ಬೆಂಗಳೂರು: ‘ಈಗ ದೇಶದಲ್ಲಿ 18 ರಿಂದ 30 ವರ್ಷದೊಳಗಿನ ಯುವ ಜನರ ಸಂಖ್ಯೆ ಅಧಿಕ ಇದೆ. ಆದರೆ, ಇಂದಿನ ರಾಜಕಾರಣ ಮತ್ತು ನೀತಿಗಳು ಯುವ ಜನರ ಚಿಂತನೆಗಳಿಗೆ ‘ಕನೆಕ್ಟ್’ ಆಗುತ್ತಿಲ್ಲ. ನಾವೆಲ್ಲರೂ ರಾಜಕಾರಣಕ್ಕೆ ಬರಲು ಆಗುವುದಿಲ್ಲ. ಆದರೆ, ನಮ್ಮ ಕನಸಿನ ಭಾರತ ರೂಪುಗೊಳ್ಳಲು ಸಲಹೆಗಳು, ಪರಿಕಲ್ಪನೆ ಹಂಚಿಕೊಳ್ಳಲು ಒಂದು ವೇದಿಕೆಯನ್ನಾದರೂ ಕಲ್ಪಿಸಿ’.
ಇಂತಹದ್ದೊಂದು ಪ್ರಶ್ನೆ ಕೇಂದ್ರ ಮಾಹಿತಿ ಮತ್ತು ಪ್ರಸಾರ, ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರಿಗೆ ತೂರಿ ಬಂದಿದ್ದು, ‘ವಿಕಸಿತ್ ಭಾರತ್’ ಕುರಿತ ಸಂವಾದದಲ್ಲಿ. ನಗರದ ಚರ್ಚ್ ಸ್ಟ್ರೀಟ್‌ನ ‘ಬೀಹೈವ್’ನಲ್ಲಿ ಶುಕ್ರವಾರ ಸಂವಾದ ಹಮ್ಮಿಕೊಳ್ಳಲಾಗಿತ್ತು.
‘ಯಾವುದೇ ಪಕ್ಷ ಇರಲಿ ಅಲ್ಲಿ ನಮ್ಮ ವಯೋಮಾನದ ರಾಜಕಾರಣಿಗಳು ತೀರಾ ಕಡಿಮೆ. ಹೀಗಾಗಿ ನಮ್ಮ ಆಶಯಗಳು, ಆಕಾಂಕ್ಷೆಗಳು, ಕನಸುಗಳು ಯಾವುದೇ ಸರ್ಕಾರಗಳಲ್ಲಿ ಪ್ರತಿಬಿಂಬಿತವಾಗುತ್ತಿಲ್ಲ. ಯಾವುದೋ ಜಮಾನದ ಆಲೋಚನೆಗಳೇ ಪ್ರತಿಬಿಂಬಿತವಾಗುತ್ತಿವೆ’ ಎಂದು ಯುವಕರೊಬ್ಬರು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಅನುರಾಗ್ ಸಿಂಗ್, ‘ರಾಜಕಾರಣದಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ. ಆದರೆ ಯುವ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ನೀತಿಗಳನ್ನು ರೂಪಿಸಿ ಅದನ್ನು ಜಾರಿ ಮಾಡುವುದು ಮುಖ್ಯ. ಆ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ತಂತ್ರಜ್ಞಾನ, ನವೋದ್ಯಮ, ಡಿಜಿಟಲೀಕರಣ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ದೊಡ್ಡ ಪರಿವರ್ತನೆ ಆಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಎರಡು ಅಥವಾ ಮೂರನೇ ಸ್ಥಾನ ತಲುಪಲು ಯುವ ಜನತೆಯಿಂದಲೇ ಅಭಿಪ್ರಾಯ, ಸಲಹೆಗಳನ್ನು ಪಡೆಯುತ್ತಿದೆ. ಅದಕ್ಕೆ ಪೂರಕವಾಗಿ ನೀತಿ–ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ನಿಮ್ಮ ಕನಸುಗಳನ್ನು ಹಂಚಿಕೊಳ್ಳಲು ‘ಮೈಇಂಡಿಯಾ’ ಎಂಬ ಡಿಜಿಟಲ್ ವೇದಿಕೆಯೂ ಇದೆ ಎಂದು ವಿವರಿಸಿದರು.
* ‘ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಮ್ಮ ಭವಿಷ್ಯ ಸುರಕ್ಷಿತವೇ? ಮುಂದೆ ಉದ್ಯೋಗ ಸಿಗಬಲ್ಲದೆ? ಹಿಂದೆಲ್ಲ ದೇಶಕ್ಕಾಗಿ ಆಡಿದವರು ಕೆಲಸ ಇಲ್ಲದೇ ಕಷ್ಟಕ್ಕೆ ಸಿಲುಕಿದ್ದನ್ನು ನಾವು ನೋಡಿದ್ದೇವೆ. ಕೇಂದ್ರ ಸರ್ಕಾರ ಇದಕ್ಕಾಗಿ ಏನು ಮಾಡುತ್ತಿದೆ’ ಎಂಬ ಆತಂಕ ಭರಿತ ಪ್ರಶ್ನೆ ಕ್ರೀಡಾಪಟುವೊಬ್ಬರದಾಗಿತ್ತು.
