ADVERTISEMENT

ಕುಮಾರಸ್ವಾಮಿ ಕಣ್ಣೀರಿನಿಂದ ಕುಟುಂಬಕ್ಕಷ್ಟೇ ಲಾಭ: ಅಶ್ವತ್ಥನಾರಾಯಣ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2022, 10:07 IST
Last Updated 10 ಆಗಸ್ಟ್ 2022, 10:07 IST
ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಎಚ್‌.ಡಿ.ಕುಮಾರಸ್ವಾಮಿ
ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಕುಮಾರಸ್ವಾಮಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅಶ್ವತ್ಥನಾರಾಯಣ, ‘ಕೆಂಗಲ್‌ ಹನುಮಂತಯ್ಯ ಅವರು ಭವ್ಯ ವಿಧಾನ ಸೌಧ ಕಟ್ಟಿಕೊಟ್ಟರೂ ತಾಜ್‌ ವೆಸ್ಟ್‌ಎಂಡ್‌ನಲ್ಲಿ ಕುಳಿತು ಸರ್ಕಾರ ನಡೆಸಿದ ಕುಮಾರಸ್ವಾಮಿ ಅವರೇ, ಅಂದು ತಮ್ಮನ್ನು ವಿಧಾನ ಸೌಧದಲ್ಲಿ ಹುಡುಕಿದರೆ ಸಿಗಲಿಲ್ಲ, ಕಷ್ಟ ಹೇಳಿಕೊಳ್ಳಲು ಬಂದ ಜನತೆಗೆ ತಾಜ್‌ ವೆಸ್ಟ್‌ ಎಂಡ್‌ ಒಳಗೆ ಬಿಡಲಿಲ್ಲ. ಎಲ್ಲಿದ್ದೀರಿ ಎಂದು ಜನ ಕೇಳಿದಾಗ ಉತ್ತರಿಸಲಿಲ್ಲ’ ಎಂದು ಟೀಕಿಸಿದ್ದಾರೆ.

‘ಇದೇ ಕುಮಾರಸ್ವಾಮಿಯವರನ್ನು 2006ರಲ್ಲಿ ನಮ್ಮ ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಅಧಿಕಾರದಾಸೆಗೆ ಕೊಟ್ಟ ಮಾತು ತಪ್ಪಿ ನಡೆವಾಗ ನಾಚಿಕೆ ಆಗಲಿಲ್ಲವೇ? ಮುಂದಿನಿಂದ ನಂಬಿಸಿ, ಹಿಂದಿನಿಂದ ಚೂರಿ ಹಾಕುವ ಕಲೆಯನ್ನು ಎಲ್ಲಿ ಕಲಿತಿರಿ ಕುಮಾರಸ್ವಾಮಿಯವರೇ?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಜನರೇ ಬಹಿಷ್ಕಾರ ಹಾಕಿ, ಅಧಿಕಾರದಿಂದ ದೂರವಿಟ್ಟಿದ್ದ ಕಾಂಗ್ರೆಸ್‌ ಪಕ್ಷದ ಜತೆ ಮೈತ್ರಿ ಮಾಡಿಕೊಂಡು, ತಂತಿಯ ಮೇಲೆ ನಡೆಯುತ್ತಿದ್ದೇನೆ ಎನ್ನುವಾಗ ನಾಡಿನ ಜನತೆಗೆ ಮೋಸ ಮಾಡಿದ್ದೇನೆಂಬ ಪಾಪ ಪ್ರಜ್ಞೆ ಕಾಡಲಿಲ್ಲವೇ ಕುರ್ಚಿಯಾಸೆಗೆ ಕಳ್ಳರ ಜತೆಗೂ ಸೇರುತ್ತೇನೆಂಬುದನ್ನು ಸಾಬೀತುಪಡಿಸಿದ ತಮ್ಮ ಕಳ್ಳಾಟಗಳನ್ನು ಎಷ್ಟು ದಿನ ಬಚ್ಚಿಡಬಲ್ಲಿರಿ?’ ಎಂದು ಕೇಳಿದ್ದಾರೆ.

‘ಗೆದ್ದಿದ್ದು ಮೂರು ಮತ್ತೊಂದು ಸೀಟ್‌ ಆದರೂ ಗೆದ್ದಲು ಕಟ್ಟಿದ ಹುತ್ತದಲ್ಲಿ ಸೇರಿಕೊಂಡ ಹಾವಿನಂತೆ ಕಳ್ಳದಾರಿಯಲ್ಲಿ ಸಿಎಂ ಆದದ್ದು ಯಾರು? ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಿ ಚುಂಚನಗಿರಿ ಶ್ರೀಗಳ ಫೋನ್‌ ಕದ್ದಾಲಿಕೆ ಮಾಡಿದ ಕುಮಾರಸ್ವಾಮಿ ಅವರನ್ನು ಎಲ್ಲಿದ್ದೀರಿ ಎಂದು ಕೇಳಿದರೆ ವಿಷ ಸರ್ಪದಂತೆ ಬುಸುಗುಡುವುದೇಕೆ?’ ಎಂದು ಟ್ವೀಟಿಸಿದ್ದಾರೆ.

