ಬೆಂಗಳೂರು: ‘ಜಾನುವಾರು ಹತ್ಯೆ ಪ್ರತಿಬಂಧಕ (ನಿಷೇಧ) ಕಾಯ್ದೆಯನ್ನು ಸಂಪೂರ್ಣ ರದ್ದು ಮಾಡುವುದಿಲ್ಲ. ಕಾಯ್ದೆಯಲ್ಲಿನ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ’ ಎಂದು ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರೈತರ ಅನುಕೂಲಕ್ಕಾಗಿ ನಿಯಮಗಳ ಸಡಿಲಿಕೆ ಅಗತ್ಯವಿದೆ. ಅದನ್ನು ಮಾಡುತ್ತೇವೆ’ ಎಂದು ಹೇಳಿದರು.
ಬಿಜೆಪಿಯವರು ರೈತರಿಗೆ ಅನನುಕೂಲ ಆಗುವ ರೀತಿಯಲ್ಲಿ ಕಾಯ್ದೆ ರೂಪಿಸಿದ್ದರು. ಇದರಿಂದ ಬಿಜೆಪಿಯವರು ಮತ್ತು ಅವರ ಪರಿವಾರದ ಸಂಘಟನೆಗಳು ವಸೂಲಿಗೆ ಇಳಿದಿದ್ದರು ಎಂದು ರಿಜ್ವಾನ್ ದೂರಿದರು.
ಈ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಪ್ರಾಣಿಗಳನ್ನು ಕೊಲ್ಲಬಾರದು. ನಾನು ಕೂಡಾ ಪ್ರಾಣಿ ಹತ್ಯೆ ನಿಷೇಧದ ಪರ ಇದ್ದೇನೆ. ಆದರೆ, ಸಂಪುಟದಲ್ಲಿ ಈ ಬಗ್ಗೆ ಮಾತನಾಡುವುದಿಲ್ಲ’ ಎಂದು ತಿಳಿಸಿದರು.
‘ಗೋವು ಮಾತ್ರವಲ್ಲ 84 ಲಕ್ಷ ಜೀವ ರಾಶಿಯನ್ನು ಹತ್ಯೆ ಮಾಡಬಾರದು ಎಂಬುದು ನನ್ನ ನಿಲುವು. ಅವುಗಳಿಗೆಲ್ಲ ಜೀವಿಸುವ ಹಕ್ಕು ಇದೆ. ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ಯಾವ ಅರ್ಥದಲ್ಲಿ ಹಸು ಕಡಿಯುವ ವಿಚಾರದ ಬಗ್ಗೆ ಮಾತನಾಡಿದ್ದಾರೋ ಗೊತ್ತಿಲ್ಲ’ ಎಂದರು.
ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಗೋಹತ್ಯೆ ನಿಷೇಧ ಆಗಬೇಕು ಎಂಬುದು ಜನರ ಆಶಯ. ಅದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಕಾಯ್ದೆ ತಂದಿತ್ತು. ಕಾಂಗ್ರೆಸ್ ಸರ್ಕಾರ ಕಾಯ್ದೆಯನ್ನು ಹಿಂಪಡೆಯಲು ಹೊರಟಿರುವುದು ಖಂಡನೀಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.