ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೊ: ಸದನದಲ್ಲಿ ಕಣ್ಣೀರಿಟ್ಟ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST
   

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೋಮವಾರ ವಿಧಾನಸಭೆಯಲ್ಲಿ ಕಣ್ಣೀರಿಟ್ಟರು. ‘ಬಹಳಷ್ಟು ಮನನೊಂದಿದ್ದೇನೆ, ಆ ವಿಡಿಯೊ ನೋಡಿದರೆ ನಮ್ಮ ಕುಟುಂಬದವರು, ಮಕ್ಕಳು, ಸಂಬಂಧಿಗಳು ಏನಂದುಕೊಂಡಾರು’ ಎಂದು ಗದ್ಗದಿತರಾದರು.

‘ನನಗಾದ ಅವಮಾನ ಬೇರೆ ಯಾವ ನಾಯಕರಿಗೂ ಆಗಬಾರದು. ನೊಂದು, ಬೆಂದು ಹೋಗಿದ್ದೇನೆ. ಅಧಿಕಾರ ಅನುಭವಿಸಲು ವಾಮಮಾರ್ಗದ ಮೂಲಕ ಮಾನ ಹರಣ ಮಾಡಿದ್ದಾರೆ. ರಾಜಕಾರಣದಲ್ಲಿ ಇರಬಾರದು ಎಂಬ ದುರುದ್ದೇಶದಿಂದ ವಿಡಿಯೊ ಸೃಷ್ಟಿಸಲಾಗಿದೆ. ಬಿಜೆಪಿ ಹಾಗೂ ಆಡಳಿತ ಪಕ್ಷದವರು ಸೇರಿ ಹೀಗೆ ಮಾಡಿದ್ದಾರೆ. ತನಿಖೆಗೆ ಆದೇಶಿಸಬೇಕು’ ಎಂದು ಕಣ್ಣೀರು ಹಾಕುತ್ತಲೇ ಹೇಳಿದರು.

ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ, ಈಗಿನ ರಾಜಕಾರಣವನ್ನು ತಮ್ಮದೇ ವ್ಯಂಗ್ಯಭರಿತ ಧಾಟಿಯಲ್ಲಿ ವ್ಯಾಖ್ಯಾನಿಸಿ, ಮಹಾಭಾರತದಲ್ಲಿ ದ್ರೌಪದಿ ಸೀರೆ ಸೆಳೆಯುವ ಪ್ರಸಂಗಕ್ಕೆ ಹೋಲಿಸಿದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮಾತನಾಡಿದ ಕೆ.ಎಂ.ಶಿವಲಿಂಗೇಗೌಡ, ‘ಈಗ ನಾವೂ ವಸ್ತ್ರಾಪಹರಣಕ್ಕೆ ಒಳಗಾಗಿದ್ದೇವೆ. ಸಾಮಾಜಿಕ ಜಾಲತಾಣಗಳಿಂದಾಗಿ ಸದನದಲ್ಲಿ ಕುಳಿತುಕೊಳ್ಳುವಂತಿಲ್ಲ. ಶಾಸಕ ಅರವಿಂದ ಲಿಂಬಾವಳಿ ಅವರ ವಿಡಿಯೊ ನೋಡಿದ ಜನರು ನಮ್ಮನ್ನೂ ಪ್ರಶ್ನಿಸಿ, ಅವಮಾನಿಸುತ್ತಿದ್ದಾರೆ. ಶಾಸಕರನ್ನು ಇದೇ ರೀತಿ ನೋಡುವಂತಾಗಿದೆ’ ಎಂದರು.

ADVERTISEMENT

ಇದು ವೈಯಕ್ತಿಕ ವಿಚಾರ. ಇಲ್ಲಿ ಪ್ರಸ್ತಾಪಿಸುವುದು ಬೇಡ ಎಂದು ಸಭಾಧ್ಯಕ್ಷರು ತೆರೆ ಎಳೆದರು.

ರಾಜಕಾರಣಿಗಳ ಕೈವಾಡ

‘ನನ್ನ ವಿರುದ್ಧ ಅಶ್ಲೀಲ ವಿಡಿಯೊ ಸೃಷ್ಟಿಸುವಲ್ಲಿ ನಮ್ಮ ಪಕ್ಷದ ನಾಯಕರು ಷಡ್ಯಂತರ ನಡೆಸಿದ್ದು, ವಿರೋಧ ಪಕ್ಷದವರೂ ಕೈಜೋಡಿಸಿದ್ದಾರೆ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಯಲು ಮಾಡುತ್ತೇನೆ’ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.