ADVERTISEMENT

ಅರ್ಕಾವತಿ ರೀಡೂ ಪ್ರಕರಣ | ಅಧಿಕಾರ ಇದ್ದಾಗ ಬಿಜೆಪಿ ಮೌನ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 16:16 IST
Last Updated 23 ಸೆಪ್ಟೆಂಬರ್ 2024, 16:16 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ‘ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನು ಡಿನೋಟಿಫಿಕೇಶನ್ ಮಾಡಿದ್ದ ಪ್ರಕರಣ ಕುರಿತು ನಾಲ್ಕು ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಏಕೆ ಮೌನವಹಿಸಿತ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ವಿಧಾನಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ರಾಜ್ಯಪಾಲರಿಗೆ ಪತ್ರ ಬರೆದು ಅರ್ಕಾವತಿ ಬಡಾವಣೆ ಪ್ರಕರಣ ಕುರಿತು ತನಿಖೆ ನಡೆಸಿದ್ದ ಕೆಂಪಣ್ಣ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಬಿಜೆಪಿ ಅವಧಿಯಲ್ಲಿ ಅವರೂ ಸಚಿವರಾಗಿದ್ದರು. ಆಗ ಏಕೆ ಧ್ವನಿ ಎತ್ತಲಿಲ್ಲ. ವರದಿ ಬಹಿರಂಗಪಡಿಸಲಿಲ್ಲ. ಸದನದ ಮುಂದೆ ಅವರ ಸರ್ಕಾರ ಏಕೆ ಮಂಡಿಸಲಿಲ್ಲ. ಈಗ ರಾಜಕೀಯ ಕಾರಣಗಳಿಗಾಗಿ ಪತ್ರ ಬರೆದಿದ್ದಾರೆ ಅಷ್ಟೆ’ ಎಂದು ಟೀಕಿಸಿದರು.

ರಾಜ್ಯಪಾಲರ ನಡವಳಿಕೆ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುತ್ತೀರಾ ಎಂಬ ಪ್ರಶ್ನೆಗೆ, ‘ಪರಿಶೀಲನೆ ಮಾಡುತ್ತೇವೆ’ ಎಂದಷ್ಟೇ ಹೇಳಿದರು.

ADVERTISEMENT

‘ನಾನು ಕನ್ನಡದಲ್ಲಿರುವ ಕಡತಗಳಿಗೆ ಕನ್ನಡದಲ್ಲಿ, ಇಂಗ್ಲಿಷ್‌ನಲ್ಲಿನ ಕಡತಗಳಿಗೆ ಇಂಗ್ಲಿಷ್‌ನಲ್ಲೇ ಸಹಿ ಮಾಡಿದ್ದೇನೆ. ಅದು ನನ್ನ ಹಕ್ಕು. ಇಂತಹ ಕ್ಷುಲ್ಲಕ ವಿಷಯಗಳಿಗೂ ರಾಜ್ಯಪಾಲರು ವಿವರ ಕೇಳುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಮಾಧ್ಯಮದವರೇ ಹೇಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.