ಬೆಂಗಳೂರು: ಆಶ್ರಯ ಮನೆಗಳ ಹಂಚಿಕೆಯಲ್ಲಿ ವ್ಯಾಪಕವಾಗಿರುವ ಅಕ್ರಮ ಮತ್ತು ಹಣದ ದುರುಪಯೋಗಕ್ಕೆ ಕಡಿವಾಣ ಹಾಕಲು ಗ್ರಾಮಸಭೆಗಳಿಗೆ ನೀಡಿದ್ದ ‘ಸಾರ್ವಭೌಮ’ ಅಧಿಕಾರಕ್ಕೆ ಕತ್ತರಿ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅಕ್ರಮ ಎಸಗುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮತ್ತು ಗ್ರಾಮಸಭೆಗಳು ತಯಾರಿಸುವ ಫಲಾನುಭವಿಗಳ ಪಟ್ಟಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತಹಶೀಲ್ದಾರ್ ಹಾಗೂ ಶಾಸಕರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿ ನಕಲಿ ಬಿಲ್ ಸೃಷ್ಟಿಸಿ ₹9.20 ಕೋಟಿ ಹಣ ದುರುಪಯೋಗ ಮಾಡಿರುವುದು ಪತ್ತೆಯಾಗಿದೆ. ಚಿತ್ರದುರ್ಗ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಪರಿಶೀಲಿಸಿದಾಗ, ಒಂದೇ ಮನೆಯನ್ನು ನಾಲ್ಕೈದು ಜನರಿಗೆ ಹಂಚಿದಂತೆ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಬಿಲ್ ಮೂಲಕ ಹಣ ಪಡೆಯಲಾಗಿದೆ. ಈ ಸಂಬಂಧ ತಾಲ್ಲೂಕು ಪಂಚಾಯ್ತಿಗಳ ಇ.ಒ, ಪಿಡಿಒ, ಪಂಚಾಯತ್ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದರು.
ನಿಯಮ ಕಠಿಣ: ಆಶ್ರಯ ಮನೆಗಳಿಗೆ ಫಲಾನುಭವಿಗಳ ಪಟ್ಟಿ ತಯಾರಿಸಿದ ಬಳಿಕ ಅದಕ್ಕೆ ಗ್ರಾಮಸಭೆಯ ಒಪ್ಪಿಗೆ ಇನ್ನು ಮುಂದೆ ಅಂತಿಮವಲ್ಲ. ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ತಹಶೀಲ್ದಾರ್, ಪಿಡಿಒಗಳನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಫಲಾನುಭವಿಗಳ ಪಟ್ಟಿಗೆ ಸಮಿತಿ ಒಪ್ಪಿಗೆ ಕಡ್ಡಾಯ. ಫಲಾನುಭವಿಗಳು ಅರ್ಹರೇ, ಅವರಿಗೇ ಮನೆ ದೊರಕಿದೆಯೇ ಎಂಬುದನ್ನು ಖಾತರಿಪಡಿಸುವ ಜವಾಬ್ದಾರಿಯೂ ಸಮಿತಿಯದು ಎಂದರು. ‘ಗ್ರಾಮಸಭೆಗಳ ಅಧಿಕಾರ ಮೊಟಕು ಮಾಡುತ್ತಿಲ್ಲ. ಆದರೆ, ಯೋಜನೆ ಉದ್ದೇಶ ಈಡೇರಬೇಕಾದರೆ ಮೇಲೊಂದು ಉಸ್ತುವಾರಿ ವ್ಯವಸ್ಥೆ ಇರಬೇಕು ಎಂಬುದು ಸರ್ಕಾರದ ಕಳಕಳಿ’ ಎಂದು ಸೋಮಣ್ಣ ಹೇಳಿದರು.ಅಕ್ರಮ ಎಸಗುವ ಉದ್ದೇಶದಿಂದಲೇ ಹಲವು ಜಿಲ್ಲೆಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಆಶ್ರಯ ಮನೆಗಳಿಗೆ ಅಳವಡಿಸಿದ್ದ ಜಿಪಿಎಸ್‌ಗಳನ್ನು ಕಿತ್ತು ಹಾಕಲಾ
ಗಿದೆ. ಈಗ ಜಿಪಿಎಸ್ ಜತೆ ಆ್ಯಪ್ ಬಳಕೆ ಮಾಡಲಾಗುತ್ತಿದೆ. ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗುವುದು ಎಂದು ಸಚಿವರು ತಿಳಿಸಿದರು. ವಿವಿಧ ಹೆಸರು
ಗಳಲ್ಲಿರುವ ವಸತಿ ಯೋಜನೆಗಳನ್ನು ಒಂದೇಸೂರಿನಡಿ ತರುವ ಉದ್ದೇಶ ಇದೆ. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದರು.
