ADVERTISEMENT

Elephant Arjuna | ಕಾದಾಡುತ್ತಲೇ ಜೀವ ತೆತ್ತ ‘ಅರ್ಜುನ’

ಎಂ.ಮಹೇಶ
Published 5 ಡಿಸೆಂಬರ್ 2023, 0:22 IST
Last Updated 5 ಡಿಸೆಂಬರ್ 2023, 0:22 IST
<div class="paragraphs"><p>2019ರಲ್ಲಿ ಮೈಸೂರು ದಸರೆಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ (ಸಂಗ್ರಹ ಚಿತ್ರ) </p></div>

2019ರಲ್ಲಿ ಮೈಸೂರು ದಸರೆಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ (ಸಂಗ್ರಹ ಚಿತ್ರ)

   

ಮೈಸೂರು: ವಿವಿಧೆಡೆ ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದ ಸಾಕಾನೆ ‘ಅರ್ಜುನ’, ಇದೇ ಕಾರ್ಯದಲ್ಲಿ ತೊಡಗಿರುವಾಗಲೇ ಹೋರಾಡುತ್ತಾ ವಿರೋಚಿತ ಸಾವು ಕಂಡಿದೆ. ‘ಬಲಶಾಲಿ’, ‘ಮಾಸ್ಟರ್‌’ ಹಾಗೂ ‘ಹಿರಿಯ’ ಹೀಗೆ ಇತರ ಹೆಸರುಗಳಿಂದಲೂ ಅರ್ಜುನ ಖ್ಯಾತನಾಗಿದ್ದ.

ಅರ್ಜುನನ್ನು 1968ರಲ್ಲಿ ‘ಖೆಡ್ಡಾ’ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 22 ವರ್ಷಗಳಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ. 2012ರಿಂದ 2019ರವರೆಗೆ, ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯಲ್ಲಿ (ವಿಜಯದಶಮಿ ಮೆರವಣಿಗೆ) ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದ. ಆನೆಪ್ರಿಯರ ಪ್ರೀತಿಗೆ ಪಾತ್ರವಾಗಿದ್ದ.

ADVERTISEMENT

65 ವರ್ಷದ ‘ಅರ್ಜುನ’ ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿದ್ದ. 60 ವರ್ಷ ವಯಸ್ಸು ದಾಟಿದ ನಂತರ, ಚಿನ್ನದ ಅಂಬಾರಿ ಹೊರುವ ಕೆಲಸದಿಂದ ನಿವೃತ್ತಿ ನೀಡಲಾಗಿತ್ತು. 5,800 ಕೆ.ಜಿ. ತೂಕದ ಅರ್ಜುನನ್ನು ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು. ಹಾಸನ ಜಿಲ್ಲೆಯಲ್ಲಿ ಕಾರ್ಯಾಚರಣೆ ವೇಳೆಯೇ ಸೋಮವಾರ ಸಾವಿಗೀಡಾಗಿದ್ದಾನೆ. ಹಾಸನದಲ್ಲಿ ನಡೆದ ಘಟನೆಯು, ‘ಕಾಡಾನೆಗಳನ್ನು ಸೆರೆ ಹಿಡಿಯುವಾಗ ವನ್ಯಪ್ರಾಣಿಗಳ ಜೀವಕ್ಕೆ ಹಾನಿಯಾಗದಂತೆ ಅರಣ್ಯ ಇಲಾಖೆಯು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು’ ಎಂಬ ಸಂದೇಶವನ್ನು ರವಾನಿಸಿದೆ.

‘ನಿಶಾನೆ’ ಆನೆಯೂ ಆಗಿದ್ದ:

ಈ ಬಾರಿಯ ದಸರಾ ಮೆರವಣಿಗೆಯಲ್ಲಿ, ದಿಕ್ಕು ತೋರುವ ‘ನಿಶಾನೆ ಆನೆ’ಯಾಗಿ ಸಾಗಿದ್ದ ‘ಅರ್ಜುನ’ ಲಕ್ಷಾಂತರ ಜನರ ಗಮನಸೆಳೆದಿದ್ದ. ಮಾವುತ ವಿನು ಹಾಗೂ ಕಾವಾಡಿ ರಾಜು ಡಿ. ಆತನನ್ನು ಮುನ್ನಡೆಸಿದ್ದರು.

