಸಬೇಕು ಎಂಬ ಅವರ ಬೇಡಿಕೆಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ’ ಎಂದರು.

ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಕೋವಿಡ್‌ ಕರ್ತವ್ಯದಲ್ಲಿ ಮುಂಚೂಣಿ ಸೇನಾನಿಗಳಾಗಿರುವ ವೈದ್ಯರ ಸೇವೆಯ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ವೇತನ ಪರಿಷ್ಕರಿಬೇಕೆಂಬ ಅವರ ಬೇಡಿಕೆಗಳ ಬಗ್ಗೆ ಸಂಘದ ಪದಾಧಿಕಾರಿಗಳ ಜೊತೆ ವಿಸ್ಕೃತವಾಗಿ ಚರ್ಚೆ ನಡೆಸಿದ್ದೇವೆ. ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಅವರಿಗೆ ವಿವರಿಸಿದ್ದೇವೆ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಅವರು ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳಿಗೆ ಸಹಮತ ವ್ಯಕ್ತಪಡಿಸುವ ವಿಶ್ವಾಸವಿದೆ’ ಎಂದರು.

‘ವೈದ್ಯರ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ಕೆಲವು ಪ್ರಸ್ತಾವಗಳನ್ನು ಅವರ ಮುಂದಿಟ್ಟಿದ್ದೇವೆ. ಆ ಬಗ್ಗೆ ಸಂಘದ ಜಿಲ್ಲಾಮಟ್ಟದ ಪದಾಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ಅವರು ಹೇಳಿದ್ದಾರೆ. ಮುಷ್ಕರ ವಾಪಸು ಪಡೆದು, ಎಂದಿನಂತೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವಂತೆ ಅವರ ಬಳಿ ಮನವಿ ಮಾಡಿದ್ದೇವೆ’ ಎಂದೂ ಅವರು ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ‘ವೈದ್ಯ ಸಂಘದ ಪದಾಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಆರ್ಥಿಕ ದುಸ್ಥಿತಿ ಮತ್ತು ಆರೋಗ್ಯದ ತುರ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಜೊತೆ ಕೈಜೋಡಿಸುವಂತೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದರು.

‘ಆರ್ಥಿಕ ಇತಿಮಿತಿಯಲ್ಲಿ ಅವರ ಬೇಡಿಕೆಗಳನ್ನು ಈಡೇಡಿಸಲು ಸರ್ಕಾರ ಬದ್ಧವಾಗಿದೆ. ಒಟ್ಟಿನಲ್ಲಿ ಸಭೆ ಫಲಪ್ರದವಾಗಿದೆ. ಹೀಗಾಗಿ, ವೈದ್ಯಾಧಿಕಾರಿಗಳು ಮುಷ್ಕರ ವಾಪಸು ಪಡೆಯುವ ನಂಬಿಕೆ ಇದೆ’ ಎಂದೂ ಸುಧಾಕರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.