ADVERTISEMENT

ಆರ್‌ಎಸ್‌ಎಸ್‌ ಪ್ರಮುಖರಲ್ಲಿ ದಲಿತರಿದ್ದಾರೆಯೇ?: ಎಐಸಿಸಿ ಕಾರ್ಯದರ್ಶಿ ಸಂದೀಪ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 20:04 IST
Last Updated 17 ಸೆಪ್ಟೆಂಬರ್ 2024, 20:04 IST
ಶಿವಸೇನಾ ನಾಯಕನ ಹೇಳಿಕೆ ಖಂಡಿಸಿ, ಕೆಪಿಸಿಸಿ ಸದಸ್ಯರು ನಗರದ ಕಾಂಗ್ರೆಸ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು
ಶಿವಸೇನಾ ನಾಯಕನ ಹೇಳಿಕೆ ಖಂಡಿಸಿ, ಕೆಪಿಸಿಸಿ ಸದಸ್ಯರು ನಗರದ ಕಾಂಗ್ರೆಸ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಮನುವಾದಿ ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸಂವಿಧಾನ ವಿರೋಧಿಗಳು. ಇವರೇ ನಿಜವಾಗಿಯೂ ಮೀಸಲಾತಿ ವಿರೋಧಿಗಳು. ಆರ್‌ಎಸ್‌ಎಸ್‌ನ ಪ್ರಮುಖ ಹುದ್ದೆಗಳಲ್ಲಿ ದಲಿತರು ಇದ್ದಾರಾ’ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌ ಪ್ರಶ್ನಿಸಿದರು.

‘ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸಿದರೆ ₹11 ಲಕ್ಷ ಬಹುಮಾನ ನೀಡುತ್ತೇನೆ’ ಎಂದಿದ್ದ ಮಹಾರಾಷ್ಟ್ರದ ಶಿವಸೇನಾ (ಶಿಂಧೆ ಬಣ) ನಾಯಕ ಸಂಜಯ್ ಗಾಯಕ್‌ವಾಡ್‌ ಹೇಳಿಕೆ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಮಂಗಳವಾರ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

‘ಮೀಸಲಾತಿ ಜಾರಿಗೆ ತಂದಿದ್ದೇ ಕಾಂಗ್ರೆಸ್‌. ಪಂಚಾಯತ್ ರಾಜ್ ವ್ಯವಸ್ಥೆ ತಂದು ದಲಿತರು, ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದೂ ಕಾಂಗ್ರೆಸ್‌. ಆಗ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಬಿಜೆಪಿ ಈಗ, ಕಾಂಗ್ರೆಸ್‌ ಮೀಸಲಾತಿ ವಿರೋಧಿ ಎಂದು ಆರೋಪಿಸುತ್ತಿದೆ’ ಎಂದರು.

ADVERTISEMENT

‘ರಾಹುಲ್‌ ಗಾಂಧಿ ಅವರ ಪೂರ್ಣ ಹೇಳಿಕೆಯನ್ನು ನೋಡದೆ, ತುಂಡರಿಸಿದ ತುಣುಕನ್ನಷ್ಟೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಪರಿಶಿಷ್ಟರು ಮತ್ತು ಶೋಷಿತರನ್ನು ರಾಹುಲ್‌ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಕೆಪಿಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.