ಮಂಡ್ಯ: ‘ಈ ಬಾರಿ ಮೂಡಲಬಾಗಿಲ ಹನುಮಪ್ಪ ಹಾಗೂ ಮುಲ್ಲಾ ಸಾಬಿ ನಡುವೆ, ಟಿಪ್ಪು ಹಾಗೂ ಒಡೆಯರ್ ನಡುವೆ ಚುನಾವಣೆ ನಡೆಯಲಿದೆ’ ಎನ್ನುವ ಮೂಲಕ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಚುನಾವಣೆಯನ್ನು ಕೋಮು ನೆಲೆಯಲ್ಲಿ ಕೊಂಡೊಯ್ಯುವ ಸುಳಿವು ನೀಡಿದರು.
ಇಲ್ಲಿನ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿ.ಟಿ.ರವಿ,‘ನಿಮ್ಮ ಓಟು ಹನುಮಪ್ಪನಿಗೆ ನ್ಯಾಯ ಕೊಡಲಿಕ್ಕೆ ಅಂತ ನೆನಪಿಟ್ಟುಕೊಳ್ಳಿ. ರಾಜ್ಯಕ್ಕೆ, ಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು, ಅವನಪ್ಪ ಅಲ್ಲ. ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ. ಮೈಸೂರು ಸಿಲ್ಕ್ಸ್, ಪೇಪರ್‌ಮಿಲ್, ಮೈಸೂರು ವಿಶ್ವವಿದ್ಯಾಲಯವನ್ನು ಟಿಪ್ಪು, ಅವನಪ್ಪ ಮಾಡಿದ್ದಲ್ಲ’ ಎಂದು ಪ್ರತಿಪಾದಿಸಿದರು.
‘ನಮ್ಮ ಮೈಯಲ್ಲಿ ಉರಿಗೌಡ ಮತ್ತು ದೊಡ್ಡನಂಜೇಗೌಡರ ರಕ್ತ ಹರಿಯುತ್ತಿದೆಯೇ ಹೊರತು, ಟಿಪ್ಪು, ಅವನಪ್ಪನ ರಕ್ತವಲ್ಲ. ಟಿಪ್ಪು ಕೊಂದ ಗೌಡರೇ ನಿಜವಾದ ಹುಲಿಗಳು. ಅವರ ಪ್ರತಿಮೆಗಳು ನಿರ್ಮಾಣವಾಗಬೇಕು’ ಎಂದರು.
ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರದ ಬಿಜೆಪಿ ಶಾಸಕರು, ಮುಖಂಡರು, ಈ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ‘ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಹಳೇ ಮೈಸೂರಿನಲ್ಲಿ ಶಾ ರಣಕಹಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.