ADVERTISEMENT

ವಿಧಾನಸಭೆಯಲ್ಲಿ ಮಸೂದೆ ಮಂಡನೆ: ಮತಾಂತರ ಕಾಯ್ದೆ ಏನು ಎತ್ತ?

ವಿಧಾನಮಂಡಲ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 4:20 IST
Last Updated 22 ಡಿಸೆಂಬರ್ 2021, 4:20 IST
ವಿಧಾನಮಂಡಲ ಅಧಿವೇಶನ
ವಿಧಾನಮಂಡಲ ಅಧಿವೇಶನ   

ಬೆಳಗಾವಿ: ಮತಾಂತರ ಆಗಿರುವ ಅಥವಾ ಮಾಡಿರುವ ಬಗ್ಗೆ ರಕ್ತಸಂಬಂಧಿಗಳಲ್ಲದೇ ಸಹವರ್ತಿ ಅಥವಾ ಸಹೋದ್ಯೋಗಿಯಾದವರೂ ದೂರು ಕೊಡಲು ಸರ್ಕಾರ ಮಂಡಿಸಿರುವ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಚಿವ ಸಂಪುಟ ಸಭೆಗೆ ಮಂಡಿಸಿದ್ದ ಕರಡು ಮಸೂದೆಯಲ್ಲಿ ರಕ್ತಸಂಬಂಧಿ ಅಥವಾ ಮದುವೆಯಾದವರು ದೂರು ಸಲ್ಲಿಸಲು ಅವಕಾಶ ಇತ್ತು. ಅದನ್ನು ಅಧಿಕೃತ ಮಸೂದೆಯಲ್ಲಿ ಬದಲಾಯಿಸಲಾಗಿದೆ.

ಮತಾಂತರಕ್ಕೆ 60 ದಿನಗಳ ಮುನ್ನ ಅರ್ಜಿ ಸಲ್ಲಿಸಬೇಕೆಂಬ ಷರತ್ತನ್ನು 30 ದಿನಗಳಿಗೆ ಇಳಿಸಲಾಗಿದೆ. ಹಾಗೆಯೇ, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿಯಲ್ಲಿ ಮತಾಂತರಕ್ಕೆ ಅರ್ಜಿ ಸಲ್ಲಿಸಿದವರ ವಿವರವನ್ನು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಬೇಕೆಂಬ ಸೂಚಿಸಲಾಗಿದೆ. ಒಂದು ವೇಳೆ ಯಾರಾದರೂ ಆಕ್ಷೇಪಣೆ ಸಲ್ಲಿಸಿದಲ್ಲಿ ಕಂದಾಯ ಅಥವಾ ಸಮಾಜ ಕಲ್ಯಾಣ ಅಧಿಕಾರಿಯಿಂದ ವಿಚಾರಣೆ ನಡೆಸಲು ಮಂಡಿಸಲಾದ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೂರು ಪ್ರಮುಖ ಬದಲಾವಣೆಗಳು ಅಧಿಕೃತ ಮಸೂದೆಯಲ್ಲಿವೆ.

ADVERTISEMENT

ಹೆಸರು: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ–2021

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1973ರಲ್ಲಿ ಏನೇ ಉಲ್ಲೇಖವಿದ್ದರೂ ಹೊಸ ಕಾಯ್ದೆ ಅನ್ವಯ ಪ್ರತಿಯೊಂದು ಮತಾಂತರವೂ ಸಂಜ್ಞೇಯ ಅಪರಾಧ ಹಾಗೂ ಜಾಮೀನು ರಹಿತ ಪ್ರಕರಣವಾಗಲಿದೆ.

ಉದ್ದೇಶ: ಇತ್ತೀಚಿನ ವರ್ಷಗಳಲ್ಲಿ ರಾಜ್ಯವು ಆಮಿಷ, ಒತ್ತಾಯ, ಬಲವಂತದ ಮೂಲಕ ಮಾಡಲಾಗುತ್ತಿರುವ ಮತಾಂತರ ಹಾಗೂ ಸಾಮೂಹಿಕ ಮತಾಂತರದ ಘಟನೆಗಳು ರಾಜ್ಯದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿವೆ. ಅಂತಹ ಘಟನೆಗಳನ್ನು ತಡೆಯಲು ಮತ್ತು ಅಂತಹ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಶಿಕ್ಷಿಸುವ ಕಾರಣಕ್ಕೆ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ನಿಷೇಧಿಸುವುದಕ್ಕಾಗಿ ಈ ಮಸೂದೆ.

