ADVERTISEMENT

ವಸತಿ ಶಾಲೆಗೂ ಆರ್‌ಟಿಇ ಕಾಯ್ದೆ ಅನ್ವಯ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 15:35 IST
Last Updated 1 ಜೂನ್ 2024, 15:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ–2009ರ (ಅರ್‌ಟಿಐ) ಅಂಶಗಳು ವಸತಿ ಶಾಲೆಗಳಿಗೂ ಅನ್ವಯವಾಗುತ್ತವೆ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಈ ಸಂಬಂಧ ಮೈಸೂರಿನ, ‘ಜ್ಞಾನ ಸರೋವರ ಎಜುಕೇಷನ್‌ ಟ್ರಸ್ಟ್‌’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಐಸಿಎಸ್‌ಇ ಪಠ್ಯಕ್ರಮದ ಶಾಲೆ ನಡೆಸುತ್ತಿರುವ ಜ್ಞಾನ ಸರೋವರ ಎಜುಕೇಷನ್‌ ಟ್ರಸ್ಟ್‌; ಆರ್‌ಟಿಇ ಕಾಯ್ದೆಯಲ್ಲಿನ ನಿಯಮಗಳನ್ನು ಪಾಲನೆ ಮಾಡಿಲ್ಲ’ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ₹1.61 ಕೋಟಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಶಾಲೆಯ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

ADVERTISEMENT

‘ಆರ್‌ಟಿಇ ಕಾಯ್ದೆಯ ಅಧಿಸೂಚನೆಯನ್ನು 2012ರ ಏಪ್ರಿಲ್‌ 28ರಂದು ಹೊರಡಿಸಲಾಗಿದೆ. ಇದಾದ ನಂತರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು. ಆದರೆ ಪಡೆದಿಲ್ಲ. ಆ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ. ಹಾಗಾಗಿ, ಇಲಾಖೆ ವಿಧಿಸಿರುವ ದಂಡದ ಕ್ರಮ ಸರಿಯಾಗಿಯೇ ಇದೆ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ‘ಶಾಲೆ ಆರ್‌ಟಿಇ ಅಡಿ ಮಾನ್ಯತೆ ಪಡೆದಿಲ್ಲ. ಹಾಗಾಗಿ, ಅದರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು’ ಎಂದು ಕೋರಿ ಡಿ.ಬಾಲಕೃಷ್ಣಪ್ಪ ಮತ್ತು ವಿಲಿಯಂ ಯೇಸುದಾಸ್‌ ಎಂಬುವರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಇದನ್ನು ಆಧರಿಸಿ ಇಲಾಖೆ ಶಾಲೆಯ ಮುಖ್ಯಸ್ಥರಿಗೆ ನೋಟಿಸ್‌ ನೀಡಿತ್ತು. ಆದರೆ, ಶಾಲಾ ಆಡಳಿತ ಮಂಡಳಿ ಪರ ಯಾರೂ ಹಾಜರಾಗಿರಲಿಲ್ಲ. ತದನಂತರ 2017ರ ಜನವರಿ 12ರಂದು ಶಿಕ್ಷಣ ಇಲಾಖೆ ಮತ್ತೊಂದು ಷೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಇದಕ್ಕೆ ಶಾಲೆಯ ಆಡಳಿತ ಮಂಡಳಿ, ‘ನಮ್ಮದು ವಸತಿ ಶಾಲೆ. ವಸತಿ ಶಾಲೆ ಆರ್‌ಟಿಇ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಉತ್ತರಿಸಿತ್ತು. ಇದಕ್ಕೆ ಪ್ರತಿಯಾಗಿ ಇಲಾಖೆ, ‘ಶಾಲೆಯು ಆರ್‌ಟಿಇ ಕಾಯ್ದೆಯನ್ನು ಪಾಲನೆ ಮಾಡಿಲ್ಲ’ ಎಂಬ ಕಾರಣಕ್ಕೆ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್‌ ಮೆಟ್ಟಿಲೇರಿ‌ತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.