ADVERTISEMENT

ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಬಜೆಟ್‌ನಲ್ಲಿ ₹50 ಸಾವಿರ ಕೋಟಿ ವರಮಾನ ಖೋತಾ: ಸಿಎಂ

ಕೊಪ್ಪಳ: ಆಟಿಕೆ ಕ್ಲಸ್ಟರ್‌ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 1:36 IST
Last Updated 10 ಜನವರಿ 2021, 1:36 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

ಕೊಪ್ಪಳ: ‘ಕೊರೊನಾ ಮತ್ತು ಅತಿವೃಷ್ಟಿಯಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆರ್ಥಿಕ ಪರಿಸ್ಥಿತಿಯೂ ಸರಿ ಇಲ್ಲ. ಹೀಗಾಗಿ ಬರುವಬಜೆಟ್‌ನಲ್ಲಿ ₹ 40ರಿಂದ ₹ 50 ಸಾವಿರ ಕೋಟಿ ವರಮಾನ ಖೋತಾ ಆಗಲಿದೆ' ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಹೇಳಿದರು.

‘ಆರ್ಥಿಕ ತೊಂದರೆಯಿಂದಾಗಿ ನಿರೀಕ್ಷಿಸಿದಷ್ಟು ಕೆಲಸ ಮಾಡಲು ಆಗಿಲ್ಲ.ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಿಕೆ, ನೇಮಕಾತಿ ಮಾಡುವಲ್ಲಿ ವಿಳಂಬವಾಗಿದೆ’ ಎಂದೂ ಅವರು ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಬಳಿ ಶನಿವಾರ ಆಟಿಕೆ ಕ್ಲಸ್ಟರ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೂಮಿಪೂಜೆ ನೆರೆವೇರಿಸಿದರು. ಶಾಸಕ ಹಾಲಪ್ಪ ಆಚಾರ್‌, ಸಚಿವರಾದ ಬಿ.ಸಿ.ಪಾಟೀಲ, ಜಗದೀಶ‌ ಶೆಟ್ಟರ್‌, ಏಕಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಮೆಳ್ಳಿಗೇರಿ, ಸಂಸದ ಸಂಗಣ್ಣ ಕರಡಿ ಇದ್ದಾರೆ

ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ–ತಳಬಾಳದಲ್ಲಿ ಆಟಿಕೆ ಕ್ಲಸ್ಟರ್‌ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ದೇಶದಲ್ಲಿ ಮೊದಲ ಆಟಿಕೆ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿಪೂಜೆ ಮಾಡಿದ್ದೇವೆ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಿಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ' ಎಂದರು.

ADVERTISEMENT

‘ಪಾರಂಪರಿಕ ಕಿನ್ನಾಳ ಆಟಿಕೆಗಳಿಗೆ ಹೆಸರಾದ ಕೊಪ್ಪಳ ಜಿಲ್ಲೆ ಇದೀಗ ಆಟಿಕೆ ಉತ್ಪಾದನಾ ಕೇಂದ್ರವಾಗಿ ರೂಪುಗೊಳ್ಳುತ್ತಿರುವುದು ಸಂತಸದ ಸಂಗತಿ. ಇಲ್ಲಿ ಆಟಿಕೆ ಉತ್ಪಾದಿಸಲಿರುವ ಏಕಸ್‌ ಸಂಸ್ಥೆ ನಮ್ಮ ರಾಜ್ಯದ್ದೇ ಆಗಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ’ ಎಂದೂ ಹೇಳಿದರು.

‘ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿಪಡಿಸಲು ಚೆನೈ–ಬೆಂಗಳೂರು ಕೈಗಾರಿಕೆ ಕಾರಿಡಾರ್‌ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕೆ ಕೇಂದ್ರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹ 1,701 ಕೋಟಿ ಮೀಸಲಿರಿಸಿದ್ದು, 85,500 ಜನರಿಗೆ ಉದ್ಯೋಗ ದೊರೆಯಲಿದೆ' ಎಂದರು.