ಅರಣ್ಯ ಇಲಾಖೆ ಹಾಗೂ ಪೊಲೀಸರ ನಡುವಿನ ಸಮನ್ವಯದ ಕೊರತೆಯಿಂದ ‘ನಿಶಾನೆ’ ಆನೆಗಳನ್ನು ಮೆರವಣಿಗೆಗೆ ಈ ಸಲ ತಡವಾಗಿ ಕರೆತರಲಾಗಿತ್ತು.‌ ಕಾರ್ಯಾಚರಣೆ ಎನ್ನುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ‘ಅರ್ಜುನ’ನಿಗೆ ಆದ್ಯತೆ ನೀಡುತ್ತಿದ್ದರು. ಎಚ್.ಡಿ.ಕೋಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ 8 ವರ್ಷದ ಗಂಡು ಹುಲಿಯ ಸೆರೆ ಕಾರ್ಯಾಚರಣೆಯಲ್ಲಿ ‘ಅರ್ಜುನ’ ಸೇರಿದಂತೆ 3 ಆನೆಗಳನ್ನು ಬಳಸಲಾಗಿತ್ತು. ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಲ್ಲಟ್ಟಿ ಗ್ರಾಮದ ಕೃಷ್ಣನಾಯಕ್ ಅವರ ಪುತ್ರ ಚರಣ್ ನಾಯಕ್ (9) ಸೆ. 4ರಂದು ಹುಲಿ ದಾಳಿಗೆ ಬಲಿಯಾಗಿದ್ದ. ಈ ಕಾರಣದಿಂದ ಕಾರ್ಯಾಚರಣೆ ನಡೆದಿತ್ತು.

ವೀರನಹೊಸಹಳ್ಳಿಯಿಂದ ಸೆ.1ರಂದು ಕ್ಯಾಪ್ಟನ್ ‘ಅಭಿಮನ್ಯು’ ನೇತೃತ್ವದ 9 ಆನೆಗಳು ಅರಮನೆ ನಗರಿಗೆ ಬಂದಿದ್ದವು. ಅರಣ್ಯ ಭವನದಲ್ಲಿದ್ದ ಆನೆಗಳ ಅರಮನೆ ಪ್ರವೇಶ ಸೆ.5ರಂದು ನಡೆದಿತ್ತು. ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರ್ಜುನ ತಡವಾಗಿ ಅಂದರೆ ಸೆ.14ರಂದು ‘ದಸರಾ ಗಜಪಡೆ’ಯನ್ನು ಮೈಸೂರಿನಲ್ಲಿ ಸೇರಿಕೊಂಡಿದ್ದ.

‘ಹತ್ತು ದಿನಗಳ ಕಾಲ ಮೇಟಿಕುಪ್ಪೆ ಅರಣ್ಯದಂಚಿನಲ್ಲಿ ನಡೆದ ಹುಲಿ ಹುಡುಕಾಟದಲ್ಲಿ ಅರ್ಜುನ ತನ್ನ ತಂಡದೊಂದಿಗೆ ನಿತ್ಯ 4ರಿಂದ 6 ಕಿ.ಮೀ ಕ್ರಮಿಸುತ್ತಿತ್ತು. ಆದರೆ, ಹುಲಿ ಸಿಗಲಿಲ್ಲ. ಹೀಗಾಗಿ ಇಲಾಖೆಯ ಸೂಚನೆಯಂತೆ, ದಸರೆಗೆ ಸಿದ್ಧವಾಗಬೇಕಾದ್ದರಿಂದ ಅರಮನೆಗೆ ಬಂದೆವು’ ಎಂದು ಕಾವಾಡಿ ರಾಜು ತಿಳಿಸಿದ್ದರು.

ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮೈಸೂರಿನ ಅರಮನೆ ಬಿಡಾರಕ್ಕೆ ವಾಪಸಾದ ‘ಅರ್ಜುನ’ ಆನೆಗೆ ಮಾವುತ  ಹಾಗೂ ಕಾವಾಡಿಗಳು ಸ್ನಾನ ಮಾಡಿಸಿದರು (ಸಂಗ್ರಹ ಚಿತ್ರ)

ಚಾಮರಾಜನಗರ ಜಿಲ್ಲೆಯ ಪೊನ್ನಾಚಿ, ಚನ್ನಪಟ್ಟಣ ತಾಲ್ಲೂಕು, ಹಂಪಾಪುರ, ಸಿದ್ದಾಪುರ, ಸಕಲೇಶಪುರ, ಹಾಸನ, ಸಿದ್ದಾಪುರ, ಗೋಣಿಕೊ‍ಪ್ಪಲು ಹೀಗೆ... ಹಲವೆಡೆ ನಡೆದಿದ್ದ ಕಾರ್ಯಾಚರಣೆಯಲ್ಲಿ ‘ಅರ್ಜುನ’ ಪಾಲ್ಗೊಂಡಿದ್ದ.

ಹುಲಿಯನ್ನು ಓಡಿಸಿದ್ದ ‘ಬಲಶಾಲಿ’

