ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನನಗೂ ಹಾಗೂ ನಟ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ, ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಬುಧವಾರ ಸಂಜೆ ಟ್ವೀಟ್ ಮಾಡಿದ್ದಾರೆ.
‘ಚುನಾವಣೆ ಸಮೀಪಿಸುತ್ತಿದೆ. ನಮ್ಮ ತಂದೆಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ವಿರೋಧಿಗಳನ್ನು ಕಂಗೆಡಿಸಿವೆ. ಇದರಿಂದ ಹತಾಷೆಗೊಂಡಿರುವ ರಾಜಕೀಯ ವಿರೋಧಿಗಳು ಕುಂತಂತ್ರದ ಮೂಲಕ ತಂದೆಯವರಿಗೆ ಕೆಟ್ಟ ಹೆಸರು ತರಲು ಈ ರೀತಿಯ ಪ್ರಯತ್ನ ನಡೆಯುತ್ತಿರಬಹುದು’ ಎಂದಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾತನಾಡಿರುವ ಸಚಿವ ವಿ.ಸೋಮಣ್ಣ, ‘ನಾನು ರಾಜಕಾರಣಿ. ಯಾರೇ ತಪ್ಪು ಮಾಡಿದ್ದರೂ ತಪ್ಪೆ. ನನಗೆ ಯಾವುದೇ ಮಾಹಿತಿ ಇಲ್ಲ. 10ರಿಂದ 12 ವರ್ಷದಿಂದ ನನ್ನ ಮಗ ಬೇರೆ ಮನೆಯಲ್ಲಿದ್ದಾನೆ. ಏನೇನೋ ಮಾತನಾಡುವುದರಲ್ಲಿ ಅರ್ಥ ಇಲ್ಲ. ಸತ್ಯ ಸಂಗತಿ ತಿಳಿದುಕೊಂಡು ಪರಾಮರ್ಶೆ ಮಾಡಿ ಮಾತನಾಡಿ. ನನಗೆ ಸ್ವಲ್ಪವೂ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಪಬ್ ಒಂದರಲ್ಲಿ ನಟ ಸೃಜನ್ ಲೋಕೇಶ್ ಹಾಗೂ ಅರುಣ್ ಸೋಮಣ್ಣ ನಡುವೆ ಹೊಡೆದಾಟ ಅಥವಾ ಗಲಾಟೆ ಸಂಭವಿಸಿದೆ ಎಂದು ಕೆಲ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಆದರೆ, ಈ ಬಗ್ಗೆ ಸೃಜನ್ ಲೋಕೇಶ್ ಪ್ರತಿಕ್ರಿಯಿಸಿಲ್ಲ.
‘ಗಲಾಟೆ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.