ಬೆಂಗಳೂರು: ‘ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರಿಂದ, ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟವನ್ನು ಬುಧವಾರ ಸಂಜೆ ಅಂತ್ಯಗೊಳಿಸಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಮೊತ್ತ ಸೇರಿ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ ₹15,000 ಪ್ರೋತ್ಸಾಹಧನ ನೀಡಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರದಿಂದ ಹೋರಾಟ ಆರಂಭಿಸಿದ್ದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಸ್ಥಳಕ್ಕೆ ಭೇಡಿ ನೀಡಿ, ‘ಗೌರವಧನವನ್ನು ₹7,000ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದರು. ಇದಕ್ಕೆ ಒಪ್ಪದ ಕಾರ್ಯಕರ್ತೆಯರು, ಹೋರಾಟ ಮುಂದುವರಿಸಿದ್ದರು. ಇಡೀ ರಾತ್ರಿ ಉದ್ಯಾನದಲ್ಲಿ ಕಾರ್ಯಕರ್ತೆಯರು ಇದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿಯಾದ ಕಾರ್ಯಕರ್ತೆಯರ ನಿಯೋಗದ ಮುಖಂಡರು, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಮನವಿ ಆಲಿಸಿದ ಸಿದ್ದರಾಮಯ್ಯ, ‘ಇಲಾಖೆ ಸಚಿವರು, ಅಧಿಕಾರಿಗಳು ಹಾಗೂ ಸಂಘದ ಮುಖಂಡರ ಜೊತೆ ಫೆ. 23ರ ನಂತರ ಸಭೆ ನಡೆಸಲಾಗುವುದು. ಬೇಡಿಕೆ ಈಡೇರಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. ಇದಕ್ಕೆ ಒಪ್ಪಿದ ಮುಖಂಡರು, ‘ತಾತ್ಕಾಲಿಕವಾಗಿ ಹೋರಾಟ ಅಂತ್ಯಗೊಳಿಸುತ್ತೇವೆ’ ಎಂದು ಘೋಷಿಸಿದರು. ಬುಧವಾರ ಸಂಜೆಯೇ ಎಲ್ಲ ಕಾರ್ಯಕರ್ತೆಯರು ಹೋರಾಟ ಕೈಬಿಟ್ಟು ತಮ್ಮೂರಿನತ್ತ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.