ADVERTISEMENT

ಗೋಕಾಕದಲ್ಲಿ ಪೂಜಾರಿಗೆ, ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್: ಕತ್ತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 5:50 IST
Last Updated 26 ಸೆಪ್ಟೆಂಬರ್ 2019, 5:50 IST
   

ಬೆಳಗಾವಿ: ‘ಸದ್ಯದ ಪರಿಸ್ಥಿತಿ ‍ಪ್ರಕಾರ, ಉಪ ಚುನಾವಣೆಯಲ್ಲಿ ಗೋಕಾಕದಲ್ಲಿ ಅಶೋಕ ಪೂಜಾರಿ, ಕಾಗವಾಡ– ರಾಜು ಕಾಗೆ, ಅಥಣಿ– ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ’ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅನರ್ಹ ಶಾಸಕರಿಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಕೋರ್ಟ್‌ ತೀರ್ಪು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅನರ್ಹರ ಪರ ತೀರ್ಪು ಬಂದರೆ ಹೈಕಮಾಂಡ್‌ ಮಾಡುವ ನಿರ್ಧಾರಕ್ಕೆ ಬದ್ಧವಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ನಮ್ಮ ಕುಟುಂಬದವರಿಗೆ ಟಿಕೆಟ್‌ ಕೊಡಬೇಕು ಎಂದು ಅನರ್ಹ ಶಾಸಕರು ಹೇಳಿದ್ದಾರೆ. ಆದರೆ, ಪಕ್ಷದಿಂದ ಹೇಳಿದ್ದೇವೆಯೇ?’ ಎಂದು ಕೇಳಿದರು.

ADVERTISEMENT

‘ನೆರೆ ಸಂತ್ರಸ್ತರಿಗೆ ಈ ವೇಳೆಗಾಗಲೇ ಪರಿಹಾರ ಕೊಡಬೇಕಾಗಿತ್ತು. ಆದರೆ, ಮಳೆ ನಿಲ್ಲದೇ ಇರುವುದರಿಂದ ಈ ಕಾರ್ಯ ಸರಿಯಾಗಿ ನಡೆದಿಲ್ಲ. ಮಳೆ ನಿಲ್ಲುತ್ತಿದ್ದಂತೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಬರುತ್ತದೆ. ಅದನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು’ ಎಂದು ಸಮರ್ಥಿಸಿಕೊಂಡರು.

‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕಾರದಲ್ಲಿಲ್ಲ. ವಿರೋಧಪಕ್ಷದ ಅಧ್ಯಕ್ಷರೂ ಆಗಿಲ್ಲ. ಕೆಲಸವಿಲ್ಲ. ಹೀಗಾಗಿ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ’ ಎಂದು ಟೀಕಿಸಿದರು.

‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಮಾತು ಇಂದಿಗೂ ಪ್ರಸ್ತುತವಾಗಿದೆ. ಅವರು ದುರ್ಬಲ ಮುಖ್ಯಮಂತ್ರಿಯಲ್ಲ. ಇದನ್ನು ಸಿದ್ದರಾಮಯ್ಯ ಅರಿಯಬೇಕು’ ಎಂದು ತಿರುಗೇಟು ನೀಡಿದರು.

‘ನಾನು ಹಿರಿಯ ಶಾಸಕ. ಅದೃಷ್ಟ ಚೆನ್ನಾಗಿದ್ದರೆ ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.