ವರ್ಷದೊಳಗೆ 1 ಲಕ್ಷ ಮನೆಗಳು
ರಾಜೀವ್‌ಗಾಂಧಿ ವಸತಿ ನಿಗಮದಡಿ ಬೆಂಗಳೂರಿನಲ್ಲಿ ಮುಂದಿನ ಡಿಸೆಂಬರ್ ಒಳಗೆ ಒಂದು ಲಕ್ಷ ಮನೆಯನ್ನು ನಿರ್ಮಿಸಲಾಗುವುದು. ಸಿದ್ದರಾಮಯ್ಯ ಅವಧಿಯಲ್ಲೇ ಈ ಯೋಜನೆಗೆ ತಯಾರಾಗಿದ್ದರೂ ಕಾರ್ಯಗತ ಆಗಿರಲಿಲ್ಲ ಎಂದು ಸೋಮಣ್ಣ ಹೇಳಿದರು.
‘ಮನೆಗಳ ನಿರ್ಮಾಣಕ್ಕೆ ಟೆಂಡರ್ ಪ್ಯಾಕೇಜ್ ನೀಡಿ ಹಣ ಬಿಡುಗಡೆ ಮಾಡಿದ್ದರೂ ಜಮೀನು ಹಸ್ತಾಂತರ ಮಾಡಿರಲಿಲ್ಲ. ₹3035 ಕೋಟಿ ಆರು ಪ್ಯಾಕೇಜ್‌ಗಳನ್ನು ನೀಡಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ಶೇ 90ರಷ್ಟು ಜಮೀನು ನೀಡಲಾಗಿದೆ. ಜನವರಿ 15 ರಿಂದ ಕಾಮಗಾರಿ ಆರಂಭವಾಗಲಿದೆ’ ಎಂದು ತಿಳಿಸಿದರು. ಜಿ+3 ರಿಂದ ಜಿ+9 ರವರೆಗೆ ಬಹು ಮಹಡಿ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುವುದು ಎಂದರು.
ಎಂಟು ಜಿಲ್ಲೆಗಳಲ್ಲಿ ಕೆಎಚ್‌ಬಿ ಮನೆ: ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಿ ರಿಯಾಯ್ತಿ ದರದಲ್ಲಿ ಹಂಚಿಕೆ ಮಾಡಲಾಗುವುದು. ಈ ಯೋಜನೆಗೆ ₹1,000 ಕೋಟಿ ಹೂಡಿಕೆ ಮಾಡಲಾಗುವುದು. ಮನೆ ಖರೀದಿಸುವವರಿಗೆ ಜಮೀನಿನ ವೆಚ್ಚ ವಿಧಿಸುವುದಿಲ್ಲ. ಅಲ್ಲದೆ, ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸೋಮಣ್ಣ ಹೇಳಿದರು.
***
ನೆಪ ಹೇಳದೆ ಎಲ್ಲ ಬಡವರಿಗೂ ಮನೆ ಕಟ್ಟಿಸಿಕೊಡಲು ಮುಖ್ಯಮಂತ್ರಿ ಕಟ್ಟಪ್ಪಣೆ ಮಾಡಿದ್ದಾರೆ. ಜಡ್ಡುಗಟ್ಟಿರುವ ಅಧಿಕಾರಿಗಳಿಂದ ಹೇಗೆ ಕೆಲಸ ತೆಗೆಸಬೇಕು ಎಂಬುದು ಗೊತ್ತಿದೆ.
- ವಿ.ಸೋಮಣ್ಣ, ವಸತಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.