ADVERTISEMENT

ಪ್ರಾಂಶುಪಾಲರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ

ಆಯ್ಕೆಯಾದವರು ಐದು ವರ್ಷಗಳ ನಂತರ ತ್ಯಜಿಸಬೇಕಿದೆ ಸ್ಥಾನ

ಚಂದ್ರಹಾಸ ಹಿರೇಮಳಲಿ
Published 10 ಜುಲೈ 2024, 1:05 IST
Last Updated 10 ಜುಲೈ 2024, 1:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನೇರ ಪರೀಕ್ಷೆ ಮೂಲಕ ಭರ್ತಿ ಮಾಡುತ್ತಿರುವ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳು ಐದು ವರ್ಷಗಳ ಗುತ್ತಿಗೆ ಅವಧಿಗೆ ಮಾತ್ರ ಸೀಮಿತ.

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ 310 ಪ್ರಾಂಶುಪಾಲರ ಹುದ್ದೆಗಳ ನೇರ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸಿದೆ. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ನೇಮಕಾತಿ ನಿಯಮದಂತೆ ಐದು ವರ್ಷಗಳ ನಂತರ ಪ್ರಾಂಶುಪಾಲರ ಸ್ಥಾನ ತ್ಯಜಿಸಿ, ಹಿಂದೆ ತಾವು ಕಾರ್ಯನಿರ್ವಹಿಸುತ್ತಿದ್ದ ಕರ್ತವ್ಯಕ್ಕೆ ಮರಳಬೇಕಾಗುತ್ತದೆ. 

ADVERTISEMENT

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಜತೆಗೆ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್‌ ಕಾಲೇಜುಗಳು ಸೇರಿದಂತೆ ಯಾವುದೇ ಪದವಿ ಕಾಲೇಜಿನಲ್ಲಿ 15 ವರ್ಷಗಳ ಬೋಧನಾನುಭವ ಹೊಂದಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಎಂಜಿನಿಯರಿಂಗ್ ಸೇರಿದಂತೆ ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪೂರ್ಣಕಾಲಿಕ ಬೋಧಕರಾಗಿ ಕೆಲಸ ಮಾಡಿದ ಅನುಭವವಿಲ್ಲ. ಬಹಳಷ್ಟು ಅಧ್ಯಾಪಕರು ಒಂದೇ ಕಾಲೇಜಿಗೆ ಸೀಮಿತವಾಗಿಲ್ಲ. ಒಂದೇ ವೃತ್ತಿಯನ್ನು ನಂಬಿಕೊಂಡಿಲ್ಲ. ಅಂಥವರು ಪ್ರಾಂಶುಪಾಲರ ಹುದ್ದೆಗೆ ಆಯ್ಕೆಯಾದರೆ ಐದು ವರ್ಷಗಳ ನಂತರ ಏನು ಮಾಡಬೇಕು ಎನ್ನುವ ಅತಂತ್ರ ಸ್ಥಿತಿಯನ್ನು ಉನ್ನತ ಶಿಕ್ಷಣ ಇಲಾಖೆ ಸೃಷ್ಟಿಸಿದೆ. 

‘ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದೆ. ಪಿಎಚ್‌.ಡಿಯನ್ನೂ ಪೂರೈಸಿರುವೆ. ಸರ್ಕಾರಿ ಕಾಲೇಜು ಪ್ರಾಧ್ಯಾಪಕನಾಗಲು ಸಾಧ್ಯವಾಗಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತ್ಯಂತ ಕಡಿಮೆ ವೇತನಕ್ಕೆ 20 ವರ್ಷಗಳು ಕೆಲಸ ಮಾಡಿದ್ದೇನೆ. ಈಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಹುದ್ದೆಯ ಪರೀಕ್ಷೆ ಬರೆದಿದ್ದೇನೆ. ಆಯ್ಕೆಯಾಗುವ ವಿಶ್ವಾಸವಿದೆ. ಆದರೆ, ಐದು ವರ್ಷಗಳ ನಂತರ ಹುದ್ದೆ ತ್ಯಜಿಸಿದರೆ ಮತ್ತೆ ಖಾಸಗಿ ಕಾಲೇಜಿಗೆ ಹೋಗಬೇಕೇ? ಮರಳಿ ಹೋದರೆ ಅಲ್ಲಿ ಕೆಲಸ ಸಿಗುವ ಖಾತ್ರಿ ಏನು? ನಮ್ಮಂಥವರ ಬದುಕು ಅತಂತ್ರವಾಗುವುದಿಲ್ಲವೇ’ ಎಂದು ಪ್ರಶ್ನಿಸುತ್ತಾರೆ ಹುದ್ದೆ ನಿರೀಕ್ಷೆಯಲ್ಲಿರುವ ಅಭ್ಯರ್ಥಿ ಯೋಗರಾಜ್. 

ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳಿಗೆ ಕಾಯಂ ನೇಮಕ ಪ್ರಕ್ರಿಯೆ ಹಲವು ದಶಕಗಳಿಂದಲೂ ನಿಯಮಿತವಾಗಿ ನಡೆದಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಹಲವು ಪ್ರಾಧ್ಯಾಪಕರಿಗೆ 2008–2009ನೇ ಸಾಲಿನಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡಲಾಗಿತ್ತು. ಒಂದು ಸಾವಿರ ವಿದ್ಯಾರ್ಥಿ
ಗಳಿಗಿಂತ ಕಡಿಮೆ ಇರುವ ಹಾಗೂ ಒಂದು ಸಾವಿರಕ್ಕಿಂತ ಹೆಚ್ಚಿರುವ ಕಾಲೇಜುಗಳನ್ನು ವಿಂಗಡಿಸಿ ಗ್ರೇಡ್‌–1 ಹಾಗೂ ಗ್ರೇಡ್‌–2 ಪ್ರಾಂಶುಪಾಲರು ಎಂದು ಪರಿಗಣಿಸಿ ಬಡ್ತಿಗೆ ಪರಿಗಣಿಸಲಾಗಿತ್ತು. ಅಂದು ಪ್ರಾಂಶುಪಾಲರಾಗಿ ಬಡ್ತಿ ಹೊಂದಿದ್ದ ಎಲ್ಲರೂ ನಿವೃತ್ತರಾಗಿದ್ದಾರೆ. ಪ್ರಸ್ತುತ 400ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿ ಇವೆ. ಆಯಾ ಕಾಲೇಜುಗಳಲ್ಲಿರುವ ಹಿರಿಯ ಪ್ರಾಧ್ಯಾಪಕರೇ ಪ್ರಭಾರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಬೋಧಕರಲ್ಲದವರಿಗೂ ಸೇವಾ ಪ್ರಮಾಣಪತ್ರ: ಪ್ರಾಂಶುಪಾಲರ ಹುದ್ದೆಗೆ ಆಯ್ಕೆ ಬಯಸುವವರು ಪದವಿ ಕಾಲೇಜುಗಳಲ್ಲಿ ಸೇವಾನುಭವ ಹೊಂದಿರುವ ಜೊತೆಗೆ ಕಾಲಕಾಲಕ್ಕೆ ನಿಗದಿಪಡಿಸಿದ ವೇತನ ಶ್ರೇಣಿ ಪಡೆಯುತ್ತಿರಬೇಕು ಎಂದು 2016ರಲ್ಲೇ ವಿಶ್ವವಿದ್ಯಾಲಯ ಅನುದಾನ ಆಯೋಗ ನಿಯಮ ರೂಪಿಸಿದೆ. ಆದರೆ, ರಾಜ್ಯದ ಯಾವ ಖಾಸಗಿ ಕಾಲೇಜುಗಳೂ ಯುಜಿಸಿ ನಿಗದಿಪಡಿಸಿದ ವೇತನ ಶ್ರೇಣಿ ನೀಡುತ್ತಿಲ್ಲ. ಇದರಿಂದ ಖಾಸಗಿ ಸಂಸ್ಥೆಗಳ ಅಭ್ಯರ್ಥಿಗಳಿಗೆ ಯುಜಿಸಿ ನಿಯಮ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ‘ವೇತನ ಶ್ರೇಣಿ ಅರ್ಹತೆ’ಯ ಅಂಶವನ್ನೇ ಕೈಬಿಟ್ಟಿದೆ. 