‘ಕಾಂಗ್ರೆಸ್‌ ಜತೆ ಸೇರಿ ಶ್ರೀಮತಿ ಸುಮಲತಾ ಅಂಬರೀಷ್‌ ಅವರನ್ನು ಸೋಲಿಸಲು ಹಣದ ಹೊಳೆಯನ್ನೇ ಹರಿಸಿದ ಕುಮಾರಸ್ವಾಮಿಯವರೆಷ್ಟು ಶುದ್ದಹಸ್ತರು? ಅವರಾಡುವ ಮಾತೆಷ್ಟು ಸತ್ಯ ಎಂದು ಕೇಳಿದರೆ ಕಳ್ಳರಂತೆ ನುಣುಚಿಕೊಳ್ಳುವುದೇಕೆ? ಐಎಂಎ ಹಗರಣದಲ್ಲಿ ತಮಗೂ ಪಾಲು ನೀಡಲು ಹಣ ಸಂಗ್ರಹವಾಗಿತ್ತಂತೆ. ಎಷ್ಟು ತಲುಪಿದೆ? ಇನ್ನೆಷ್ಟು ಬರಬೇಕು?’ ಎಂದು ಪ್ರಶ್ನಿಸಿದ್ದಾರೆ.

‘ಕುಮಾರಸ್ವಾಮಿಯವರ ಬುಟ್ಟಿಯಲ್ಲಿ ಯಾವ ಹಾವಿದೆ ಎಂದು ನಾಡಿನ ಜನತೆಗೇ ಗೊತ್ತಿದೆ. ಸುಮ್ಮನೆ ಹಾವಿದೆ, ಹಾವಿದೆ ಎಂದು ಊರೆಲ್ಲಾ ಡಂಗುರ ಸಾರಿ ಹೆದರಿಸುವ ತಂತ್ರವೇಕೆ? ಎಲ್ಲಿಟ್ಟಿದ್ದೀರಿ ನಿಮ್ಮ ದಾಖಲೆಗಳನ್ನು? ಗೆದ್ದಲು ಹಿಡಿಯುವ ಮುನ್ನ ಬಹಿರಂಗಪಡಿಸಿ ಸ್ವಾಮಿ. ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ?’ ಎಂದು ಕೇಳಿದ್ದಾರೆ

‘ಕುಟುಂಬ ರಾಜಕಾರಣ ಮಾಡಬೇಡಿ ಎಂದರೆ ಮೈಮೇಲೆ ಬಂದವರಂತೆ ವರ್ತಿಸುವುದೇಕೆ? ಹೋದಲ್ಲೆಲ್ಲಾ ಕಣ್ಣೀರು ಸುರಿಸುವ ನಾಟಕವೇಕೆ? ಅಧಿಕಾರ ಸಿಗದಿದ್ದರೆ ಸಾಯುತ್ತೇನೆಂಬ ಮಾತೇಕೆ? ಬ್ಲ್ಯಾಕ್‌ಮೇಲ್‌ ಕುಮಾರಸ್ವಾಮಿ ಅವರ ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ನೀಡುವ ಧೈರ್ಯ ಇದೆಯೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ–ನಕಲಿ ಸರ್ಟಿಫಿಕೇಟ್ ರಾಜ, ಎಲ್ಲಿದ್ದೀಯಪ್ಪಾ ಅಶ್ವತ್ಥನಾರಾಯಣ: ಕುಮಾರಸ್ವಾಮಿ ಟೀಕೆ

