ADVERTISEMENT

ಬೆಂಗಳೂರು: ‘ರಂಗಾಯಣ ಘನತೆಗೆ ಧಕ್ಕೆ ತರಬೇಡಿ’

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿಕೆಗೆ ಕಲಾವಿದರು, ಲೇಖಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 21:21 IST
Last Updated 12 ಡಿಸೆಂಬರ್ 2021, 21:21 IST

ಬೆಂಗಳೂರು: ‘ರಂಗಾಯಣ ಮತ್ತು ಬಹುರೂಪಿಯನ್ನು ಹಗುರವಾಗಿ ನೋಡಬಾರದು ಹಾಗೂ ಗೌರವ ಹಾಳು ಮಾಡಬಾರದು’ ಎಂದು ಕಲಾವಿದರು, ಕವಿಗಳು, ಸಂಗೀತಗಾರರು, ಲೇಖಕರು, ವರ್ಣಚಿತ್ರಕಾರರು ಸೇರಿದಂತೆ 44 ಮಂದಿ ಆಗ್ರಹಿಸಿದ್ದಾರೆ.

ಮೈಸೂರಿನ ರಂಗಾಯಣದಲ್ಲಿನ ವಿದ್ಯಮಾನಗಳ ಕುರಿತಂತೆ ಅವರು ಈ ಬಗ್ಗೆ ವಿವರವಾದ ಹೇಳಿಕೆ ನೀಡಿದ್ದಾರೆ. ರಂಗಾಯಣದಲ್ಲಿ ದಶಕಗಳ ಕಾಲ ಕಾರ್ಯನಿರ್ವಹಿಸಿದ ನಟರು, ಅಧ್ಯಾಪಕರು ಮತ್ತು ಕೆಲವು ನಿರ್ದೇಶಕರು ಸಹ ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

‘ಈ ಬಾರಿಯ ಬಹುರೂಪಿ ನಾಟಕೋತ್ಸವ ತನ್ನ ಬಣ್ಣ ಬದಲಾಯಿಸುತ್ತಿರುವುದಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಬಹುರೂಪಿಯ ಸಮಾರಂಭಕ್ಕೆ ರಂಗಾಯಣ ಆಯ್ಕೆ ಮಾಡಿರುವ ಇಬ್ಬರು ಅತಿಥಿಗಳ ಬಗ್ಗೆ ರಂಗಭೂಮಿ ಕಲಾವಿದರು, ಲೇಖಕರು ಆಕ್ಷೇಪ ವ್ಯಕ್ತಪಡಿಸಿದಾಗ ಕಾರ್ಯಪ್ಪ ಅವರು ಇದು ಎಡಚರ ಅಡ್ಡಗಾಲು, ಕಿರುಕುಳ ಎಂದು ಟೀಕಿಸಿದ್ದಾರೆ. ಆದರೆ, ರಂಗಾಯಣವನ್ನು ಕಟ್ಟಿ ಬೆಳೆಸಿದ ಈವರೆಗಿನ ಅಧ್ಯಾಪಕರು, ನಿರ್ದೇಶಕರು, ರಂಗಾಸಕ್ತರು ಎಂದೂ ಈ ಸಂಸ್ಥೆಯನ್ನು ಎಡಚ, ಬಲಚ ಎಂದು ಭಾವಿಸಲೇ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಎರಡು ದಶಕಗಳಿಂದ ನಡೆಯುತ್ತಿರುವ ಬಹುರೂಪಿ ಉತ್ಸವಕ್ಕೆ ಸರ್ಕಾರ, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಆರ್ಥಿಕ ಬಲ ನೀಡಿದ್ದಾರೆ. ಆದರೆ, ಕಾರ್ಯಪ್ಪ ಅವರು ತಾವೇ ಸರ್ಕಾರದಿಂದ ಹಣ ತಂದಿರುವುದಾಗಿ ಹೇಳಿದ್ದಾರೆ. ಕಾರ್ಯಪ್ಪ ಅವರು ಆರ್‌ಎಸ್‌ಎಸ್‌ನಿಂದ ಬಂದವರು. ಆರ್‌ಎಸ್‌ಎಸ್‌ನ ಬಿಗಿ ಹಿಡಿತದಲ್ಲಿರುವ ಸರ್ಕಾರ, ಕಾರ್ಯಪ್ಪ ಅವರು ಕೇಳಿದಷ್ಟು ಹಣ ಕೊಟ್ಟಿರಬಹುದು. ಆದರೆ, ಈ ಹಣ ಯಾವುದೇ ಪಕ್ಷದ ಅಥವಾ ಸಂಸ್ಥೆಯ ಹಣವಲ್ಲ. ಇದು ಜನರ ಹಣ’ ಎಂದು ವಿವರಿಸಿದ್ದಾರೆ.

ಸರೋದ್‌ ವಾದಕ ಪಂಡಿತ ರಾಜೀವ ತಾರಾನಾಥ್, ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ, ಕವಿ ಮತ್ತು ರಂಗನಿರ್ದೇಶಕ ರಘುನಂದನ, ನಟ ಎಂ.ಸಿ. ಕೃಷ್ಣಪ್ರಸಾದ್, ನಟ ಎಸ್‌. ರಾಮು, ರಂಗನಿರ್ದೇಶಕಿ ಭಾಗೀರಥಿ ಬಾಯಿ ಕದಂ, ರಂಗ ನಿರ್ದೇಶಕ ವೆಂಕಟರಮಣ ಐತಾಳ, ರಂಗಕರ್ಮಿ ಮತ್ತು ನಿರ್ದೇಶಕ ಬಿ. ಸುರೇಶ, ವಿಮರ್ಶಕರಾದ ಎಚ್‌.ಎಸ್‌. ರಾಘವೇಂದ್ರ ರಾವ್‌ ಮತ್ತು ಓ.ಎಲ್‌.ನಾಗಭೂಷಣಸ್ವಾಮಿ, ಲೇಖಕ ರಾಜೇಂದ್ರ ಚೆನ್ನಿ, ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್‌ ಸೇರಿದಂತೆ 44 ಮಂದಿ ಈ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.