‘ವೇತನ ಶ್ರೇಣಿ ನಿಯಮ ಕೈಬಿಟ್ಟಿದ್ದರಿಂದ ಪದವಿ ಕಾಲೇಜುಗಳಲ್ಲಿ ಒಂದು ವರ್ಷವೂ ಸೇವಾನುಭವ ಹೊಂದಿಲ್ಲದ ಹಲವರು ಪ್ರಭಾವ ಬಳಸಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ 15 ವರ್ಷಗಳ ಸೇವಾ ದೃಢೀಕರಣ ಪಡೆದಿದ್ದಾರೆ. ಸರ್ಕಾರದ ಉನ್ನತಾಧಿಕಾರಿಯೊಬ್ಬರ ಪತ್ನಿ ಯಾವ ಕಾಲೇಜಿನಲ್ಲೂ ಬೋಧನಾನುಭವ ಹೊಂದಿಲ್ಲ. ಆದರೆ, ಅವರು ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದಿದ್ದಾರೆ. ಈಚೆಗೆ ಬಿಡುಗಡೆ ಮಾಡಿದ ತಾತ್ಕಾಲಿಕ ಅಂಕಗಳ ಪಟ್ಟಿಯಲ್ಲೂ ಉನ್ನತ ಸ್ಥಾನದಲ್ಲಿದ್ದಾರೆ. ಇಂತಹ ಪ್ರಕರಣಗಳಿಂದ ಸರ್ಕಾರಿ ಕಾಲೇಜುಗಳ ಅರ್ಹ ಪ್ರಾಧ್ಯಾಪಕರು ಪ್ರಾಂಶುಪಾಲರ ಹುದ್ದೆಗೆ ಹೋಗಲು ಸಾಧ್ಯವಾಗುತ್ತಿಲ್ಲ’ ಎನ್ನುವುದು  ಪ್ರಾಧ್ಯಾಪಕ ಮಂಜುನಾಥ್ ಆರೋಪ.

ಪ್ರಾಂಶುಪಾಲರ ಹುದ್ದೆ ತಾತ್ಕಾಲಿಕವಾಗಿರುವ ಕಾರಣ ಮುಂದಿನ ಹಂತಗಳಾದ ಜಂಟಿ, ಹೆಚ್ಚುವರಿ ನಿರ್ದೇಶಕ, ನಿರ್ದೇಶಕ ಸ್ಥಾನಗಳು ಕಾಯಂ ಪ್ರಭಾರವಾಗಿಯೇ ಉಳಿಯುತ್ತವೆ. ಪ್ರಾಧ್ಯಾಪಕರ ಬಡ್ತಿಯ ಹಕ್ಕುಗಳು ಶಾಶ್ವತವಾಗಿ ಮೊಟಕುಗೊಳ್ಳುತ್ತವೆ
ರಾಮಲಿಂಗಪ್ಪ ಟಿ. ಬೇಗೂರು, ಉನ್ನತ ಶಿಕ್ಷಣ ಚಿಂತನಾ ವೇದಿಕೆ
ಹಿಂದಿನ ಸರ್ಕಾರ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ಯುಜಿಸಿ ನಿಯಮದಂತೆ ಪ್ರಾಂಶುಪಾಲರ ಹುದ್ದೆಗಳಿಗೆ ಐದು ವರ್ಷ ಕಾಲಮಿತಿ ನಿಗದಿ ಮಾಡಲಾಗಿದೆ. ದಕ್ಷತೆ ತೋರುವವರ ಅವಧಿ ಮುಂದುವರಿಸಲು ಅವಕಾಶವಿದೆ
ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ

ಸರ್ಕಾರಿ ಪ್ರಾಧ್ಯಾಪಕರ ಆಕ್ಷೇಪ; ತಡೆ

15 ವರ್ಷಗಳಿಂದ ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗಳೇ ನಡೆದಿರಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್‌ 2022ರಲ್ಲಿ ಅಧಿಸೂಚನೆ ಹೊರಡಿಸಿತ್ತು. ತಾಂತ್ರಿಕ ಕಾರಣಗಳಿಂದ ನಿಗದಿಯಾಗಿದ್ದ
ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ ಕಳೆದ ಜುಲೈ 30ರಂದು ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ನಡೆದು ವರ್ಷವಾದರೂ ಅಂತಿಮ ಪಟ್ಟಿ ಪ್ರಕಟವಾಗಿಲ್ಲ. 