ಆಮಿಷ ಎಂದರೆ:

* ನಗದು ಅಥವಾ ಉಡುಗೊರೆ, ಪ್ರತಿಫಲ, ಸುಲಭ ಹಣ ನೀಡುವುದು.

* ಧಾರ್ಮಿಕ ಸಂಸ್ಥೆ ನಡೆಸುವ ಶಾಲೆ, ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ.

* ಮದುವೆಯಾಗುವುದಾಗಿ ವಾಗ್ದಾನ ಮಾಡುವುದು ಅಥವಾ ಉತ್ತಮ ಜೀವನ ಶೈಲಿ, ದೈವಿಕ ಸಂತೋಷ, ಯಾವುದೇ ಧರ್ಮದ ಪದ್ಧತಿ, ಸಂಪ್ರದಾಯಗಳು ಅಥವಾ ಆಚರಣೆಗಳನ್ನು ಇನ್ನೊಂದು ಧರ್ಮಕ್ಕೆ ಎದುರಾಗಿ ಧಕ್ಕೆಯಾಗುವ ರೀತಿಯಲ್ಲಿ ಚಿತ್ರಿಸುವುದು ಅಥವಾ ಒಂದು ಧರ್ಮಕ್ಕೆ ವಿರುದ್ಧವಾಗಿ ಮತ್ತೊಂದು ಧರ್ಮವನ್ನು ವೈಭವೀಕರಿಸುವುದು

ಮತಾಂತರ ಎಂದರೆ:

* ಯಾವುದೇ ವ್ಯಕ್ತಿಯು ತನ್ನ ಸ್ವಂತ ಧರ್ಮ ತ್ಯಜಿಸಿ ಮತ್ತೊಂದು ಧರ್ಮ ಅಳವಡಿಸಿಕೊಳ್ಳುವುದು

ಮತಾಂತರ ಮಾಡುವವನು ಎಂದರೆ: ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರದ ಕಾರ್ಯವನ್ನು ನಿರ್ವಹಿಸುವ ಹಾಗೂ ಪಾದ್ರಿ, ಅರ್ಚಕ, ಪುರೋಹಿತ, ಪಂಡಿತ, ಮೌಲ್ವಿ ಅಥವಾ ಮುಲ್ಲಾ

* ಮತಾಂತರದ ಏಕೈಕ ಉದ್ದೇಶದಿಂದ ಒಂದು ಧರ್ಮದ ಪುರುಷನು ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಅಥವಾ ಮಹಿಳೆಯು ಪುರುಷನೊಂದಿಗೆ ಮದುವೆಯಾದರೆ ವಿವಾಹಕ್ಕೆ ಮುಂಚೆ ಅಥವಾ ನಂತರ ಮತಾಂತರಗೊಂಡಲ್ಲಿ ಅಂತಹ ಮದುವೆಯನ್ನು ಕೌಟುಂಬಿಕ ನ್ಯಾಯಾಲಯವು ಅಸಿಂಧು ಎಂದು ಘೋಷಿಸಬಹುದು. ಕೌಟುಂಬಿಕ ನ್ಯಾಯಾಲಯ ಸ್ಥಾಪಿಸದೇ ಇದ್ದಲ್ಲಿ ಪ್ರತಿವಾದಿಯು ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ವಿಚಾರಣೆ ನಡೆಸಬಹುದು.

ಯಾರು ದೂರು ಸಲ್ಲಿಸಬಹುದು:

* ಮತಾಂತರಗೊಂಡ ವ್ಯಕ್ತಿ, ಆತನ ಪೋಷಕರು, ಸೋದರ, ಸೋದರಿ, ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಸಂಬಂಧಿಯಾದ ವ್ಯಕ್ತಿಗಳು ಎಂಬುದು ಕರಡು ಮಸೂದೆಯಲ್ಲಿತ್ತು.

* ಮಂಡನೆಯಾದ ಮಸೂದೆಯಲ್ಲಿ ಸಹವರ್ತಿ ಅಥವಾ ಸಹೋದ್ಯೋಗಿಯಾದ ಇತರೆ ಯಾವುದೇ ವ್ಯಕ್ತಿ ಎಂಬುದನ್ನು ಸೇರ್ಪಡೆ ಮಾಡಲಾಗಿದೆ.

