ಬೆಂಗಳೂರು:ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಸ್ತುತ ಇರುವ ಯಾವುದೇ ಅಧಿಕಾರವನ್ನು ಕಡಿತಗೊಳಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮುಖ್ಯಮಂತ್ರಿಯವರನ್ನು ಮಂಗಳವಾರ ಬೆಳಿಗ್ಗೆ ಭೇಟಿಮಾಡಿದ ಗೃಹ ಸಚಿವರು, ಅಧಿಕಾರ ಮೊಟಕುಗೊಳಿಸುವ ಪ್ರಸ್ತಾವದ ಕುರಿತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಲ್ಲಿ ಉಂಟಾಗಿರುವ ಆತಂಕವನ್ನು ಗಮನಕ್ಕೆ ತಂದರು.
'ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಯವರು, ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯಿದೆಗಳಿಗೆ ತಿದ್ದುಪಡಿಗೆ ಯಾವುದೇ ತರುವ ಪ್ರಸ್ತಾವವನ್ನುತಿರಸ್ಕರಿಸಿದ್ದಾರೆ' ಎಂದು ಜ್ಞಾನೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿಯಾಗಿದ್ದು, ಗ್ರಾಮೀಣ ಭಾಗದಲ್ಲಿ, ಭವಿಷ್ಯದ ನಾಯಕತ್ವ ರೂಪಿಸುವಲ್ಲಿ ಗಣನೀಯ ಕೊಡುಗೆ, ಸಲ್ಲಿಸುತ್ತಿವೆ. ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಅಧಿಕಾರ ವಿಕೇಂದ್ರಿಕರಣ ಗೊಳಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಬದ್ಧತೆ ಹೊಂದಿದೆ ಎಂದರು.
ಗ್ರಾಮ ಪಂಚಾಯಿತಿಯ ನೌಕರರ ಸೇವಾ ನಿಯಮಾವಳಿಗಳಿಗೆ, ತಿದ್ದುಪಡಿ ತಂದು, ಪಂಚಾಯತ್ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುವ ವರದಿಗಳನ್ನು ಮುಖ್ಯಮಂತ್ರಿ ತಿರಸ್ಕರಿಸಿದ್ದಾರೆ. ಆ ಮೂಲಕ ಅಧಿಕಾರ ಮೊಟಕು ಪ್ರಸ್ತಾವಕ್ಕೆ ತೆರೆ ಎಳೆದಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.