‘ಎಂಜಿನಿಯರಿಂಗ್‌ ಸೇರಿದಂತೆ ಇತರೆ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡಿದವರು ಆಯ್ಕೆಯಾದರೆ ನಿಯಮದಂತೆ ಅವರು ವಾರಕ್ಕೆ ಆರು ಗಂಟೆ ಯಾವ ವಿಷಯ ಬೋಧಿಸಲು ಸಾಧ್ಯ? ಒಳಹೊರಗಿನವರ  ಶೀತಲ ಸಮರಕ್ಕೂ ದಾರಿಯಾಗುತ್ತದೆ, ಇಲಾಖೆಯ ಒಳಗಿನವರ ಸೇವಾ ಜ್ಯೇಷ್ಠತೆಗೂ ಧಕ್ಕೆಯಾಗುತ್ತದೆ.  ತಾತ್ಕಾಲಿಕ ಅವಧಿಯಿಂದಾಗಿ ಶಿಕ್ಷಣಾಡಳಿತ ಹುದ್ದೆಯಾಗದು, ವಯೋಮಿತಿ ಇಲ್ಲದ ಕಾರಣ ಆಯ್ಕೆಯಾದವರು ಒಂದೇ ತಿಂಗಳಿಗೆ ನಿವೃತ್ತರಾದರೆ ಮತ್ತೆ ಪ್ರಭಾರ ಅನಿವಾರ್ಯವಾಗುತ್ತದೆ. ಈ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು’ ಎಂದು ಕೋರಿ ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ, ಕಾನೂನು ಸಲಹೆ ಬರುವರೆಗೂ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ.

ಬೋಧಕರಲ್ಲದವರಿಗೂ ಸೇವಾ ಪ್ರಮಾಣಪತ್ರ

ಪ್ರಾಂಶುಪಾಲರ ಹುದ್ದೆಗೆ ಆಯ್ಕೆ ಬಯಸುವವರು ಪದವಿ ಕಾಲೇಜುಗಳಲ್ಲಿ ಸೇವಾನುಭವ ಹೊಂದಿರುವ ಜೊತೆಗೆ ಕಾಲಕಾಲಕ್ಕೆ ನಿಗದಿಪಡಿಸಿದ ವೇತನ ಶ್ರೇಣಿ ಪಡೆಯುತ್ತಿರಬೇಕು ಎಂದು 2016ರಲ್ಲೇ ವಿಶ್ವವಿದ್ಯಾಲಯ ಅನುದಾನ ಆಯೋಗ ನಿಯಮ ರೂಪಿಸಿದೆ. ಆದರೆ, ರಾಜ್ಯದ ಯಾವ ಖಾಸಗಿ ಕಾಲೇಜುಗಳೂ ಯುಜಿಸಿ ನಿಗದಿಪಡಿಸಿದ ವೇತನ ಶ್ರೇಣಿ ನೀಡುತ್ತಿಲ್ಲ. ಇದರಿಂದ ಖಾಸಗಿ ಸಂಸ್ಥೆಗಳ ಅಭ್ಯರ್ಥಿಗಳಿಗೆ ಯುಜಿಸಿ ನಿಯಮ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ‘ವೇತನ ಶ್ರೇಣಿ ಅರ್ಹತೆ’ಯ ಅಂಶವನ್ನೇ ಕೈಬಿಟ್ಟಿದೆ. 

‘ವೇತನ ಶ್ರೇಣಿ ನಿಯಮ ಕೈಬಿಟ್ಟಿದ್ದರಿಂದ ಪದವಿ ಕಾಲೇಜುಗಳಲ್ಲಿ ಒಂದು ವರ್ಷವೂ ಸೇವಾನುಭವ ಹೊಂದಿಲ್ಲದ ಹಲವರು ಪ್ರಭಾವ ಬಳಸಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ 15 ವರ್ಷಗಳ ಸೇವಾ ದೃಢೀಕರಣ ಪಡೆದಿದ್ದಾರೆ. ಸರ್ಕಾರದ ಉನ್ನತಾಧಿಕಾರಿಯೊಬ್ಬರ ಪತ್ನಿ ಯಾವ ಕಾಲೇಜಿನಲ್ಲೂ ಬೋಧನಾನುಭವ ಹೊಂದಿಲ್ಲ. ಆದರೆ, ಅವರು ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದಿದ್ದಾರೆ. ಈಚೆಗೆ ಬಿಡುಗಡೆ ಮಾಡಿದ ತಾತ್ಕಾಲಿಕ ಅಂಕಗಳ ಪಟ್ಟಿಯಲ್ಲೂ ಉನ್ನತ ಸ್ಥಾನದಲ್ಲಿದ್ದಾರೆ. ಇಂತಹ ಪ್ರಕರಣಗಳಿಂದ ಸರ್ಕಾರಿ ಕಾಲೇಜುಗಳ ಅರ್ಹ ಪ್ರಾಧ್ಯಾಪಕರು ಪ್ರಾಂಶುಪಾಲರ ಹುದ್ದೆಗೆ ಹೋಗಲು ಸಾಧ್ಯವಾಗುತ್ತಿಲ್ಲ’ ಎನ್ನುವುದು  ಪ್ರಾಧ್ಯಾಪಕ ಮಂಜುನಾಥ್ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.