ಮೈಸೂರು: ‘ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರಲ್ಲಿ ಕ್ಷಮೆ ಕೋರುವೆ. ನಾನು ಹಗುರ ಮಾತು ಬಳಸಿಲ್ಲ, ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ಬೇಕಾದಂತೆ ತಿರುಚಿದ್ದರಿಂದ ಅಪಾರ್ಥವಾಗಿದೆ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮುಖಂಡರು ಇಲ್ಲಿನ ರಂಗಾ ಯಣದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ‘ಸ್ವಾಮೀಜಿ ಮಹಾಸಂತರು. ನನಗೆ ಬಹಳ ಗೌರವವಿದ್ದು, ಅವರ ಕ್ಷಮೆಯಾಚಿಸುತ್ತೇನೆ. ಆದರೆ, ಅವರ ಭಕ್ತರಲ್ಲಿ ಕ್ಷಮೆಯಾಚಿಸುವುದಿಲ್ಲ‘ ಎಂದರು.
‘ಸ್ವಾಮೀಜಿ ಬಗ್ಗೆ ಸುದ್ದಿವಾಹಿನಿಯೊಂದರಲ್ಲಿ ಹಗುರವಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿ, ಸಂಘದ ರಾಜ್ಯ ಸಮಿತಿ ಗೌರವಾಧ್ಯಕ್ಷ ಸಿ.ಜಿ.ಗಂಗಾಧರ್ ಕರೆಯಂತೆ ಕೆಲವರು ಮುತ್ತಿಗೆ ಹಾಕಲು ರಂಗಾಯಣ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆದರು. ಆಗ ಕೆಲಹೊತ್ತು ವಾಗ್ವಾದ ನಡೆಯಿತು.
‘ಕಾರ್ಯಪ್ಪ ಸ್ವಾಮೀಜಿ ವಿರುದ್ಧ ಮಾತನಾಡಿದ್ದಾರೆ. ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅವರನ್ನು ವಶಕ್ಕೆ ಪಡೆದರು. ರಂಗಾಯಣ ನಿರ್ದೇಶಕ ಸ್ಥಾನದಿಂದ ಕಾರ್ಯಪ್ಪ ಅವರನ್ನು ವಜಾಗೆ ಆಗ್ರಹಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಸೇರಿ ಹಲವು ಸಂಘ ಸಂಸ್ಥೆಗಳ ಒಕ್ಕೂಟದ ಪ್ರಮುಖರು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
5 ದಿನ ಗಡುವು: ‘ಐದು ದಿನದಲ್ಳಿ ನಿರ್ದೇಶಕ ಸ್ಥಾನದಿಂದ ಸರ್ಕಾರ ವಜಾ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಎಚ್ಚರಿಸಿದರು.
‘ಹೈದರಾಲಿ ದತ್ತಿ ನೀಡಿದ ದಾಖಲೆ ಇಲ್ಲ’
ಹಾಸನ: ‘ಮುಂದಿನ ವರ್ಷದಿಂದ ಬೇಲೂರಿನಲ್ಲಿ ಕುರಾನ್ ಪಠಣ ನಿಲ್ಲಿಸಲು ಸಂಕಲ್ಪ ಮಾಡಬೇಕು. ವಂದೇ ಮಾತರಂ ಗೀತೆ ಹಾಡದವರ ಕುರಾನ್ ಅನ್ನು ಚೆನ್ನಕೇಶವನ ದೇವಾಲಯದಲ್ಲಿ ಏಕೆ ಪಠಿಸಬೇಕು‘’ ಎಂದು ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದರು.
ಶುಕ್ರವಾರ ಇಲ್ಲಿ ‘ಬೇಲೂರು ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಚನ್ನಕೇಶವನ ಮುಂದೆ ನಿಂತು ಕುರಾನ್ ಪಠಿಸಿ ಅಲ್ಲಾ ಒಬ್ಬನೇ ದೇವರು ಎಂದು ಹೇಳುವುದು ಬೇಕೆ’ ಎಂದು ಪ್ರಶ್ನಿಸಿದರು.
‘ಚನ್ನಕೇಶವ ದೇವಸ್ಥಾನಕ್ಕೆ ಹೈದರಾಲಿಯು ದತ್ತಿ ನೀಡಿರುವ ಬಗ್ಗೆ ದಾಖಲೆಗಳಿಲ್ಲ. ಅದು ಸುಳ್ಳು. ಅದನ್ನು ಸೇರಿಸಿದ್ದು 1932 ರಲ್ಲಿ ಮಿರ್ಜಾ ಇಸ್ಮಾಯಿಲ್ ಮ್ಯಾನುವಲ್‌ನಲ್ಲಿ. 1117ರಲ್ಲಿ ಚನ್ನಕೇಶವ ದೇವಸ್ಥಾನ ನಿರ್ಮಾಣವಾದ ಬಳಿಕ ಎಷ್ಟೋ ಜನ ದತ್ತಿ, ದಾನ ನೀಡಿರುವ ಬಗ್ಗೆ ದಾಖಲೆಗಳಿವೆ. ಹೈದರಾಲಿ ದತ್ತಿ ನೀಡಿರುವುದಕ್ಕೆ ದಾಖಲೆ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.