ಬೆಂಗಳೂರು: ವಿಜಯಪುರದ ಬಳಿಕ ಕೋಲಾರದಲ್ಲಿ ದೇವಸ್ಥಾನದ ಆಸ್ತಿಗಳನ್ನು ವಕ್ಫ್ ಮಂಡಳಿ ಆಸ್ತಿ ಎಂದು ನಮೂದಿಸಲಾಗಿದೆ. ನಾಗಮಂಗಲ, ಚನ್ನಪಟ್ಟಣ, ಬೆಳಗಾವಿ ಮುಂತಾದ ಕಡೆಗಳಲ್ಲಿ ರೈತರ ಜಮೀನು ಕೊಳ್ಳೆ ಹೊಡೆಯಲು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜಮೀನು, ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿ ಮತ್ತು ಕಾಂಗ್ರೆಸ್ ವಿರುದ್ಧ ನ.4 ರಿಂದ ತೀವ್ರ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.
ಭೂಗಳ್ಳರು ಮಾತ್ರವಲ್ಲದೇ, ಸರ್ಕಾರವೇ ಅಧಿಕೃತವಾಗಿ ಒತ್ತುವರಿ ಆರಂಭ ಮಾಡಿದೆ. ಇದರ ವಿರುದ್ಧ ರೈತ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಬೇಕು. ಹಿಂದೆ ಮುಸ್ಲಿಂ ರಾಜರು ದಾಳಿ ಮಾಡಿದ್ದರು. ಅದೇ ರೀತಿಯಲ್ಲಿ ಈಗ ರೈತರು ಮತ್ತು ದೇವಾಲಯಗಳ ಜಮೀನಿನ ಕಬಳಿಕೆ ನಡೆಯುತ್ತಿದೆ. ಇಂತಹವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಸುತ್ತಿದ್ದಾರೆ ಎಂದರು.
ವಕ್ಫ್ ವಿರುದ್ಧ ರೈತರು ಹೋರಾಟ ಮಾಡುತ್ತಿದ್ದು. ಬಿಜೆಪಿ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ರೈತರಿಗೆ ನೋಟಿಸ್ ಕೊಟ್ಟ ಅಧಿಕಾರಿಯನ್ನು ಜೈಲಿಗೆ ಹಾಕಲು ಮುಖ್ಯಮಂತ್ರಿಗೆ ಧಮ್ ಇಲ್ಲ. ಇಲ್ಲಿ ರಾಜಕಾರಣಕ್ಕಿಂತ ರೈತರಿಗೆ ಉತ್ತರ ನೀಡುವುದು ಮುಖ್ಯ ಎಂದು ಅಶೋಕ ಹೇಳಿದರು.
ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, 1974 ರಲ್ಲಿ ಒಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇತ್ತು. ಆ ಗೆಜೆಟ್ ಅಧಿಸೂಚನೆ ವಾಪಸ್ ಪಡೆಯದಿದ್ದರೆ, ಮುಖ್ಯಮಂತ್ರಿಗಳ ವಕ್ಫ್ ಕುರಿತ ನೋಟಿಸ್ ವಾಪಸ್ ಪಡೆಯುವ ಬೊಗಳೆ ಭಾಷಣದಿಂದ ಪ್ರಯೋಜನ ಆಗದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.