ADVERTISEMENT

ಕೆಟ್ಟ ಕಾನೂನು ಸುವ್ಯವಸ್ಥೆ , ಕ್ರಿಮಿನಲ್‌ಗಳ ಅಟ್ಟಹಾಸ: ಅಶೋಕ ವಾಗ್ದಾಳಿ

ಅಪರಾಧಗಳ ಪ್ರಮಾಣ ಶೇ 20ರಿಂದ 30ರಷ್ಟು ಹೆಚ್ಚಳ: ಸರ್ಕಾರದ ವಿರುದ್ಧ ಆರ್‌.ಅಶೋಕ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 16:17 IST
Last Updated 14 ಫೆಬ್ರುವರಿ 2024, 16:17 IST
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್‌. ಅಶೋಕ ಮಾತನಾಡಿದರು
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್‌. ಅಶೋಕ ಮಾತನಾಡಿದರು   

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳ ಸಂಖ್ಯೆ ಏರಿಕೆ ಆಗಿರುವುದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖವಾಗಿದೆ. ಕ್ರಿಮಿನಲ್‌ಗಳ ಅಟ್ಟಹಾಸ ಹೆಚ್ಚಾಗಿದ್ದು, ಭಯೋತ್ಪಾದಕರಿಗೆ ಕರ್ನಾಟಕ ರಾಜ್ಯ ಸ್ಲೀಪರ್ ಸೆಲ್‌ ಆಗಿ ಪರಿಣಮಿಸಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹರಿಹಾಯ್ದರು.

ರಾಜ್ಯಪಾಲರ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಎನ್‌ಸಿಆರ್‌ಬಿ ವರದಿ ಪ್ರಕಾರ ಕಳೆದ 8–9 ತಿಂಗಳಲ್ಲಿ ಅಪರಾಧಗಳ ಪ್ರಮಾಣ ಶೇ 20ರಿಂದ 30ರಷ್ಟು ಹೆಚ್ಚಾಗಿದೆ.  ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಮಾಣವೂ ಶೇ 56ರಷ್ಟು ಹೆಚ್ಚಳವಾಗಿದೆ. 1,80,742 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.

‘ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಒಂದು ಕಾಲದಲ್ಲಿ ಸೇಫ್‌ಸಿಟಿ ಆಗಿದ್ದ ಬೆಂಗಳೂರು ಕ್ರೈಂ ಸಿಟಿಯಾಗಿ ಪರಿವರ್ತನೆಯಾಗಿದೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುಚ್ಚಿಕೊಂಡಿದ್ದ ಕ್ರಿಮಿನಲ್‌ಗಳು ಈಗ ಚಿಗುರಿಕೊಂಡಿದ್ದಾರೆ. ಪಿಎಫ್‌ಐ, ಕೆಎಫ್‌ಡಿಯಂತಹ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದರಿಂದ ಯಾವುದೇ ಭಯವಿಲ್ಲದೇ ಓಡಾಡಿಕೊಂಡಿದ್ದಾರೆ. ಕೋಲಾರ ಮತ್ತು ಶಿವಮೊಗ್ಗದಲ್ಲಿ ಸ್ಟೀಲ್‌ನಿಂದ ಮಾಡಿದ ಲಾಂಗು ಮಚ್ಚುಗಳ ಕಟೌಟ್‌ಗಳನ್ನು ನಿಲ್ಲಿಸಿ ಭಯಭೀತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಐಸಿಸ್‌ನಂತಹ ಭಯೋತ್ಪಾದನಾ ಸಂಘಟನೆಗಳಿಗೆ ಕರ್ನಾಟಕ ‘ಸ್ಲೀಪರ್ ಸೆಲ್‌’ ಆಗಿ‌ದೆ. ಎನ್‌ಐಎ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಎಂಟು ಶಂಕಿತ ಉಗ್ರರನ್ನು ಬಂಧಿಸಿದೆ. ಇವರು ರಾಜ್ಯದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ಮಾಡಿದ್ದರು. ಬಳ್ಳಾರಿಯಲ್ಲಿ ಬಂಧನಕ್ಕೆ ಒಳಗಾದ ಮಹಮ್ಮದ್‌ ಸುಲೇಮಾನ್‌ ‘ಕಿಂಗ್‌ ಪಿನ್‌’ ಆಗಿದ್ದು, ಅಮಾಯಕ ಯುವಕರ ತಲೆ ಕೆಡಿಸಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುವ ಕೆಲಸ ಮಾಡುತ್ತಿದ್ದ’ ಎಂದು ಅಶೋಕ ದೂರಿದರು.