‘ಫೋಟೊ ತೆಗೆಸಿಕೊಳ್ಳುವುದು ಅಪರಾಧವಲ್ಲ': 'ಬಿಜೆಪಿ ಉನ್ನತ ನಾಯಕರು, ರಾಜ್ಯದ ಬಿಜೆಪಿ ಸಚಿವರು, ಶಾಸಕರ ಜೊತೆ ಈಗ ಬಂಧನದಲ್ಲಿರುವ ಯುವರಾಜ್ ಫೋಟೊ ತೆಗೆಸಿಕೊಂಡಿದ್ದು ಅಪರಾಧ ಏನಲ್ಲ. ಆದರೆ ಆ ಫೋಟೊಗಳನ್ನು ತೋರಿಸಿ ಜನರಿಗೆ ವಂಚನೆ ಮಾಡುವುದು ಅಪರಾಧ' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಸೇವಾಲಾಲ್‌ ಸ್ವಾಮೀಜಿ ಅಲಿಯಾಸ್‌ಯುವರಾಜ್ ಬಿಜೆಪಿ ನಾಯಕರ ಜೊತೆ ಭಾವಚಿತ್ರ ತೆಗೆಸಿಕೊಂಡು ಅದನ್ನು ವಂಚನೆಗೆ ಬಳಸಿರುವ ಕುರಿತು ಪ್ರಕರಣ ದಾಖಲಾಗಿದೆ. ಸಮಗ್ರ ತನಿಖೆ ನಡೆದಿದ್ದು,ಸತ್ಯಾಸತ್ಯತೆ ಶೀಘ್ರ ಹೊರಬರಲಿದೆ. ಪಕ್ಷ ಮತ್ತು ನಾಯಕರ ಹೆಸರು ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸ್ವಾಭಿಮಾನಿ ರೈತ’ ಕಾರ್ಡ್‌ ವಿತರಣೆ

ರೈತರಿಗೆ ಅವರ ಸ್ವವಿವರ ಇರುವ 'ಸ್ವಾಭಿಮಾನಿ ರೈತ’ ಗುರುತಿನ ಚೀಟಿ ವಿತರಿಸುವ ಕಾರ್ಯಕ್ಕೆ ಯಡಿಯೂರಪ್ಪ ಚಾಲನೆ ನೀಡಿದರು.

‘ರೈತರು ಸ್ವಾಭಿಮಾನದಿಂದ ಬದುಕಲು ಮತ್ತು ಸರ್ಕಾರದ ವಿವಿಧ ಯೋಜನೆಯ ಪ್ರಯೋಜನ ಪಡೆಯಲು ರಾಜ್ಯದ ಎಲ್ಲ ಅರ್ಹ ರೈತರಿಗೆ ಸ್ವಾಭಿಮಾನ ಕಾರ್ಡ್ ನೀಡಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಮಾಹಿತಿ ನೀಡಿದರು.

'155313 ಸಹಾಯವಾಣಿಗೆ ಕರೆ ಮಾಡಿದರೆ ರೈತ ಸಂಜೀವಿನಿ ವಾಹನವು ಜಮೀನುಗಳಿಗೆ ತೆರಳಿ ಬೆಳೆ, ಮಣ್ಣು, ನೀರು ಸೇರಿದಂತೆ ವಿವಿಧ ಸಸ್ಯಗಳಿಗೆ ಬರುವ ರೋಗಗಳ ಪರೀಕ್ಷೆ ನಡೆಸಲಿದೆ. ರೈತರಿಗೆ ತಜ್ಞರು ಸಲಹೆ ನೀಡಲಿದ್ದಾರೆ' ಎಂದೂ ಅವರು ಹೇಳಿದರು.

