ADVERTISEMENT

ಉಪಚುನಾವಣೆ: ಇಂದಿನಿಂದ ನಾಮಪತ್ರ

ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಇಡೀ ಜಿಲ್ಲೆಗೆ, ಒಂಬತ್ತು ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರಗಳಿಗಷ್ಟೇ ನೀತಿ ಸಂಹಿತೆ ಅನ್ವಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:57 IST
Last Updated 10 ನವೆಂಬರ್ 2019, 19:57 IST
   

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಸೋಮವಾರದಿಂದ ಆರಂಭವಾಗಲಿದೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಇಡೀ ಜಿಲ್ಲೆಗೆ ಹಾಗೂ ಒಂಬತ್ತು ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರಗಳಿಗಷ್ಟೇ ನೀತಿ ಸಂಹಿತೆ ಅನ್ವಯವಾಗಲಿದೆ.

‘ಚುನಾವಣಾ ಆಯೋಗದ ಹೊಸ ಸುತ್ತೋಲೆಯಂತೆ ಎಲ್ಲೆಲ್ಲಿ ನಗರ ಸ್ಥಳೀಯಾಡಳಿತ ವ್ಯವಸ್ಥೆ ಇರುತ್ತದೋ, ಅಲ್ಲಿ ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ನೀತಿ ಸಂಹಿತೆ ಇರುತ್ತದೆ. ಉಳಿದೆಡೆ ವಿಧಾನಸಭಾ ಕ್ಷೇತ್ರವಿರುವ ಇಡೀ ಜಿಲ್ಲೆಗೆ ಇದು ಅನ್ವಯವಾಗುತ್ತದೆ’ ಎಂದುರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಸೋಮವಾರದಿಂದ ಇದೇ 18ರ ವರೆಗೆ ನಾಮಪತ್ರ ಸಲ್ಲಿಸುವುದಕ್ಕೆ ಅವಕಾಶ ಇದೆ.ಈಗಾಗಲೇ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದು ಮಾನ್ಯವಾಗಿರುತ್ತದೆ. ಡಿಸೆಂಬರ್‌ 5ರಂದು ಮತದಾನ, 9ರಂದು ಮತ ಎಣಿಕೆ ನಡೆಯಲಿದೆ’ ಎಂದರು.

ADVERTISEMENT

‘ಅನರ್ಹ ಶಾಸಕರ ಸ್ಪರ್ಧೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಅದರ ಬಗ್ಗೆ ಯಾವುದೇ ಹೇಳಿಕೆ ನೀಡಲಾಗದು. ಅನರ್ಹರ ಸ್ಪರ್ಧೆಗೆ ಅಭ್ಯಂತರ ಇಲ್ಲ ಎಂದು ಚುನಾವಣಾ ಆಯೋಗ ಕೋರ್ಟ್‌ನಲ್ಲಿ ತಿಳಿಸಿದ್ದಕ್ಕೂ, ರಾಜ್ಯ ಚುನಾವಣಾ ಅಧಿಕಾರಿಯವರ ಕಚೇರಿಗೂ ಸಂಬಂಧವಿಲ್ಲ. ಚುನಾವಣೆ ನಡೆಸುವುದಕ್ಕೆ ಏರ್ಪಾಡು ಮಾಡುವುದಷ್ಟೇ ನಮ್ಮ ಕೆಲಸ’ ಎಂದು ಅವರು ಸ್ಪಷ್ಟಪಡಿಸಿದರು.

ಎಂ 3 ಇವಿಎಂ ಬಳಕೆ: ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲಿಎಂ 3 ವಿದ್ಯುನ್ಮಾನಮತಯಂತ್ರಗಳು ಮತ್ತು ವಿವಿ ಪ್ಯಾಟ್‌ ಯಂತ್ರಗಳನ್ನು ಬಳಸಲಾಗುತ್ತದೆ.

2018ರಲ್ಲಿ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೇಶದಲ್ಲೇ ಮೊದಲ ಬಾರಿ ಈ ಇವಿಎಂಗಳ ಬಳಕೆ ಆಗಿತ್ತು. ಬ್ಯಾಟರಿ ಶಕ್ತಿ ಕಡಿಮೆಯಾದರೆ ಸ್ವಯಂಚಾಲಿತವಾಗಿ ತಿಳಿಸುವ ವ್ಯವಸ್ಥೆ, ಯಂತ್ರದಲ್ಲಿ ಏನಾದರೂ ಬದಲಾವಣೆ ಮಾಡಲು ಮುಂದಾದರೆಸಂಪೂರ್ಣ ಸ್ಥಗಿತಗೊಂಡು, ಯಂತ್ರ ತಯಾರಿಕಾ ಘಟಕದಲ್ಲಷ್ಟೇ ತೆರೆದುಕೊಳ್ಳುವಂತಹ ವ್ಯವಸ್ಥೆ ಇದರಲ್ಲಿದೆ. ಹೀಗಾಗಿ ಚುನಾವಣೆಯಲ್ಲಿ ಇದುವರೆಗೆ ಬಳಸುತ್ತಿದ್ದಎಂ 2 ಇವಿಎಂ ಬದಲಿಗೆ ಎಂ 3 ಇವಿಎಂ ಬಳಸಲಾಗುತ್ತದೆ ಎಂದು ಸಂಜೀವ್‌ ಕುಮಾರ್ ಮಾಹಿತಿ ನೀಡಿದರು.

ಅಂಕಿ ಅಂಶ
37.50 ಲಕ್ಷ:
15 ಕ್ಷೇತ್ರಗಳ ಒಟ್ಟು ಮತದಾರರು
19.12 ಲಕ್ಷ;ಪುರುಷ ಮತದಾರರು
18.37 ಲಕ್ಷ:ಮಹಿಳಾ ಮತದಾರರು
71,613:ಯುವ ಮತದಾರರು
4,185:ಒಟ್ಟು ಮತಗಟ್ಟೆಗಳು
461:ಯಶವಂತಪುರದಲ್ಲಿರುವ ಮತಗಟ್ಟೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.