ಬೆಂಗಳೂರು: ‘ರಾಷ್ಟ್ರಪತಿ ಹಾಗೂ ಪ್ರಧಾನಿಯವರೆಗೂ ಎಲ್ಲರೂ ಮಾತನಾಡುತ್ತಿರುವಷ್ಟರ ಮಟ್ಟಿಗೆ ಕೃತಕ ಬುದ್ಧಿಮತ್ತೆ ಕ್ಷೇತ್ರ ಬೆಳೆದಿಲ್ಲ. ಆದರೆ ತಂತ್ರಜ್ಞಾನದ ಮೂಲ ಮಾದರಿಯನ್ನು ಭಾರತೀಯರು ಸಿದ್ಧಪಡಿಸಿದರೆ ಮಾತ್ರ, ಈ ಕ್ಷೇತ್ರದಲ್ಲಿ ಜಗತ್ತಿಗೆ ಗುರುವಾಗಲು ಸಾಧ್ಯ’ ಎಂದು ಗೂಗಲ್ ಸಂಶೋಧನಾ ಕೇಂದ್ರದ ಭಾರತೀಯ ವಿಭಾಗದ ಮುಖ್ಯಸ್ಥ ಮನೀಶ್ ಗುಪ್ತಾ ಹೇಳಿದರು.
ಬೆಂಗಳೂರು ತಂತ್ರಜ್ಞಾನ ಸಮ್ಮೇಳನ ‘ಅಪಾರ’ದ ಮೊದಲ ದಿನವಾದ ಮಂಗಳವಾರ ನಡೆದ ‘ಎಐ: ರಿಯಾಲಿಟಿ ವರ್ಸಸ್ ಹೈಪ್’ ಎಂಬ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನಾವು ಮತ್ತೊಂದು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್‌ಎಲ್‌ಎಂ) ಸೃಷ್ಟಿಸುವ ಅಗತ್ಯವಿಲ್ಲ. ಅದನ್ನು ಸಿಲಿಕಾನ್ ವ್ಯಾಲಿಯಲ್ಲಿ ಕೂತಿರುವವರು ಮಾಡಲಿ ಎಂದು ಇತ್ತೀಚೆಗೆ ಹೇಳಿಕೆ ನೀಡಿದ ನಂದನ್ ನಿಲೇಕಣಿ ಹೇಳಿದ್ದನ್ನು ನಾನು ಒಪ್ಪುವುದಿಲ್ಲ. ಹಿಂದೆ ಅವರು ಮಾಡಿದ್ದ ಕೆಲಸಕ್ಕೂ, ಈಗಿನ ಅವರ ಹೇಳಿಕೆಗೂ ಸಂಬಂಧವೇ ಇಲ್ಲದಂತಿದೆ. ನಾವೂ ಅಮೆರಿಕನ್ನರಂತೆ ಮೂಲ ಮಾದರಿಗಳನ್ನು ಸೃಷ್ಟಿಸಬೇಕೇ ಹೊರತು, ಸೃಷ್ಟಿಯಾಗಿರುವ ಕೃತಕ ಬುದ್ಧಿಮತ್ತೆ ತಂತ್ರಾಂಶದ ಪರಿಣಾಮಕಾರಿ ಬಳಕೆದಾರರಾಗುವುದರಲ್ಲಿ ಯಾವುದೇ ಶ್ರೇಷ್ಠತೆ ಇಲ್ಲ’ ಎಂದರು.
‘ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಅಗ್ಗದ ಹಾಗೂ ಮಧ್ಯಮ ಬೆಲೆಯ ಆ್ಯಂಡ್ರಾಯ್ಡ್ ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಮತ್ತೊಂದೆಡೆ ಕೃತಕ ಬುದ್ಧಿಮತ್ತೆಗೆ ಬೇಡಿಕೆ ಹೆಚ್ಚಿದೆ. ಈ ಅಂತರ ಕಿರಿದಾಗಲು ಇನ್ನೂ ಕೆಲ ವರ್ಷಗಳು ಬೇಕು. ಅದಕ್ಕಾಗಿ ಮೂಲ ಮಾದರಿಗಳ ಸೃಷ್ಟಿಯತ್ತ ಭಾರತ ಯೋಜನೆ ರೂಪಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಒಪನ್ ಎಐ ಕಂಪನಿಯ ಪ್ರಗ್ಯಾ ಮಿಶ್ರಾ ಮಾತನಾಡಿ, ‘ಕೃತಕ ಬುದ್ಧಿಮತ್ತೆ ಎಂಬುದು ವೈಯಕ್ತಿಕದಿಂದ ಆರಂಭಗೊಂಡು, ಸಮುದಾಯ, ರಾಷ್ಟ್ರ ಮತ್ತು ಜಾಗತಿಕ ಮಟ್ಟದವರೆಗೂ ಪ್ರಯೋಜನವಾಗುವಂತಿರಬೇಕು. ಈ ವಿಷಯದಲ್ಲಿ ಅಮೆರಿಕದ ತಂತ್ರಜ್ಞಾನ ನಮಗಿಂತ ತುಸು ಮುಂದಿದೆ. ನಾವು ಅದನ್ನು ಅನುಸರಿಸುತ್ತಿದ್ದೇವೆಯಷ್ಟೇ’ ಎಂದರು.
ದೆಹಲಿ ಐಐಟಿಯಲ್ಲಿರುವ ಇನ್ಫೊಸಿಸ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ಗಣೇಶ್ ಬಾಗ್ಲೆರ್, ‘ಕೃತಕ ಬುದ್ಧಿಮತ್ತೆ ಕುರಿತು ಸದ್ಯ ಅಗತ್ಯಕ್ಕಿಂತ ಹೆಚ್ಚಿನ ಮಾತುಗಳು ಕೇಳಿಬರುತ್ತಿವೆ. ಆದರೆ ನೀತಿ ನಿರೂಪಕರು ವಾಸ್ತವಾಂಶವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿಮತ್ತೆಯು ಐನ್‌ಸ್ಟೀನ್ ಸಿದ್ಧಾಂತಗಳನ್ನು ಮೀರಿಸುವಷ್ಟರ ಮಟ್ಟಿಗೆ ಬೆಳೆದಿಲ್ಲದಿರಬಹುದು. ಆದರೆ ಭವಿಷ್ಯದಲ್ಲಿ ಅದಕ್ಕಿಂತ ಉತ್ತಮ ಲೆಕ್ಕವನ್ನು ಮಾಡಿ ತೋರಿಸುವಷ್ಟರ ಮಟ್ಟಿಗೆ ಬೆಳೆಯುವ ಎಲ್ಲಾ ಸಾಧ್ಯತೆಗಳೂ ಇವೆ’ ಎಂದರು.
ಗೋಷ್ಠಿಯನ್ನು ಲೀಪ್‌ಮೈಲ್ ರೊಬೊಟಿಕ್ಸ್‌ನ ಸಿಇಒ ರವಿ ಗುರುರಾಜ್ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.