ಬೆಳಗಾವಿ ವೆಂಟಮುರಿಯಲ್ಲಿ ದಲಿತ ಮಹಿಳೆಯ ಬೆತ್ತಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಪೊಲೀಸರು ಮಾಡಿದ್ದು, ಈ ಸಂಬಂಧ ನ್ಯಾಯಾಲಯವೂ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದೇ ರೀತಿ ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಏಳುಮಂದಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಯನ್ನೂ ಮುಚ್ಚಿ ಹಾಕಲು ಪೊಲೀಸರು ಪ್ರಯತ್ನ ನಡೆಸಿದರು. ಇದಕ್ಕಾಗಿ ಪೊಲೀಸರು ತನಿಖೆ ನಡೆಸದೇ ₹500ಕ್ಕೆ ರಾಜಿ ಮಾಡಿಸುವ ನಾಚಿಗೆಗೇಡಿನ ಕೃತ್ಯಕ್ಕೂ ಮುಂದಾದರು. ನೈತಿಕ ಪೊಲೀಸ್‌ಗಿರಿ ಬಗ್ಗೆ ಮಾತನಾಡುತ್ತಿದ್ದ, ಪ್ರಗತಿಪರರು, ಈ ಘಟನೆ ನಡೆದಾಗ ತುಟಿಬಿಚ್ಚದೇ ಮೌನವಹಿಸಿದ್ದು ಅಚ್ಚರಿಯ ಸಂಗತಿ. ಅಷ್ಟೇ ಅಲ್ಲ ದೂರು ಹಿಂದಕ್ಕೆ ಪಡೆಯಲು ಮಹಿಳೆಗೆ ₹50 ಲಕ್ಷ ಆಮಿಷವನ್ನೂ ಒಡ್ಡಲಾಯಿತು ಎಂದು ಅಶೋಕ ಹೇಳಿದರು.

‘ಜೆಸಿಬಿಯಲ್ಲಿ ಶಾಲೆಗೆ ಹೋಗುವ ಮಕ್ಕಳು’

ಒಂದೂ ಹೊಸ ಬಸ್ ಖರೀದಿಸದೇ ಸರ್ಕಾರ ಸುಳ್ಳು ಹೇಳುತ್ತಿದೆ. ಐದು ಗ್ಯಾರಂಟಿಯಲ್ಲ ಐವತ್ತು ಗ್ಯಾರಂಟಿಗಳನ್ನಾದರೂ ಜಾರಿ ಮಾಡಿ. ಆದರೆ ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡಬೇಡಿ ಎಂದು ಅಶೋಕ ಹೇಳಿದರು. ಶಕ್ತಿ ಯೋಜನೆ ಬಗ್ಗೆ ಸರ್ಕಾರ ಹೆಮ್ಮೆಯಿಂದ ಮಾತನಾಡುತ್ತದೆ. ಆದರೆ ವಾಸ್ತವವೇ ಬೇರೆ. ಶಾಲಾ ಮಕ್ಕಳು ಬಸ್ಸಿಲ್ಲದೇ ಜೆಸಿಬಿ ಕಲ್ಲು ತುಂಬಿಕೊಂಡ ಲಾರಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೆಚ್ಚು ಬಸ್‌ ಇಲ್ಲದ  ಮಾರ್ಗಗಳನ್ನು ರದ್ದು ಮಾಡಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ಗುಜರಿಗೆ ಹೋದ ಬಸ್ಸಿಗೆ ಪರ್ಯಾಯವಾಗಿ ಬಸ್ಸುಗಳನ್ನು ಖರೀದಿಸಲಾಗುತ್ತಿದೆಯೇ ಹೊರತು ಹೊಸ ಬಸ್ಸುಗಳನ್ನು ಖರೀದಿಸುತ್ತಿಲ್ಲ ಎಂದರು. ‘ವಿಳಂಬಕ್ಕೆ ಕೇಂದ್ರವನ್ನು ತೋರಿಸಬೇಡಿ’ ‘ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಬರ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿರಲಿಲ್ಲ. ಈಗ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರದ ಕಡೆ ಕೈ ತೋರಿಸಿಕೊಂಡು ವಿಳಂಬ ಮಾಡುತ್ತಿದೆ’ ಎಂದು ಅಶೋಕ ಆರೋಪಿಸಿದರು. ವಿರೋಧ ಪಕ್ಷದ ನಾಯಕರ ಆರೋಪವನ್ನು ಅಲ್ಲಗಳೆದ ಕಂದಾಯ ಸಚಿವ ಕೃಷ್ಣ ಬೈರೇಗೌಡ ‘ಅತಿವೃಷ್ಟಿ ಪ್ರವಾಹ ಸಂದರ್ಭಗಳಲ್ಲಿ ಮಾತ್ರ ಬೇಗ ಪರಿಹಾರ ನೀಡಲಾಗಿತ್ತು. ಬರ ಪರಿಹಾರವನ್ನು ಬೇಗ ನೀಡಿದ ಉದಾಹರಣೆಗಳಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.