ಬೆಂಗಳೂರು: ಚುನಾಯಿತ ಪ್ರತಿನಿಧಿಗಳ ಪಕ್ಷಾಂತರ ದೊಡ್ಡ ಪಿಡುಗಾಗಿ ದೇಶವನ್ನು ಬಾಧಿಸುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯ ತಿದ್ದುಪಡಿ ಅಗತ್ಯ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರತಿಪಾದಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ 'ನವ ಭಾರತದಲ್ಲಿ ಮಾಧ್ಯಮಗಳ ಪಾತ್ರ' ಕುರಿತು ಮಾತನಾಡಿದ ಅವರು, 'ಪಕ್ಷಾಂತರಿಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿರುವ ಲೋಪಗಳನ್ನು ಗುರುತಿಸಿ, ಸೂಕ್ತ ತಿದ್ದುಪಡಿಗಳನ್ನು ತರಬೇಕು' ಎಂದರು.
ಪಕ್ಷಾಂತರದಿಂದಾಗಿ ದೇಶದ ರಾಜಕಾರಣದಲ್ಲಿ ಮೌಲ್ಯಗಳ ಕುಸಿತವಾಗುತ್ತಿದೆ. ಅದು ಕ್ರಮೇಣ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸುತ್ತಿದೆ. ರಾಜಕಾರಣದಲ್ಲಿ ಮೌಲ್ಯ ಕುಸಿತ ತಡೆಯುವ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ ಎಂದು ಹೇಳಿದರು.
ಪಕ್ಷಾಂತರ ಮಾಡುವವರು ಹುದ್ದೆಗೆ ರಾಜೀನಾಮೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಪುನರಾಯ್ಕೆ ಆಗುವವರೆಗೆ ಯಾವುದೇ ಹುದ್ದೆ ನೀಡಬಾರದು. ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಯ ಪ್ರಕರಣಗಳನ್ನು ಸಭಾಧ್ಯಕ್ಷರು ಮತ್ತು ನ್ಯಾಯಾಲಯಗಳು ಮೂರು ತಿಂಗಳೊಳಗೆ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಉಪ ರಾಷ್ಟ್ರಪತಿ ಹೇಳಿದರು.
ಶಾಸನಸಭೆಗಳ ಒಳಗಿನ ಮತ್ತು ಹೊರಗಿನ ನಡವಳಿಕೆಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸ್ವಯಂ ನೀತಿಸಂಹಿತೆ ಅಳವಡಿಸಿಕೊಳ್ಳಬೇಕು. ರಚನಾತ್ಮಕ ಚಟುವಟಿಕೆಗಳನ್ನು ಬೆಂಬಲಿಸುವ ಬದ್ಧತೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ತೋರಬೇಕು ಎಂದು ಸಲಹೆ ನೀಡಿದರು.
ಸಾಂವಿಧಾನಿಕ ಸಂಸ್ಥೆಗಳು, ಸಾಂವಿಧಾನಿಕ ಹುದ್ದೆಗಳ ಮೇಲಿನ ದಾಳಿ ಹಾಗೂ ಅವುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಿಲ್ಲಬೇಕು. ರಾಜಕೀಯದಲ್ಲಿರುವ ವ್ಯಕ್ತಿಗಳ ಕುಟುಂಬವನ್ನು ಗುರಿಯಾಗಿಸಿ ಟೀಕಾಪ್ರಹಾರ ನಡೆಸುವುದೂ ಕೊನೆಯಾಗಬೇಕು ಎಂದರು.
ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುವುದಕ್ಕೆ ಬದ್ಧತೆ ತೋರಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.