ADVERTISEMENT

ಅಷ್ಟಮಠದ ಯತಿಗಳ ಕಚ್ಚೆ, ಕೈ–ಬಾಯಿ ಸ್ವಚ್ಛವಾಗಿಲ್ಲ: ಸಾತಿ ಸುಂದರೇಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜುಲೈ 2018, 7:59 IST
Last Updated 22 ಜುಲೈ 2018, 7:59 IST
   

ದಾವಣಗೆರೆ: ‘ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ನಂತರದ ಬೆಳವಣಿಗೆ ನೋಡಿದರೆ ಉಡುಪಿಯ ಅಷ್ಟಮಠಗಳ ಯತಿಗಳ ಕಚ್ಚೆ, ಕೈ ಹಾಗೂ ಬಾಯಿ ಸ್ವಚ್ಛವಾಗಿರಲಿಲ್ಲ ಎಂಬುದು ಗೊತ್ತಾಗುತ್ತದೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಆರೋಪಿಸಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಮ್ಮ ತಾಲ್ಲೂಕು– ನಮ್ಮ ಜನ– ನಮ್ಮ ಅಭಿವೃದ್ಧಿ’ ಸಭೆಯನ್ನು ಉದ್ಘಾಟಿಸಿದ ಅವರು, ‘ದುಡಿಯುವ ವರ್ಗದವರು ಅಷ್ಟಮಠಗಳ ಬಗ್ಗೆ ಅಪಾರವಾದ ಭಕ್ತಿ ಹೊಂದಿದ್ದರು. ಆದರೆ, ಅಲ್ಲಿನ ಸ್ವಾಮೀಜಿಗಳು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಅವರೇ ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಅಷ್ಟಮಠಗಳ ಯತಿಗಳು ಭಕ್ತರ ಮನಸ್ಸಿನ ಮೇಲೆ ದೊಡ್ಡ ಪ್ರಹಾರ ಮಾಡಿದ್ದಾರೆ’ ಎಂದು ದೂರಿದರು.

‘ಶ್ರೀಕೃಷ್ಣ ಪರಮಾತ್ಮ 16 ಸಾವಿರ ಗೋಪಿಕೆಯರೊಂದಿಗೆ ಸಂಬಂಧ ಹೊಂದಿದ್ದ ಎಂಬುದನ್ನು ಪುರಾಣದಲ್ಲಿ ಹೇಳಲಾಗಿದೆ. ಅದೇ ದೇವರನ್ನು ಪೂಜೆ ಮಾಡುವ ಅಷ್ಟಮಠಗಳ ಯತಿಗಳು ‘ಕೃಷ್ಣನ ಪರಂಪರೆ’ಯನ್ನು ಮುಂದಿರಿಸಿಕೊಂಡು ಬಂದಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಮೋಸ ಮಾಡುವ ಕಾವಿಧಾರಿಗಳ ಬಗ್ಗೆ ದುಡಿಯುವ ವರ್ಗ ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಹೇಳಿದರು.

ADVERTISEMENT

‘ಬಿಜೆಪಿ, ಸಂಘ ಪರಿವಾರದ ಮುಖವಾಣಿಯಂತೆ ಮಾತನಾಡುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯೂ ಹೆಂಗಸರ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಕುರಿತು ಶಿರೂರು ಸ್ವಾಮೀಜಿ ತಮ್ಮ ಆಪ್ತರೊಂದಿಗೆ ಮಾತನಾಡುತ್ತಿದ್ದ ಆಡಿಯೊ ಬಿಡುಗಡೆಯಾಗಿದೆ. ಸ್ವಾಮೀಜಿಗಳು ರಿಯಲ್‌ ಎಸ್ಟೇಟ್‌ ದಂಧೆಯಲ್ಲೂ ಭಾಗಿಯಾಗಿದ್ದರು ಎನ್ನಲಾಗಿದೆ. ಸಾಯುವ ಎರಡು ದಿನಗಳ ಹಿಂದೆ ತಮಗೆ ಜೀವಬೆದರಿಕೆ ಇದೆ ಎಂದು ಶಿರೂರು ಶ್ರೀಗಳು ಹೇಳಿದ್ದರು. ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.