ಇದೇ ವರ್ಷದ ಜ.23ರಂದು ಹುಲಿಯನ್ನು ಓಡಿಸಿ ಜನ ನಿಟ್ಟುಸಿರು ಬಿಡುವಂತೆ ಮಾಡಿ ಗಮನಸೆಳೆದಿದ್ದ. ಎಚ್.ಡಿ.ಕೋಟೆ ತಾಲ್ಲೂಕು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ಹಾಡಿ ಯುವಕನನ್ನು ಕೊಂದಿದ್ದ ಹುಲಿಯನ್ನು ‘ಅರ್ಜುನ’ ನೇತೃತ್ವದಲ್ಲಿ ಆನೆಗಳಿಂದ ಕಾಡಿಗಟ್ಟಲಾಗಿತ್ತು. ಜನವಸತಿ ಪ್ರದೇಶದಲ್ಲಿ 4 ಮರಿಗಳೊಂದಿಗೆ ಓಡಾಡುತ್ತಿರುವ ‘ಬ್ಯಾಕ್ ವಾಟರ್ ಫೀಮೇಲ್’ ಹುಲಿಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಅವರ ಆತಂಕವನ್ನು ನಿವಾರಿಸುವಲ್ಲಿ ಅರ್ಜುನ ನೆರವಾಗಿದ್ದ. ಅದು ಕೆಲ ವರ್ಷಗಳ ಹಿಂದೆ (2018ಕ್ಕಿಂತ ಹಿಂದೆ) ಮದವೇರಿದ ಸಂದರ್ಭದಲ್ಲಿ ಬಳ್ಳೆ ಶಿಬಿರದಿಂದ ತಪ್ಪಿಸಿಕೊಂಡಿತ್ತು. ನಾಲ್ಕು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ನಂತರ ಕೇರಳ ಗಡಿ ಭಾಗದಲ್ಲಿ ಪತ್ತೆಯಾಗಿತ್ತು.

‘ವಿಶ್ವಾಸ ಗಳಿಸಿದರೆ ಸುಮ್ಮನಿರುತ್ತಿದ್ದ’

ಅರ್ಜುನನಿಗೆ ಆರಂಭದಲ್ಲಿ ದೊಡ್ಡಮಾಸ್ತಿ ಬಳಿಕ ಅವರ ಪುತ್ರ ಮಹೇಶ್‌ ಬಳಿಕ ವಿನು ಮಾವುತರಾಗಿದ್ದರು. ‘ಅರ್ಜುನ ಆನೆಯನ್ನು ಮೊದಲ ಬಾರಿ ಮುನ್ನಡೆಸಲು ಅವಕಾಶ ದೊರೆತಾಗ ಹೆಚ್ಚಿನವರು ಹೆದರಿಸಿದ್ದರು. ಅಪಾಯಕಾರಿ ಅದರಿಂದ ತೊಂದರೆಯಾಗಬಹುದೆಂದು ಆತ್ಮಸ್ಥೈರ್ಯ ಕುಗ್ಗಿಸಿದ್ದರು. ಅದರ ಭಾವನೆ ಅರಿತಿದ್ದ ನಾನು ಯಾವುದೇ ಬೆದರಿಕೆಗೆ ಜಗ್ಗಲಿಲ್ಲ‌. ಕಣ್ಣಿನಲ್ಲೇ ಅದರ ಪ್ರೀತಿ ಸಂಪಾದಿಸಿದೆ’ ಎಂದು ವಿನು ತಿಳಿಸಿದ್ದರು. ‘ಹೊಸಬರನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ಅದಕ್ಕೆ ತುಂಬಾ ಕೋಪ. ಆದರೆ ಅಷ್ಟೇ ಭಾವುಕ ಜೀವಿ. ವ್ಯಕ್ತಿಯ ಮೇಲೆ ವಿಶ್ವಾಸ ಬಂದರೆ ಸುಮ್ಮನಿರುತ್ತದೆ’ ಎಂದು ತಿಳಿಸಿದ್ದರು.

ಸಿದ್ದರಾಮಯ್ಯ ಬೇಸರ

ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿ ಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ‘ಎಕ್ಸ್‌’ ಮಾಡಿರುವ ಅವರು ‘ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ’ ಎಂದು ಹೇಳಿದ್ದಾರೆ.

ವಿರೋಚಿತ ಸಾವು: ಎಚ್‌ಡಿಕೆ

‘ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ‘ಎಕ್ಸ್‌’ ಮಾಡಿದ್ದಾರೆ. ‘ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ’ ಎಂದಿದ್ದಾರೆ. ‘ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ’ ಎಂದು ಹೇಳಿದ್ದಾರೆ.

ಅರಿವಳಿಕೆ ಚುಚ್ಚುಮದ್ದು ತಾಕಿತ್ತೇ?

‘ಕಾಡಾನೆಗೆ ನೀಡಬೇಕಿದ್ದ ಅರಿವಳಿಕೆ ಚುಚ್ಚುಮದ್ದು ಅರ್ಜುನನಿಗೆ ತಗುಲಿದ್ದರಿಂದ ಅದು ಕಾಡಾನೆ ಜೊತೆಗೆ ಸೆಣೆಸಲು ಸಾಧ್ಯವಾಗಲಿಲ್ಲ’ ಎನ್ನುವ ಆರೋಪವೂ ಕೇಳಿಬಂದಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಎಸಿಎಫ್‌ ಮಹಾದೇವ ‘ಆನೆಯ ಕಳೇಬರವನ್ನು ಸ್ಥಳಾಂತರಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಅರಣ್ಯ ಇಲಾಖೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.