ADVERTISEMENT

ಗೂಂಡಾಗಿರಿಯಿಂದ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 16:00 IST
Last Updated 9 ಫೆಬ್ರುವರಿ 2021, 16:00 IST
ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯರು
ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯರು   

ಬೆಂಗಳೂರು: ಬಿಜೆಪಿ ಸರ್ಕಾರ ಸೋಮವಾರ ವಿಧಾನ ಪರಿಷತ್‌ನಲ್ಲಿ ಗೂಂಡಾಗಿರಿ ಪ್ರದರ್ಶಿಸಿ ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ–2020’ಕ್ಕೆ ಅಂಗೀಕಾರ ಪಡೆದಿದೆ. ಸಭಾಪತಿಯವರ ಪೀಠದಲ್ಲಿದ್ದ ಉಪ ಸಭಾಪತಿ ಕೂಡ ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮಂಗಳವಾರ ವಿಧಾನಸೌಧದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯರು, ‘ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆಯುತ್ತಿದ್ದ ಚರ್ಚೆಯನ್ನು ದಿಢೀರ್‌ ಮೊಟಕುಗೊಳಿಸಿ ಮಸೂದೆಯನ್ನು ಮಂಡಿಸಲಾಯಿತು. ಮತ ವಿಭಜನೆ ಬೇಡಿಕೆಯನ್ನು ಉಪ ಸಭಾಪತಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಈ ಎಲ್ಲ ಬೆಳವಣಿಗೆಗಳ ಕುರಿತು ರಾಜ್ಯಪಾಲರಿಗೆ ದೂರು ನೀಡುತ್ತೇವೆ’ ಎಂದರು.

ಸಿ.ಎಂ.ಇಬ್ರಾಹಿಂ ಮಾತನಾಡಿ, ‘ಮಸೂದೆ ಕುರಿತು ಚರ್ಚಿಸಲು ಅವಕಾಶ ನೀಡಲಿಲ್ಲ. ಬಿಜೆಪಿ ಸದಸ್ಯರು ಗೂಂಡಾಗಿರಿ ಪ್ರದರ್ಶಿಸಿ ಕಾಂಗ್ರೆಸ್‌ ಸದಸ್ಯರನ್ನು ಬೆದರಿಸಿದರು. ಅವರ ಕಡೆ ಇನ್ನೂ ನಾಲ್ಕು ಜನ ಹೆಚ್ಚಾದರೆ ನಮ್ಮ ಮೇಲೆ ಹಲ್ಲೆ ನಡೆಸಿ ಹೊರ ಹಾಕಲೂಬಹುದು’ ಎಂದು ದೂರಿದರು.

ADVERTISEMENT

ಬೇರೆ ಬೇರೆ ಸಂದರ್ಭಗಳಲ್ಲಿ ಮಧ್ಯಪ್ರವೇಶ ಮಾಡುವ ರಾಜ್ಯಪಾಲರು ಈ ವಿಚಾರದಲ್ಲಿ ತಕ್ಷಣ ಕ್ರಮ ಜರುಗಿಸಬೇಕು. ಮಸೂದೆಯ ವಿರುದ್ಧ ಕಾನೂನು ಹೋರಾಟ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

ಆರ್‌.ಬಿ.ತಿಮ್ಮಾಪೂರ ಮಾತನಾಡಿ, ‘ಮಸೂದೆ ಜನವಿರೋಧಿ ಆಗಿರುವ ಕಾರಣದಿಂದಲೇ ಬಿಜೆಪಿ ಸರ್ಕಾರ ಚರ್ಚೆಗೆ ಅವಕಾಶ ನೀಡಿಲ್ಲ. ಮಠ, ಮಂದಿರಗಳಲ್ಲಿ ಕುಳಿತು ಮಾಡಬೇಕಾದ ಕೆಲಸವನ್ನು ವಿಧಾನಸೌಧದಲ್ಲಿ ಕುಳಿತು ಮಾಡುತ್ತಿದ್ದಾರೆ. ಮಸೂದೆ ಬಳಸಿಕೊಂಡು ದಮನಿತ ಜಾತಿಗಳ ಮೇಲೆ ದೌರ್ಜನ್ಯ ನಡೆಸುವ ಸಂಚು ಮಾಡಲಾಗಿದೆ’ ಎಂದು ಆರೋಪಿಸಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ, ನಜೀರ್ ಅಹ್ಮದ್‌, ಪಿ.ಆರ್‌. ರಮೇಶ್ ಮಾತನಾಡಿದರು. ಬಿ.ಕೆ. ಹರಿಪ್ರಸಾದ್, ಯು.ಬಿ. ವೆಂಕಟೇಶ್, ಮೋಹನ್‌ ಕೊಂಡಜ್ಜಿ, ಕೆ. ಹರೀಶ್‌ ಕುಮಾರ್‌ ಸೇರಿ ಹಲವು ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.