ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕೊರೊನಾ ಸೋಂಕು ಕಾಡಲಾರಂಭಿಸಿದೆ. ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿದ್ದಾರೆ.
ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆರು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಕಾಣಿಸಿಕೊಂಡ ಬಳಿಕ ಸೋಂಕಿತರ ಸಂಪರ್ಕ ಪತ್ತೆ, ಮನೆ– ಮನೆ ಸಮೀಕ್ಷೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ. ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಹಿರಿಯ ನಾಗರಿಕರು ಸೇರಿದಂತೆ ಫಲಾನುಭವಿಗಳನ್ನು ಆರೋಗ್ಯ ಕೇಂದ್ರಗಳಿಗೆ ಕರೆತರುವ ಹೊಣೆ ಇವರ ಮೇಲಿದೆ.
ಕೋವಿಡ್ ಮೊದಲನೆ ಅಲೆಯಲ್ಲಿ ಸೋಂಕು ಸಮುದಾಯದ ಮಟ್ಟಕ್ಕೆ ವ್ಯಾಪಿಸಿಕೊಳ್ಳದ ಕಾರಣ ಆಶಾ ಕಾರ್ಯಕರ್ತೆಯರು ಅಷ್ಟಾಗಿ ಸೋಂಕಿತರಾಗಿರಲಿಲ್ಲ. ಆದರೂ 12 ಮಂದಿ ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದರು. ಅವರಲ್ಲಿ ಮೂವರ ಸಾವಿಗೆ ಕೋವಿಡ್ ಕಾರಣವಾಗಿತ್ತು. ಎರಡನೇ ಅಲೆಯಲ್ಲಿ ವೈರಾಣು ಬೆಂಗಳೂರು, ಮೈಸೂರಿನಂತಹ ಮಹಾನಗರಗಳ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ವೇಗವಾಗಿ ವ್ಯಾಪಿಸಿಕೊಳ್ಳುತ್ತಿದೆ.
ಸೋಂಕಿಗೆ ಐವರು ಸಾವು: ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಏಳು ಮಂದಿ ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. ಅವರಲ್ಲಿ ಐವರು ಕೋವಿಡ್‌ನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಬೀದರ್, ಬೆಂಗಳೂರು ಗ್ರಾಮಾಂತರ, ಹಾವೇರಿ, ಯಾದಗಿರಿ ಹಾಗೂ ಬಳ್ಳಾರಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿ ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಕುಟುಂಬಕ್ಕೆ ಕೇಂದ್ರ ಸರ್ಕಾರ ನೀಡುವ ₹ 50 ಲಕ್ಷ ಪರಿಹಾರವು ಕಳೆದ ವರ್ಷ ಮೃತಪಟ್ಟ ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರ ಕುಟುಂಬಕ್ಕೆ ಮಾತ್ರ ಸಂದಿದೆ.
‘ಕೋವಿಡ್ ಎರಡನೇ ಅಲೆಯ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಸೋಂಕಿತರಾಗುತ್ತಿದ್ದಾರೆ. ಕೆಲವರಿಗೆ ಆರೈಕೆಗೆ ತಗಲುವ ವೆಚ್ಚವನ್ನು ಕೂಡ ಭರಿಸಲು ಸಾಧ್ಯವಾಗುತ್ತಿಲ್ಲ. ಇಷ್ಟಾಗಿಯೂ ಜೀವದ ಹಂಗು ತೊರೆದು ಸಂಪರ್ಕಿತರ ಪತ್ತೆ, ಮನೆ ಮನೆ ಸಮೀಕ್ಷೆ ಸೇರಿದಂತೆ ವಿವಿದ ಕೆಲಸ ನಡೆಸುತ್ತಿದ್ದಾರೆ. ಸರ್ಕಾರವು ಇವರ ಸೇವೆಯನ್ನು ಕಡೆಗಣಿಸಿದೆ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.
‘ಆದ್ಯತೆಯ ಮೇರೆಗೆ ಆಶಾ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗಿದೆ. ಸೋಂಕಿತರಾದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಒದಗಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಸುರಕ್ಷತಾ ಸಾಧನಗಳಿಲ್ಲದೆ ಸೇವೆ’
‘ಮುಖಗವಸು, ಸೋಂಕು ನಿವಾರಕ ದ್ರಾವಣ, ಕೈಗವಸು ಸೇರಿದಂತೆ ವಿವಿಧ ಸುರಕ್ಷಾ ಸಾಧನಗಳನ್ನು ಒದಗಿಸದೆಯೇ ಕೋವಿಡ್ ನಿರ್ವಹಣೆಗೆ ಸೂಚಿಸಲಾಗುತ್ತಿದೆ. ಕೇವಲ ಪಲ್ಸ್ ಆಕ್ಸಿಮೀಟರ್‌ಗಳನ್ನು ಮಾತ್ರ ಒದಗಿಸಲಾಗಿದೆ. ಗೌರವಧನ ಬಿಡುಗಡೆಯಲ್ಲಿ ಕೂಡ ವಿಳಂಬವಾಗುತ್ತಿದೆ. ಮಾಸಿಕ ₹ 6 ಸಾವಿರ ನೀಡಲಾಗುತ್ತಿರುವ ಗೌರವಧನವನ್ನು ₹ 12 ಸಾವಿರಕ್ಕೆ ಏರಿಸುವ ಭರವಸೆಯನ್ನು ಸರ್ಕಾರ ಈ ಹಿಂದೆ ನೀಡಿದ್ದರೂ ಅನುಷ್ಠಾನವಾಗಿಲ್ಲ’ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಲು ಮನೆಗಳಿಗೆ ಭೇಟಿ ನೀಡಿದ ನಮ್ಮನ್ನು ಅಪರಾಧಿಗಳ ತರ ನೋಡಲಾಗುತ್ತಿದೆ. ನಮ್ಮ ಜತಗೆ ಕುಟುಂಬದ ಸದಸ್ಯರು ಕೂಡ ಸೋಂಕಿತರಾಗುವ ಅಪಾಯ ಎದುರಿಸುತ್ತಿದ್ದೇವೆ. ಸೋಂಕಿತರಾದವರು ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.