ADVERTISEMENT

ಕಾಂಗ್ರೆಸ್‌ ನಾಯಕರು ತಮ್ಮ ಆಸ್ತಿ ಹಂಚಲಿ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 14:43 IST
Last Updated 22 ಏಪ್ರಿಲ್ 2024, 14:43 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ದೇಶದ ಜನರ ಆಸ್ತಿ ಕಿತ್ತುಕೊಂಡು ಮರುಹಂಚಿಕೆ ಮಾಡುವುದಕ್ಕೂ ಮೊದಲು ಕಾಂಗ್ರೆಸ್‌ ನಾಯಕರು ತಮ್ಮ ಆಸ್ತಿಯನ್ನು ಹಂಚಿಕೆ ಮಾಡಲಿ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ದೇಶದ ಜನರ ಆಸ್ತಿಯನ್ನು ಸಮೀಕ್ಷೆ ಮಾಡಿ ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದೆ. ಮೊದಲಿಗೆ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಅವರ ಆಸ್ತಿಯನ್ನು ಹಂಚಿಕೆ ಮಾಡಲಿ ಎಂದರು.

ಯುಪಿಎ ಅವಧಿಯ ಪ್ರಧಾನಿ ಆಗಿದ್ದ ಡಾ.ಮನಮೋಹನ್‌ ಸಿಂಗ್ ಅವರು ದೇಶದ ಸಂಪತ್ತಿನ ಮೊದಲ ಹಕ್ಕು ಮುಸ್ಲಿಮರದು ಎಂದು ಹೇಳಿದ್ದರು. ಈಗ ರಾಹುಲ್‌ಗಾಂಧಿ ನೇತೃತ್ವದ ಕಾಂಗ್ರೆಸ್‌ ದೇಶದ ಜನರ ಸಂಪತ್ತನ್ನು ಕಿತ್ತುಕೊಂಡು ಮುಸ್ಲಿಮರಿಗೆ ಮರು ಹಂಚಿಕೆ ಮಾಡಲು ಹೊರಟಿದೆ ಎಂದು ಹೇಳಿದರು.

ADVERTISEMENT

‘ನಾವು ಹಿಂದೂ– ಮುಸ್ಲಿಂ ಎಂದು ತುಷ್ಟೀಕರಣ ಮಾಡದೇ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಈ ದೇಶದ ಸಂಪತ್ತಿನ ಮೊದಲ ಹಕ್ಕು ಬಡವರಿಗೆ ಸೇರಬೇಕು. ಆದರೆ, ಕಾಂಗ್ರೆಸ್‌ ಪಕ್ಷ ಮುಸ್ಲಿಮರಿಗೆ ಮೊದಲ ಹಕ್ಕು ಎನ್ನುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ’ ಅವರು ಟೀಕಿಸಿದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಕಾರ್ಪೊರೇಟರ್‌ ಮಗಳ ಹತ್ಯೆ ಕುರಿತು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಎಸ್‌ಡಿಪಿಐ ಮತ್ತು ಪಿಎಫ್‌ಐ ಜತೆ ಸಂಬಂಧ ಬೆಸೆದಿರುವ ಕಾಂಗ್ರೆಸ್‌ನಿಂದ ಹಿಂದೂಗಳು ನ್ಯಾಯ ನಿರೀಕ್ಷಿಸುವುದು ಕಷ್ಟ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.