ಇದಕ್ಕೆ ಉತ್ತರಿಸಿ ಸಚಿವರು, ‘ಹಿಂದೆ ಆ ಸಮಸ್ಯೆ ಇತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದರೆ ಮಾತ್ರ ಉದ್ಯೋಗ ಸಿಗುತ್ತಿತ್ತು. ಈಗ ದೇಶದಲ್ಲೇ ನಡೆಯುವ ಖೇಲೊ ಇಂಡಿಯಾ ಹಂತದ ಕ್ರೀಡೆಗಳಲ್ಲಿ ಪದಕ ಪಡೆದರೂ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಅರ್ಹರಾಗುತ್ತಾರೆ. ಖಾಸಗಿ ಕ್ಷೇತ್ರದವರೂ ಅರ್ಹ ಕ್ರೀಡಾಪಟುಗಳಿಗೆ ಉದ್ಯೋಗ ನೀಡಬೇಕು. ಕ್ರೀಡೆ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಧೈರ್ಯ ತುಂಬಿದರು.
‘ದೃಷ್ಟಿ ದೋಷವುಳ್ಳವರು ಮತ್ತು ಗಾಲಿ ಕುರ್ಚಿಗಳ ಮೂಲಕ ಕ್ರಿಕೆಟ್ ಆಡುವವರಿಗೆ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸ್ಟೇಡಿಯಂಗಳೇ ಸಿಗುತ್ತಿಲ್ಲ. ಇದಕ್ಕೆ ವ್ಯವಸ್ಥೆ ಮಾಡಬೇಕು’ ಎಂಬ ಮನವಿಯೂ ಕೇಳಿ ಬಂತು. ‘ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣವನ್ನು ನಿಮ್ಮ ಪಂದ್ಯಗಳಿಗೆ ಬಿಟ್ಟು ಕೊಡಲು ಸಿದ್ಧನಿದ್ದೇನೆ. ಅದರ ಉಪಯೋಗ ಪಡೆದುಕೊಳ್ಳಬಹುದು‘ ಎಂದು ಉತ್ತರಿಸಿದರು.
‘ಭ್ರಷ್ಟಾಚಾರರಹಿತ ಆಡಳಿತ ಮೋದಿ ಹೆಗ್ಗಳಿಕೆ’
‘ಭ್ರಷ್ಟಾಚಾರರಹಿತ ಅಭಿವೃದ್ಧಿಪರ ಆಡಳಿತವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹೆಗ್ಗಳಿಕೆ. 10 ವರ್ಷಗಳಲ್ಲಿ ಭ್ರಷ್ಟಾಚಾರದ ಕಪ್ಪು ಚುಕ್ಕೆ ಅಂಟಿಕೊಂಡಿಲ್ಲ ಮತ್ತು ಪಾರದರ್ಶಕತೆಯಿಂದ ನಡೆದುಕೊಂಡಿದೆ’ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು. ‘ಕಳೆದ 10 ವರ್ಷಗಳಲ್ಲಿ ದೇಶದ ಜಿಡಿಪಿ ಶೇ 4.5 ಇದ್ದದ್ದು ಶೇ 8.4 ಕ್ಕೆ ಏರಿದೆ. ಹಣ ದುಬ್ಬರ ಪ್ರಮಾಣ ಶೇ 12 ರಿಂದ ಶೇ 6.7 ಕ್ಕೆ ಇಳಿದಿದೆ. ವಿದೇಶಿ ವಿನಿಮಯ ಮೀಸಲು 270 ದಶಲಕ್ಷ ಡಾಲರ್‌ಗಳು ಇದ್ದದ್ದು 600 ದಶಲಕ್ಷ ಡಾಲರ್‌ಗಳಿಗೇರಿದೆ. ರಫ್ತು 2013 ರಲ್ಲಿ 300 ದಶಲಕ್ಷ ಡಾಲರ್ ಇತ್ತು. ಈಗ ಅದು 770 ದಶಲಕ್ಷ ಡಾಲರ್‌ಗಳಿಗೆ ಏರಿದೆ. ವಿದೇಶಿ ಹೂಡಿಕೆ 2013 ರಲ್ಲಿ 36 ದಶಲಕ್ಷ ಡಾಲರ್ ಇದ್ದದ್ದು ಈಗ 85 ದಶಲಕ್ಷ ಡಾಲರ್‌ಗಳಿಗೆ ಏರಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.