ಬೆಂಗಳೂರು: ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಬದಿಗಿಟ್ಟು, ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆರ್. ಅಶೋಕ ಅವರನ್ನು ಆಯ್ಕೆ ಮಾಡಿರುವ ಹಿಂದಿನ ಲೆಕ್ಕಾಚಾರಗಳೇನು ಎಂಬುದು ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ.
ಸಚಿವರಾಗಿ ಹಲವು ಖಾತೆ ನಿಭಾಯಿಸಿದ್ದರೂ ಅಶೋಕ ಅವರು, ಇಡೀ ರಾಜ್ಯದ ಒಕ್ಕಲಿಗ ನಾಯಕರಾಗಿ ಹೊರಹೊಮ್ಮಿದವರಲ್ಲ. ಈಗ ಪ್ರತಿನಿಧಿಸುತ್ತಿರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಬಿಟ್ಟರೆ, ಅದರಾಚೆಗೆ ತಮ್ಮ ಪ್ರಭಾವಳಿಯನ್ನು ವಿಸ್ತರಿಸಿಕೊಂಡವರೂ ಅಲ್ಲ. ‘ಹೊಂದಾಣಿಕೆ’ ರಾಜಕಾರಣದ ಅಪವಾದವನ್ನೂ ಬಿಜೆಪಿ ನಾಯಕರೇ ಅವರ ವಿರುದ್ಧ ಹೊರಿಸಿದ್ದೂ ಇದೆ. ಇಷ್ಟೆಲ್ಲ ಇದ್ದರೂ, ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ವೀಕ್ಷಕರು ಹೊತ್ತು ತಂದ ಹೆಸರು ಅಶೋಕ ಅವರೊಬ್ಬರದ್ದೇ ಆಗಿತ್ತು. ಶಾಸಕಾಂಗ ಪಕ್ಷದ ಸಭೆಯನ್ನು ‘ಶಾಸ್ತ್ರೋಕ್ತ’ವಾಗಿ ನಡೆಸಿ ಹೆಸರು ಸೂಚಿಸಿ, ಅನುಮೋದಿಸಿ, ಪ್ರಕಟಿಸುವ ಕೆಲಸವಷ್ಟೇ ಶುಕ್ರವಾರ ನಡೆಯಿತು.
ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಒಲೈಕೆ, ಒಕ್ಕಲಿಗರನ್ನು ಕಡೆಗಣಿಸಿಲ್ಲವೆಂಬ ಸಂದೇಶ ರವಾನೆ ಹಾಗೂ ವಿಧಾನಸಭೆ ಚುನಾವಣೆಗೆ ಮುನ್ನ ಅಶೋಕ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯವೂ ಈ ಆಯ್ಕೆಯ ಹಿಂದಿದೆ ಎನ್ನುತ್ತವೆ ಪಕ್ಷದ ಮೂಲಗಳು.
ಪಕ್ಷದ ಅಧ್ಯಕ್ಷರಾಗಿ ತಮ್ಮ ಮಗ ವಿಜಯೇಂದ್ರ ಅವರನ್ನು ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾದ ಯಡಿಯೂರಪ್ಪ, ಪಕ್ಷದಲ್ಲಿ ಮೇಲುಗೈ ಸಾಧಿಸಿದ್ದರು. ವಿರೋಧ ಪಕ್ಷದ ನಾಯಕನ ಆಯ್ಕೆ ವಿಷಯ ಬಂದಾಗ, ತಾವು ಹೇಳಿದಂತೆ ಕೇಳುವ ವ್ಯಕ್ತಿಯನ್ನೇ ಆ ಸ್ಥಾನಕ್ಕೆ ಕೂರಿಸಬೇಕೆಂಬ ಇರಾದೆ ಅವರಲ್ಲಿ ಸಹಜವಾಗಿಯೇ ಇತ್ತು. ತಮ್ಮ ಎದುರಾಳಿ ಬಣದ ಬಿ.ಎಲ್. ಸಂತೋಷ್ ಗುಂಪಿನವರಿಗೆ ಈ ಸ್ಥಾನ ದಕ್ಕಿದರೆ, ಸರ್ಕಾರದ ವಿರುದ್ಧ ಸದನದ ಒಳ–ಹೊರಗೆ ಸಂಘಟಿತ ಹೋರಾಟ ನಡೆಸಲಾಗದು. ಜತೆಗೆ, ಪಕ್ಷದ ಸಂಘಟನೆಗೂ ಅಡ್ಡಿಯಾಗಬಹುದೆಂಬ ಯಡಿಯೂರಪ್ಪ ಆಲೋಚನೆ ಈ ಆಯ್ಕೆಯ ಹಿಂದೆ ಕೆಲಸ ಮಾಡಿದೆ.
ಪದ್ಮನಾಭನಗರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪರ್ಧಿಸಿದ್ದ ಕನಕಪುರ ಹೀಗೆ ಎರಡು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರಿಷ್ಠರು ಅಶೋಕ ಅವರಿಗೆ ಒತ್ತಡ ಹೇರಿದ್ದರು. ಶಿವಕುಮಾರ್ ಎದುರು ಸ್ಪರ್ಧಿಸಿ, ಮುಖಭಂಗವಾಗಬಾರದೆಂಬ ಕಾರಣಕ್ಕೆ ಅಶೋಕ ಒಪ್ಪಿರಲಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ, ಉತ್ತಮ ಅವಕಾಶದ ಭರವಸೆಯನ್ನೂ ಆಗ ನೀಡಲಾಗಿತ್ತು. ಎರಡು ಕ್ಷೇತ್ರಗಳ ಸ್ಪರ್ಧೆ ತಮ್ಮನ್ನು ರಾಜಕೀಯವಾಗಿ ಮುಗಿಸುವ ತಂತ್ರದ ಭಾಗ ಎಂದೇ ಅಶೋಕ ಭಾವಿಸಿದ್ದುಂಟು. ಹಾಗಿದ್ದರೂ, ಕನಕಪುರದಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಶೋಕ, ಅದು ಸಿಗದೇ ಇದ್ದಾಗ ಮುನಿಸಿಕೊಂಡಿದ್ದರು. ವಿರೋಧ ಪಕ್ಷದ ನಾಯಕ ಸ್ಥಾನ ನೀಡುವ ಮೂಲಕ ಅವರನ್ನು ಸಮಾಧಾನಿಸುವ ಯತ್ನ ನಡೆಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಕಾಂಗ್ರೆಸ್‌ನಲ್ಲಿ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಅವರ ಬಳಿಯೇ ಇದೆ. ಒಕ್ಕಲಿಗ ಸಮುದಾಯದ ಮುನ್ನೆಲೆಯ ನಾಯಕರಾಗಿ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಈ ಹೊತ್ತಿನೊಳಗೆ, ಒಕ್ಕಲಿಗ ಪ್ರಾಬಲ್ಯವಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ, ಈ ಸಮುದಾಯಕ್ಕೆ ಪ್ರಾತಿನಿಧ್ಯವಿಲ್ಲವೆಂಬ ಸಂದೇಶ ಹೋದರೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಬಹುದೆಂಬ ಭಯವೂ ಈ ಆಯ್ಕೆಯ ಹಿಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.