ಬೆಂಗಳೂರು:ದಶಕದ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು, ಬಂದ ಬಳಿಕ ಎದುರಾದ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅರುಣ್ ಜೇಟ್ಲಿ, ಕರ್ನಾಟಕದ ರಾಜಕಾರಣದಲ್ಲೂ ತಮ್ಮ ಗುರುತುಗಳನ್ನು ಮೂಡಿಸಿದ್ದರು.
2009ರಲ್ಲಿ ಗಾಲಿ ಜನಾರ್ದನ ರೆಡ್ಡಿ ನೇತೃತ್ವದ 40 ಶಾಸಕರು ಬಂಡಾಯ ಎದ್ದಾಗ ಅವರ ಬೆಂಬಲಕ್ಕೆ ಸುಷ್ಮಾ ಸ್ವರಾಜ್ ನಿಂತಿದ್ದರು. ಯಡಿಯೂರಪ್ಪ ಸರ್ಕಾರ ಸಂಕಷ್ಟಕ್ಕೆ ಸಿಲುಕಿತ್ತು. ಆ ಹೊತ್ತಿನಲ್ಲಿ ಪಕ್ಷದ ನಾಯಕರ ಜತೆ ಮಾತುಕತೆ ನಡೆಸಿದ್ದ ಜೇಟ್ಲಿ, ರಾಜಕೀಯ ಬಿಕ್ಕಟ್ಟನ್ನು ಸುಸೂತ್ರವಾಗಿ ಬಗೆಹರಿಸಿ ಯಡಿಯೂರಪ್ಪ ಸರ್ಕಾರ ಕಾಪಾಡಿದ್ದನ್ನು ಪಕ್ಷದ ಹಿರಿಯ ನಾಯಕರು ನೆನಪಿಸಿಕೊಳ್ಳುತ್ತಾರೆ.
ಕಮಲ ಪತಾಕೆ ಹಾರಿಸಿದ್ದ ಜೇಟ್ಲಿ: ಜೇಟ್ಲಿ ಅವರು ತನ್ನ ಛಾಪನ್ನು ಕರ್ನಾಟಕದಲ್ಲಿಯೂ ತೋರಿಸಿದ್ದರು. 2004ರಲ್ಲಿ ನಡೆದ ಲೋಕಸಭೆ ಚುನಾವಣೆಯ ಉಸ್ತುವಾರಿ ಕೂಡ ಜೇಟ್ಲಿ ಹೇಗಲೇರಿತ್ತು. 28 ಲೋಕಸಭಾ ಸ್ಥಾನಗಳ ಪೈಕಿ 18 ಸ್ಥಾನಗಳಲ್ಲಿ ಪಕ್ಷ ಗೆಲ್ಲಲು ಜೇಟ್ಲಿ ಅವರ ಕಾರ್ಯತಂತ್ರವೂ ನೆರವಾಗಿತ್ತು.
2006ರಲ್ಲಿ ಜೆಡಿಎಸ್ ಜತೆ ಸೇರಿದ್ದ ಯಡಿಯೂರಪ್ಪ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಉಪಮುಖ್ಯಮಂತ್ರಿಯಾಗಿದ್ದರು. 20 ತಿಂಗಳ ಬಳಿಕ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬೇಕಾದ ಎದುರಾದಾಗ, ಕುಮಾರಸ್ವಾಮಿ ತಮ್ಮ ನಿಲುವನ್ನು ಬದಲಾಯಿಸಿದ್ದರು. ಈ ಹೊತ್ತಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಕರ್ನಾಟಕದಲ್ಲಿ ಜಾರಿಯಾಗಿತ್ತು.
‘ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ದ್ರೋಹ ಎಸಗಿದ್ದಾರೆ’ ಎಂಬ ವಿಷಯವನ್ನೇ ಮುಂದಿಟ್ಟುಕೊಂಡು 2008ರಲ್ಲಿ ನಡೆದ ವಿಧಾನಸಭೆ ಚುನಾವಣೆ ಎದುರಿಸಲು ಯಡಿಯೂರಪ್ಪ ಸಜ್ಜಾಗಿದ್ದರು. ಅಂತಹ ಮಹತ್ವದ ಕಾಲಘಟ್ಟದಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನು ಜೇಟ್ಲಿ ಅವರಿಗೆ ಪಕ್ಷ ವಹಿಸಿತ್ತು. ಚುನಾವಣೆ ತಂತ್ರಗಾರಿಕೆ ಹೆಣೆದ ಜೇಟ್ಲಿ, 110 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು.
ಆದರೆ, ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಬಿಜೆಪಿಗೆ ದಕ್ಕಲಿಲ್ಲ. ಪಕ್ಷೇತರರಾಗಿ ಗೆದ್ದಿದ್ದ 6 ಶಾಸಕರ ಬೆಂಬಲ ಪಡೆದು, ಅಧಿಕಾರ ಹಿಡಿಯುವ ತಂತ್ರಗಾರಿಕೆಯನ್ನು ಬಿಜೆಪಿ ನಾಯಕರು ನಡೆಸಿದ್ದರು. ಅದರ ಹಿಂದಿನ ಸೂತ್ರಧಾರ ಜೇಟ್ಲಿಯೇ ಆಗಿದ್ದರು. ತನ್ಮೂಲಕ ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಬಿಜೆಪಿ ಸರ್ಕಾರ ರಚಿಸುವ ಕಮಲ ಪತಾಕೆ ಹಾರಿದಂತಾಗಿತ್ತು.
ಆದರೆ, ಈ ಸಂತೋಷ ಬಹುಕಾಲ ಉಳಿಯಲಿಲ್ಲ. ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದ ಜನಾರ್ದನ ರೆಡ್ಡಿ 40 ಶಾಸಕರನ್ನು ಕರೆದುಕೊಂಡು ಹೈದರಾಬಾದ್ ಹಾಗೂ ಗೋವಾದ ರೆಸಾರ್ಟ್‌ನಲ್ಲಿ ಕೂಡಿಟ್ಟಿದ್ದರು. ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಇಳಿಸುವುದು ಮೊದಲ ಕಾರ್ಯಸೂಚಿಯಾಗಿತ್ತು. ಆಗ ಮಧ್ಯ ಪ್ರವೇಶಿಸಿದ ಜೇಟ್ಲಿ, ಎಲ್ಲರನ್ನೂ ಒಂದುಗೂಡಿಸಿ, ಪರಿಹಾರದ ಸೂತ್ರ ಹೆಣೆದಿದ್ದರು.
2011ರಲ್ಲಿ ಮತ್ತೆ ಯಡಿಯೂರಪ್ಪ ಸರ್ಕಾರ ಸಂಕಷ್ಟಕ್ಕೆ ಸಿಲುಕಿತ್ತು. ಬಿಜೆಪಿಯ 11 ಹಾಗೂ ಪಕ್ಷೇತರರಾದ 5 ಶಾಸಕರು ಸೇರಿಕೊಂಡು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವುದಾಗಿ ರಾಜಭವನದ ಮೆಟ್ಟಿಲು ಹತ್ತಿದ್ದರು. ಸರ್ಕಾರವೇ ಬಿದ್ದು ಹೋಯಿತು ಎಂಬ ಸ್ಥಿತಿಯಲ್ಲಿ, ನೆರವಿಗೆ ಬಂದು ಪ್ರಮುಖ ಪಾತ್ರ ವಹಿಸಿದವರು ಅರುಣ್ ಜೇಟ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.