ಬೆಂಗಳೂರು: ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ಎನಿಸಿರುವ ‘ಬೆಂಗಳೂರು ಟೆಕ್ ಶೃಂಗ 2024’ಕ್ಕೆ ನಗರದ ಅರಮನೆ ಆವರಣದಲ್ಲಿ ಮಂಗಳವಾರ (ನ.19 ರಿಂದ 21) ಚಾಲನೆ ಸಿಗಲಿದೆ.
ಈ ಬಾರಿಯ ಶೃಂಗದ ವಿಷಯ ‘ಅನ್‌ಬೌಂಡ್’ (ಅನಿಯಮಿತ) ಎಂಬುದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೃಂಗವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ.
ನವೋದ್ಯಮಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಜಾಗತಿಕ ಪಾಲುದಾರಿಕೆಗೆ ಈ ಬಾರಿ ಆದ್ಯತೆ ನೀಡಲಾಗಿದೆ ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗಾರರಿಗೆ ವಿವರ ನೀಡಿದರು.
ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್, ಆಸ್ಟ್ರಿಯಾ, ಡೆನ್ಮಾರ್ಕ್, ಫಿನ್ಲೆಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಡ್ಜರ್ಲೆಂಡ್, ಇಸ್ರೇಲ್ ಮತ್ತು ಅಮೆರಿಕ ಸೇರಿ 15ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ನಿಯೋಗಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮದ ಮುಖಂಡರು ಮತ್ತು ನವೋದ್ಯಮಿಗಳು ಭಾಗವಹಿಸಲಿದ್ದಾರೆ. ಒಟ್ಟು 52 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಐಟಿ, ಡೀಪ್ ಟೆಕ್ ಮತ್ತು ಟ್ರೆಂಡ್ಸ್, ಬಯೋಟೆಕ್, ಹೆಲ್ತ್ ಟೆಕ್, ಸ್ಟಾರ್ಟ್ ಅಪ್ ಎಕೋಸಿಸ್ಟಮ್, ಗ್ಲೋಬಲ್ ಇನೋವೇಷನ್ ಅಲೈಯನ್ಸ್, ಭಾರತ ಮತ್ತು ಯುಎಸ್‌ಎ ಟೆಕ್ ಕಾನ್‌ಕ್ಲೇವ್ ಮತ್ತು ಹೊಸದಾಗಿ ಪರಿಚಯಿಸಲಾದ ಎಲೆಕ್ಟ್ರೋ–ಸೆಮಿಕಾನ್ ಟ್ರ್ಯಾಕ್ ಬಗ್ಗೆ ಸಮ್ಮೇಳನ ನಡೆಯಲಿವೆ. ಗ್ಲೋಬಲ್ ಹಂತ 2ರಲ್ಲಿ ಕೃಷಿ, ಲಾಜಿಸ್ಟಿಕ್ಸ್, ಬಾಹ್ಯಾಕಾಶ, ಶಿಕ್ಷಣದ ಮೇಲೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಭಾವ, ಸೈಬರ್ ಸುರಕ್ಷತೆ ಮತ್ತು ಜಿಸಿಸಿಗಳು ಮತ್ತು ಜಿವಿಸಿಗಳಲ್ಲಿನ ರೂಪಾಂತರಗಳ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ ಎಂದು ಪ್ರಿಯಾಂಕ್ ಹೇಳಿದರು.
ಅಂತರರಾಷ್ಟ್ರೀಯ ಪ್ರದರ್ಶನ ಪೆವಿಲಿಯನ್‌ನಲ್ಲಿ ಆಸ್ಟ್ರೇಲಿಯಾ, ರಷ್ಯಾ, ಜರ್ಮನಿ, ಡೆನ್ಮಾರ್ಕ್, ಕೊರಿಯಾ, ಅಮೆರಿಕ, ಜಪಾನ್, ಬವೇರಿಯಾ, ಇಸ್ರೇಲ್ ಮತ್ತಿತರ ದೇಶಗಳ ತಂತ್ರಜ್ಞಾನಗಳ ಪ್ರದರ್ಶನ ನಡೆಯಲಿವೆ ಎಂದರು.
ಪ್ರತಿ ಬಾರಿಯಂತೆ ಈ ಬಾರಿಯೂ ಟಿಸಿಎಸ್ ಗ್ರಾಮೀಣ ಐಟಿ ರಸಪ್ರಶ್ನೆ ಮತ್ತು ಬಯೋಕ್ವಿಜ್‌ನ ಫೈನಲ್ ನಡೆಯಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಅಲ್ಲದೇ ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಯೋ ಪೋಸ್ಟರ್ಸ್– ಡಿಸ್ಕವರಿ ವಾಕ್‌ವೇ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪದವೀಧರರಿಗೆ ತಮ್ಮ ನವೀನ ಪರಿಕಲ್ಪನೆಗಳು ಮತ್ತು ಆಲೋಚನೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. ಕಬ್ಬನ್ ಪಾರ್ಕ್ ಮತ್ತು ಮಂತ್ರಿ ಸ್ಕ್ವೇರ್ ಮೆಟ್ರೊ ನಿಲ್ದಾಣಗಳಿಂದ ಅರಮನೆ ಮೈದಾನದ ಆವರಣಕ್ಕೆ ಬಸ್ ವ್ಯವಸ್ಥೆಯೂ ಇದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.