‘ಸಿದ್ದರಾಮಯ್ಯರನ್ನ ಸೋಲಿಸಿದ ಜಿ.ಟಿ. ದೇವೇಗೌಡ ಅವರನ್ನೇ ಮೂಲೆಗುಂಪು ಮಾಡಿದ್ದೀರಿ. ಸೂಟ್‌ಕೇಸ್‌ ಕೊಟ್ಟರೆ ತಮ್ಮ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್‌ ಸಿಗುತ್ತದೆಂದು ನಿಮ್ಮ ಸ್ವಂತ ಅಣ್ಣನ ಮಗನೇ ಹೇಳಿದ್ದು ನೆನಪಿದೆಯೇ? ಈ ಬಾರಿ ಸೂಟ್‌ಕೇಸ್‌ನಲ್ಲಿ ಎಷ್ಟಿದ್ದರೆ ಟಿಕೆಟ್‌ ಸಿಗುತ್ತದೆ ಸ್ವಾಮಿ? ಎಂದು ನಿಮ್ಮ ಪಕ್ಷದವರೇ ಕೇಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ರಾಜಕೀಯ ಜೀವನಕ್ಕೆ ನೆಲೆ ಕಲ್ಪಿಸಿದ ರಾಮನಗರಕ್ಕೆ ಏನು ಕೊಡುಗೆ ನೀಡಿದ್ದೀರಿ? ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಿಸಿದ್ದೀರಾ? ಕೊಳಗೇರಿಯ ಅಭಿವೃದ್ಧಿ ಮಾಡಿದ್ದೀರಾ? ಎಲ್ಲಿದ್ದೀರಿ ಎಂದು ಜನತೆ ಕೇಳುವಾಗ ಕ್ಯಾಸಿನೋದಲ್ಲಿದ್ದವರು, ನಮ್ಮ ಸರ್ಕಾರ ರಾಮನಗರದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಸಹಿಸಲಾರದೇ ಬೊಬ್ಬೆ ಹೊಡೆಯುತ್ತಿರುವುದೇಕೆ?’ ಎಂದು ಕೇಳಿದ್ದಾರೆ.

‘ರಾಮನಗರ ಜಿಲ್ಲೆಯ ಕೇತೋಹಳ್ಳಿಯಲ್ಲಿ ಎಷ್ಟು ಭೂಮಿಯನ್ನು ಲಪಟಾಯಿಸಿದ್ದೀರಿ ಕುಮಾರಸ್ವಾಮಿ ಅವರೇ? ತನ್ನದು ರಾಮನಗರದ್ದು ತಾಯಿ ಮನಗ ಸಂಬಂಧ ಎನ್ನುವ ತಾವು ರಾಮನಗರವನ್ನು ನಿರ್ಲಕ್ಷ್ಯ ಮಾಡಿದ್ದೇಕೆ? ಇದು ತಾಯಿಗೇ ಮೋಸ ಮಾಡಿದಂತಲ್ಲವೇ? ಈ ರೀತಿ ಮಾಡಲು ಆತ್ಮಸಾಕ್ಷಿ ಒಪ್ಪುತ್ತದೆಯೇ?’ ಟ್ವೀಟ್‌ ಮಾಡಿದ್ದಾರೆ.

'ಸುಳ್ಳು ದಾಖಲೆ ಸೃಷ್ಟಿಯ ಶೂರ' ನನ್ನ ಮೇಲೆ ವಿನಾಕಾರಣ ಆರೋಪ ಮಾಡುವ ಬದಲು ಸಾಕ್ಷಿ ಇದ್ದರೆ ಬಹಿರಂಗಪಡಿಸಲಿ. ಗಾಳಿಯಲ್ಲಿ ಗುಂಡು ಹಾರಿಸುವುದು, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು, ಹಿಟ್ ಎಂಡ್ ರನ್ ಮಾಡಿ ಸಿಕ್ಕಿ ಬೀಳ್ತೀನಿ ಅಂದಾಗ ಕಣ್ಣೀರು ಹಾಕಿ ಗಮನ ಸೆಳೆಯೋ ಕಣ್ಣೀರ್ ಸ್ವಾಮಿ. ಇದೇ ನಿಮ್ಮ ಪಕ್ಷದ ಸಿದ್ಧಾಂತವೇ?’ ಎಂದು ಹರಿಹಾಯ್ದಿದ್ದಾರೆ.

‘2 ಬಾರಿ ಮುಖ್ಯಮಂತ್ರಿ ಆದಾಗ ತಾವು ರಾಮನಗರಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ದಾಖಲೆ ಬಿಚ್ಚಿಡಲಾ ಎಂದು ಕೇಳುತ್ತಿದ್ದೀರಿ. ಏನೇನು ಬಿಚ್ಚುತ್ತೀರೋ ಬಿಚ್ಚಿ, ಅದೇನು ನಕಲಿ ಸರ್ಟಿಫಿಕೇಟ್‌ ಎಂದು ಬಾಯಿಬಿಡಿ. ಈ ಬಹಿರಂಗ ಸವಾಲನ್ನು ಸ್ವೀಕರಿಸುವಿರೋ ಅಥವಾ ಉತ್ತರ ಕುಮಾರನಂತೆ ಅಡಗಿ ಕೂರುವಿರೋ?’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.