ADVERTISEMENT

'ಆರೋಗ್ಯವಾಣಿ'ಗೆ ಕರೆ: ಸೆಕ್ಸ್ ಸಮಸ್ಯೆಗಳೇ ಹೆಚ್ಚು!

ರಶ್ಮಿ ಬೇಲೂರು
Published 25 ನವೆಂಬರ್ 2019, 12:46 IST
Last Updated 25 ನವೆಂಬರ್ 2019, 12:46 IST
ಸಹಾಯವಾಣಿ
ಸಹಾಯವಾಣಿ   

ಬೆಂಗಳೂರು: ಜನರ ಆರೋಗ್ಯ ಸಂಬಂಧಿತ ಸಂದೇಹ ನಿವಾರಣೆ ಹಾಗೂಸಲಹೆಗಳಿಗಾಗಿಯೇ ರಾಜ್ಯ ಸರ್ಕಾರವು 2013ರಲ್ಲಿ 'ಆರೋಗ್ಯವಾಣಿ' ಎಂಬ ಸಹಾಯವಾಣಿಯನ್ನು ಪ್ರಾರಂಭಿಸಿತ್ತು. 104 ಸಂಖ್ಯೆಗೆ ಕರೆ ಮಾಡುವ ವ್ಯವಸ್ಥೆಯಿದು. ಕಳೆದ ಆರು ವರ್ಷಗಳಲ್ಲಿ ಲಕ್ಷಾಂತರ ಜನ ಕರೆ ಮಾಡಿದ್ದಾರೆ. ಆದರೆ, ಅವರಿಗಿದ್ದ ಏಕೈಕ ಚಿಂತೆಯೆಂದರೆ ಲೈಂಗಿಕ ಸಮಸ್ಯೆ!

ಹೌದು. ತಳಮಟ್ಟದ ಜನರಿಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತಜ್ಞ ವೈದ್ಯರ ಸಲಹೆ ಸೂಚನೆಗಳು ರವಾನೆಯಾಗಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಇದನ್ನು ಆರಂಭಿಸಿತ್ತಾದರೂ, ಇದುವರೆಗೆ ಬಹುತೇಕ ಜನರು ಈ ಸಹಾಯವಾಣಿಗೆ ಕರೆ ಮಾಡಿದ್ದು ತಮ್ಮ ಲೈಂಗಿಕತೆ (ಸೆಕ್ಸ್) ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿಯೇ ಎಂಬುದು ಸಹಾಯವಾಣಿ ಸೇವೆಯ ಮೌಲ್ಯಮಾಪನದ ವೇಳೆಬಯಲಾಗಿದೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಈ ಅಧ್ಯಯನದ ಪ್ರಕಾರ, ಸಹಾಯವಾಣಿಗೆ ಕರೆ ಮಾಡಿದ ಹೆಚ್ಚಿನವರು ಸ್ಖಲನ,ಹಸ್ತಮೈಥುನ, ಗರ್ಭನಿರೋಧಕ ಗುಳಿಗೆಗಳ ಬಳಕೆ, ನಿಮಿರುವಿಕೆ ಸಮಸ್ಯೆ, ಶೀಘ್ರ ಸ್ಖಲನ, ಸಂಭೋಗದ ವೇಳೆ ನೋವು ಮುಂತಾದವುಗಳ ಬಗ್ಗೆಯೇ ವಿಚಾರಿಸಿದ್ದರು ಮತ್ತು ಇದಕ್ಕೆ ಸೂಕ್ತ ಔಷಧಿಗಳೇನೆಂದು ಕೇಳಿದ್ದರು.

ADVERTISEMENT
ಸಹಾಯವಾಣಿಗೆ ಬಂದ ಕರೆಗಳು
ಸಮಸ್ಯೆಗಳು ಕರೆಗಳ ಸಂಖ್ಯೆ
ಸ್ವಪ್ನ ಸ್ಖಲನ 1,66,212
ಸಂಭೋಗದ ವೇಳೆ ನೋವು 1,64,321
ಹಸ್ತಮೈಥುನ 99,355
ನಿಮಿರುವಿಕೆ ಸಮಸ್ಯೆ 91,730
ಶೀಘ್ರ ಸ್ಖಲನ 60,729

ಇಷ್ಟೇ ಅಲ್ಲ, ಕಳೆದ ಆರು ವರ್ಷಗಳಲ್ಲಿ ಈ ಸಂಖ್ಯೆಗೆ ಬಂದ ಕರೆಗಳಲ್ಲಿ ಹೆಚ್ಚಿನವು, ಅಂದರೆ ಶೇ.60ರಷ್ಟು ನಕಲಿ ಕರೆಗಳೇ ಆಗಿದ್ದವು. ಈ ವರದಿಯ ಅನುಸಾರ, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಕರೆ ಮಾಡಿದವರು ಗರ್ಭನಿರೋಧಕ ಗುಳಿಗೆಗಳು, ಲೈಂಗಿಕ ಸಮಸ್ಯೆಗಳು ಹಾಗೂ ಸುರಕ್ಷಿತ ಲೈಂಗಿಕತೆಯ ಬಗ್ಗೆಯೇ ಹೆಚ್ಚು ವಿಚಾರಿಸಿದ್ದಾರೆ. ಅದೇ ರೀತಿ, ದಕ್ಷಿಣ ಕನ್ನಡ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳವರು ಶೀಘ್ರ ಸ್ಖಲನ ಕುರಿತಾಗಿ ವಿಚಾರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ, ಕೊಡಗು, ಕೋಲಾರ, ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳ ಹೆಚ್ಚಿನ ಮಹಿಳೆಯರು ಗರ್ಭಧಾರಣೆ ಹಾಗೂ ಸಮಸ್ಯೆಗಳ ಕುರಿತಾಗಿ ವಿಚಾರಣೆ ಮಾಡಿದ್ದಾರೆ.

2013-14 ಹಾಗೂ 2016-17ರ ಕರೆಗಳ ವಿಶ್ಲೇಷಣೆಯ ಪ್ರಕಾರ, ಜನರನ್ನು ಹೆಚ್ಚು ಬಾಧಿಸಿದ ಮತ್ತೊಂದು ಸಮಸ್ಯೆಯೆಂದರೆ ಮೊಡವೆಗಳ ಸಮಸ್ಯೆ. ಇದಕ್ಕೆಪರಿಹಾರ ಕೇಳಿ ಸಾಕಷ್ಟು ಮಂದಿ ಕರೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.