ಶಿಕ್ಷೆ ಮತ್ತು ದಂಡ:

* ಆಮಿಷ, ಬಲವಂತ, ಅನುಚಿತ ಪ್ರಭಾವದ ಮೂಲಕ ಮತಾಂತರ ಮಾಡಿದ, ಮಾಡಿಸುವ ವ್ಯಕ್ತಿಗೆ ಮೂರು ವರ್ಷದಿಂದ ಐದು ವರ್ಷದ ಅವಧಿಯವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹25 ಸಾವಿರ ದಂಡ

* ಅಪ್ರಾಪ್ತ, ಅಸ್ವಸ್ಥಚಿತ್ತದ ವ್ಯಕ್ತಿ, ಮಹಿಳೆ, ಪರಿಶಿಷ್ಟ ಜಾತಿ/ಪಂಗಡದ ವ್ಯಕ್ತಿಗಳನ್ನು ಮತಾಂತರ ಮಾಡಿದರೆ ಮೂರು ವರ್ಷದಿಂದ 10 ವರ್ಷಗಳವರೆಗೆ ಜೈಲು ಮತ್ತು ₹50 ಸಾವಿರ ದಂಡ

* ಇಬ್ಬರಿಗಿಂತ ಹೆಚ್ಚಿನ ಜನರನ್ನು ಸಾಮೂಹಿಕವಾಗಿ ಮತಾಂತರ ಮಾಡಿದರೆ ಮೂರು ವರ್ಷದಿಂದ 10 ವರ್ಷಗಳಿವರೆಗೆ ಜೈಲು ಮತ್ತು ₹1 ಲಕ್ಷ ದಂಡ

* ಎರಡನೇ ಬಾರಿ ಮತಾಂತರದ ಅಪರಾಧ ಎಸಗಿದರೆ ಐದು ವರ್ಷಕ್ಕೆ ಕಡಿಮೆ ಇರದಂತೆ ಜೈಲು ಶಿಕ್ಷೆ ಹಾಗೂ ₹2 ಲಕ್ಷದವರೆಗೆ ದಂಡ

* ಪರಿಶಿಷ್ಟ ಜಾತಿ/ ಪಂಗಡದವರು ಆಮಿಷದ ಮತಾಂತರಕ್ಕೆ ಒಳಗಾದರೆ ಮತಾಂತರಗೊಂಡ ವ್ಯಕ್ತಿಯು ಮೊದಲು ಪಡೆಯುತ್ತಿದ್ದ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಪಡೆಯುತ್ತಿದ್ದ ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಹಕ್ಕನ್ನು ಕಳೆದಕೊಳ್ಳಬೇಕಾಗುತ್ತದೆ. ಅದಕ್ಕಾಗಿ, ಮತಾಂತರಗೊಂಡ ವ್ಯಕ್ತಿಯನ್ನು ಪ್ರತ್ಯೇಕ ವರ್ಗೀಕರಣ ಮಾಡಬೇಕಾಗುತ್ತದೆ.

ಮತಾಂತರ ಪ್ರಕ್ರಿಯೆ:

* ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿ ಕನಿಷ್ಠ 30ದಿನದೊಳಗೆ(ಕರಡು ಪ್ರತಿಯಲ್ಲಿ 60 ದಿನ ಇತ್ತು) ತನ್ನ ಜಿಲ್ಲೆಯ ಜಿಲ್ಲಾಧಿಕಾರಿಗೆ ಅಥವಾ ಹೆಚ್ಚುವರಿ ಜಿಲ್ಲಾಧಿಕಾರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

* ಮತಾಂತರ ಮಾಡುವವರು ಅಥವಾ ವಿಧಿವಿಧಾನ ನೆರವೇರಿಸುವವರು ತಾನು ಪ್ರತಿನಿಧಿಸುವ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿಗದಿತ ನಮೂನೆಯಲ್ಲಿ 30ದಿನಗಳ ಮೊದಲು ನೋಟಿಸ್ ನೀಡಬೇಕು

* ಅರ್ಜಿ ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿಯ ಸೂಚನಾ ಫಲಕದಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಆಕ್ಷೇಪಣೆ ಬಂದರೆ ಮತಾಂತರದ ನೈಜ ಆಶಯ, ಕಾರಣದ ಬಗ್ಗೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಬೇಕು( ವಿಚಾರಣೆಯನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ)

* ಮತಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿರುವುದು ವಿಚಾರಣೆ ವೇಳೆ ದೃಢಪಟ್ಟರೆ ಕ್ರಿಮಿನಲ್‌ ಪ್ರಕರಣ ಹೂಡುವಂತೆ ಸಂಬಂಧಿಸಿದ ಪೊಲೀಸ್‌ ಪ್ರಾಧಿಕಾರಿಗೆ ಸೂಚಿಸತಕ್ಕದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.