ADVERTISEMENT

ರೇವಣ್ಣ ಬಂಧನ ಆಗಿದ್ದು ಸರಿಯಾದ ಕ್ರಮ: ಆರ್‌. ಅಶೋಕ

2019 ರಲ್ಲಿ ಪ್ರಜ್ವಲ್ ಬಗ್ಗೆ ಹಾಡಿ ಹೊಗಳಿದ್ದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:56 IST
Last Updated 5 ಮೇ 2024, 15:56 IST
<div class="paragraphs"><p>ಎಚ್.ಡಿ. ರೇವಣ್ಣ</p></div>

ಎಚ್.ಡಿ. ರೇವಣ್ಣ

   

ಬೆಂಗಳೂರು: ‘ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿ ಇರಿಸಿದ ಆರೋಪದ ಮೇಲೆ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ಬಂಧಿಸಿರುವುದು ಸರಿಯಾದ ಕ್ರಮ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

‘ಅಲ್ಲದೇ, ಪ್ರಜ್ವಲ್ ರೇವಣ್ಣ ಈಗಲೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸಂಸದರಾಗಿಯೇ ಇದ್ದಾರೆ. ಅವರು ಈ ಚುನಾವಣೆಯಲ್ಲಿ ಗೆದ್ದು ಎನ್‌ಡಿಎ ಸಂಸದರಾದರೆ ಅವರ ವಿರುದ್ಧ ಪಕ್ಷದ ವತಿಯಿಂದಲೇ ಕಾನೂನು ಕ್ರಮ ಜರುಗಿಸುವ ಸಾಧ್ಯತೆಗಳ ಬಗ್ಗೆ ವರಿಷ್ಠರ ಜತೆ ಚರ್ಚಿಸುವುದಾಗಿ’ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಪ್ರಜ್ವಲ್‌ ರೇವಣ್ಣ ನಡೆಸಿದ ಮಹಿಳಾ ದೌರ್ಜನ್ಯದ ಘಟನೆಗಳು ಯಾವಾಗ ನಡೆದಿವೆ ಎಂಬ ಬಗ್ಗೆ ತನಿಖಾ ತಂಡ ವರದಿ ನೀಡಬೇಕಿದೆ. ನಮ್ಮ ಹೊಂದಾಣಿಕೆಯಲ್ಲಿ ಇನ್ನೂ ಪ್ರಜ್ವಲ್‌ ರೇವಣ್ಣ ಗೆದ್ದಿಲ್ಲ. ಈಗ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸಂಸದರಾಗಿಯೇ ಇದ್ದಾರೆ. ಜೆಡಿಎಸ್‌ ಪಕ್ಷ ಈಗಾಗಲೇ ಪ್ರಜ್ವಲ್‌ ವಿರುದ್ಧ ಕ್ರಮ ಕೈಗೊಂಡಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಜೆಡಿಎಸ್‌ ಜತೆಗೆ ಇದೇ ಮೊದಲ ಬಾರಿ ಚುನಾವಣಾ ಮೈತ್ರಿ ಏರ್ಪಟ್ಟಿದೆ. ಜೆಡಿಎಸ್‌ ತನ್ನ ಕೋಟಾದಲ್ಲಿ ಪ್ರಜ್ವಲ್‌ಗೆ ಟಿಕೆಟ್‌ ಕೊಟ್ಟಿದೆ. ಅವರ ಮೇಲೆ ಆರೋಪ ಕೇಳಿ ಬಂದ ಬಳಿಕ ಅವರನ್ನು ಜೆಡಿಎಸ್‌ ಅಮಾನತು ಮಾಡಿದೆ’ ಎಂದರು.

‘ಈಗ ಪ್ರಜ್ವಲ್ ಅವರನ್ನು ಅತ್ಯಾಚಾರಿ ಎಂದು ಕರೆಯುವ ಸಿದ್ದರಾಮಯ್ಯ 2019 ರ ಏಪ್ರಿಲ್‌ನಲ್ಲಿ ಕಡೂರಿನ ಎಪಿಎಂಸಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹಾಡಿ ಹೊಗಳಿದ್ದರು. ‘ಪ್ರಜ್ವಲ್‌ ಯುವ ನಾಯಕ, ಓಡಾಡಿ ಕೆಲಸ ಮಾಡ್ತಾರೆ. ಆದ್ದರಿಂದ ಅವರಿಗೇ ಮತ ನೀಡಿ ಗೆಲ್ಲಿಸಿಕೊಡಿ ಎಂದು ಟ್ವೀಟ್ ಮಾಡಿದ್ದರು. ಈ ಮೂಲಕ ಪ್ರಜ್ವಲ್ ಪರ ಕೆಲಸ ಮಾಡಿ ಸಿದ್ದರಾಮಯ್ಯ ಮತವನ್ನು ಯಾಚಿಸಿದ್ದರು’ ಎಂದು ಅಶೋಕ ಹೇಳಿದರು.

ಪ್ರಜ್ವಲ್‌ ರೇವಣ್ಣ ಮತ್ತು ಎಚ್‌.ಡಿ.ರೇವಣ್ಣ ಅವರ ಪ್ರಕರಣವನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ. ಆದರೆ, ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ತಿಳಿಸಿದರು.

‘ಬಿಜೆಪಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಷಯವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.