* ಹೈಕಮಾಂಡ್‌ನಿಂದಸೂಚನೆ ಬಂದ ನಂತರ ಸಂಪುಟ ವಿಸ್ತರಣೆ ಆಗಲಿದೆ. ಬಹುಶಃ ಸಂಕ್ರಾಂತಿ ನಂತರ ಆಗಬಹುದು.

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

‘ಆಟಿಕೆ ಕ್ಲಸ್ಟರ್‌ ನನ್ನ ಯೋಜನೆ’

ಬೆಂಗಳೂರು: ‘ಚೀನಾ ಹಿಡಿತದಲ್ಲಿರುವ ಜಾಗತಿಕ ಉತ್ಪಾದನೆ ಮಾರುಕಟ್ಟೆಯಲ್ಲಿ ಭಾರತವೂ ಪಾಲು ಪಡೆಯಬೇಕೆಂಬ ಉದ್ದೇಶದಿಂದ ನಾನು ಮುಖ್ಯಮಂತ್ರಿ ಆಗಿದ್ದಾಗ ‘ಚೀನಾ ಜೊತೆ ಸ್ಪರ್ಧೆ’ ರೂಪಿಸಲಾಗಿತ್ತು. ಇದಕ್ಕಾಗಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ರಚಿಸಿ, ₹ 500 ಕೋಟಿ ನೀಡಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಆ ಕ್ಲಸ್ಟರ್‌ಗೆ ಮರು ಚಾಲನೆ ನೀಡುತ್ತಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಆಟಿಕೆ ಉತ್ಪಾದನಾ ಘಟಕ ಆರಂಭಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ‘ಆತ್ಮನಿರ್ಭರ’ ಕಲ್ಪನೆ ಜಾರಿಗೆ ತರುವುದಕ್ಕೂ ಮೊದಲೇ ನನ್ನ ಸರ್ಕಾರ ಸ್ವಾವಲಂಬಿ ಕಲ್ಪನೆ ಹೊಂದಿತ್ತು’ ಎಂದಿದ್ದಾರೆ.

‘₹ 7 ಲಕ್ಷ ಕೋಟಿ ಮೊತ್ತದ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ಪ್ರಬಲ ಹಿಡಿತ ಹೊಂದಿದೆ. ಇದರಲ್ಲಿ ಅಲ್ಪ ಪಾಲು ಕಸಿದರೂ ನಮ್ಮವರಿಗೆ ಉದ್ಯೋಗ ನೀಡಬಹುದು, ಆದಾಯ ಕೊಡಿಸಬಹುದು ಎಂಬುದು ನನ್ನ ಸರ್ಕಾರದ ದೂರದೃಷ್ಟಿಯಾಗಿತ್ತು. ಅದಕ್ಕೆ ಮರು ಚಾಲನೆ ನೀಡಿ ಯಡಿಯೂರಪ್ಪ, ನನ್ನ ಯೋಜನೆ ಅನುಸರಿಸಿದ್ದಾರೆ’ ಎಂದಿದ್ದಾರೆ.

‘ನನ್ನ ಸರ್ಕಾರದ ಅವಧಿಯಲ್ಲಿ ಇಂಥ ಹಲವು ಕಾರ್ಯಕ್ರಮಗಳನ್ನು ಕೊಡಲಾಗಿದೆ. ಅವುಗಳಲ್ಲಿ ಈ ನೆಲದ ಸ್ವಾಭಿಮಾನ ಸಾರುವ ಯೋಜನೆಗಳೂ ಇವೆ ಎಂಬುದು ಗಮನಾರ್ಹ. ಅವುಗಳನ್ನು ಮರಳಿ ಜಾರಿಗೆ ತರುವುದರ ಕಡೆಗೆ ಯಡಿಯೂರಪ್ಪ ಅವರು ಚಿಂತನೆ ನಡೆಸುವುದು ಅತ್ಯಗತ್ಯ. ನನ್ನ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ಆದಾಯ ಸಿಗುವ ಅಂಶಗಳು ಪ್ರಧಾನ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.