ಬೆಂಗಳೂರು: ನಾಲ್ಕು ರಾಜ್ಯಗಳ ವಿಧಾನಸಭಾ ಫಲಿತಾಂಶ ಕರ್ನಾಟಕದ ಬಿಜೆಪಿ ಘಟಕಕ್ಕೆ ಹೊಸ ಹುಮ್ಮಸು ತಂದಿದ್ದು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಪ್ರಬಲ ಹೋರಾಟ ರೂಪಿಸಲು ಚೈತನ್ಯ ನೀಡಿದೆ. ಅದೇ ಹೊತ್ತಿಗೆ, ‘ಗ್ಯಾರಂಟಿ’ಗಳೇ ಗೆಲುವಿನ ದಡ ಸೇರಿಸುತ್ತವೆ ಎಂಬ ನಂಬಿಕೆ ಹುಸಿಯಾಗಿದ್ದು, ಭಿನ್ನಮತ ಮರೆತು ಮೈಕೊಡವಿ ನಿಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಎರಡಂಕಿ ಮುಟ್ಟುವುದು ಕಷ್ಟ ಎಂಬ ಎಚ್ಚರಿಕೆಯನ್ನೂ ಕಾಂಗ್ರೆಸ್‌ಗೆ ನೀಡಿದೆ.
ಫಲಿತಾಂಶ ಹೊರಬಿದ್ದ ನಾಲ್ಕು ರಾಜ್ಯಗಳ ಪೈಕಿ ಒಂದು ಕಡೆ ಅಧಿಕಾರ ದಕ್ಕಿಸಿಕೊಂಡರೂ ಎರಡು ಕಡೆ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಪಾಠವಾಗಿದೆ. ಕರ್ನಾಟಕದಲ್ಲಿ ‘ಗ್ಯಾರಂಟಿ’ ಘೋಷಣೆಯಿಂದ ಅಧಿಕಾರಕ್ಕೆ ಬಂದೆವು ಎಂಬ ಹಮ್ಮಿನಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್, ಮಧ್ಯಪ್ರದೇಶ, ರಾಜಸ್ತಾನ ಹಾಗೂ ತೆಲಂಗಾಣದಲ್ಲಿ ಇದೇ ಪ್ರಯೋಗ ಮಾಡಿತು. ಅದಕ್ಕೆ, ಸವ್ವಾಸೇರು ಹಾಕುವ ರೀತಿಯೊಳಗೆ ಬಿಜೆಪಿ ಕೂಡ ಉಚಿತ ಕೊಡುಗೆಗಳನ್ನು ಪ್ರಕಟಿಸಿತು. ಗ್ಯಾರಂಟಿಯ ಹಾಯಿದೋಣಿಯಲ್ಲಿ ಜನ ತಮ್ಮನ್ನು ವಿಜಯದ ಅಂಚಿಗೆ ದೂಡುತ್ತಾರೆ ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ಗೆ ಇತ್ತು. ಫಲಿತಾಂಶ ನೋಡಿದರೆ, ಗ್ಯಾರಂಟಿಗಳಿಂತ ಎರಡು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ, ಮತ್ತೆರಡು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಚುನಾವಣೆ ಸಂದರ್ಭದಲ್ಲಿ ಅವರು ಮುಂದಿಟ್ಟ ವಿಚಾರಗಳು ಫಲಿತಾಂಶದ ಮೇಲೆ ಪ್ರಭಾವ ಬೀರಿದವು.
ತೆಲಂಗಾಣದಲ್ಲಿ ಗ್ಯಾರಂಟಿಗಳೇ ಕೈ ಹಿಡಿದವು ಎಂದು ಕಾಂಗ್ರೆಸ್ ನಾಯಕರು ವಾದಿಸಬಹುದು. ಆದರೆ, ಅಲ್ಲಿ ಹತ್ತು ವರ್ಷ ಆಳಿದ ಕೆ.ಚಂದ್ರಶೇಖರ ರಾವ್ ಹಾಗೂ ಅವರ ಮಗ ಕೆ.ಟಿ. ರಾಮರಾವ್ ಆಡಳಿತ ವಿರೋಧಿ ಅಲೆಯೇ, ಕಾಂಗ್ರೆಸ್‌ಗೆ ಅಧಿಕಾರವನ್ನು ಕೊಟ್ಟಿದೆ. ಗ್ಯಾರಂಟಿಯೇ ಕೈ ಹಿಡಿದಿದ್ದರೆ ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಇದೇ ಫಲಿತಾಂಶ ಕಾಣಬೇಕಿತ್ತು.
ಉತ್ತರದಲ್ಲಿನ ಬಿಜೆಪಿಯ ವಿಜಯದುಂಧುಬಿ ಕರ್ನಾಟಕದ ಕಮಲ ಪಡೆಯಲ್ಲಿನ ಉತ್ಸಾಹವನ್ನು ಇಮ್ಮಡಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತು, ಮೂಲೆ ಸೇರಿದ್ದ ಕೇಸರಿ ಪಾಳೆಯಕ್ಕೆ, ಈ ಗೆಲುವು ಹೊಸ ಶಕ್ತಿ ತಂದುಕೊಡಲಿದೆ.
ಪಕ್ಷದ ಆಂತರಿಕ ಕಚ್ಚಾಟ, ಅವಮಾನದ ಜತೆಗೆ ಬಿಜೆಪಿಗೆ ಭವಿಷ್ಯವಿಲ್ಲ ಎಂಬ ತರ್ಕಕ್ಕೆ ಬಿದ್ದಿದ್ದ ಕೆಲವು ನಾಯಕರು, ಕಾಂಗ್ರೆಸ್‌ನ ಕದ ತಟ್ಟಿದ್ದರು. ಹಾಲಿ ಶಾಸಕರು, ಮಾಜಿ ಸಚಿವರು ಈ ಯಾದಿಯಲ್ಲಿದ್ದರು. ಇವರೆಲ್ಲರನ್ನೂ ‘ಆಪರೇಷನ್ ಹಸ್ತ’ದೊಳಗೆ ತರಲು ಕಾಂಗ್ರೆಸ್ ನಾಯಕರು ಹವಣಿಸಿದ್ದರು. ಬಿ.ವೈ. ವಿಜಯೇಂದ್ರ ಅಧ್ಯಕ್ಷರಾಗಿರುವುದು ಹಾಗೂ ಉತ್ತರದ ಭರ್ಜರಿ ವಿಜಯವು ಈ ನಾಯಕರನ್ನು ಪಕ್ಷದಲ್ಲೇ ಉಳಿಯುವಂತೆ ಮಾಡುವ ಸಾಧ್ಯತೆ ಹೆಚ್ಚಿದೆ. ಡಿಸೆಂಬರ್ 10ರ ಹೊತ್ತಿಗೆ ನಿಲುವು ಪ್ರಕಟಿಸುವುದಾಗಿ ಹೇಳಿದ್ದ ವಿ. ಸೋಮಣ್ಣ ಕೂಡ ತಮ್ಮ ನಡೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ವೇಳೆಗೆ ‘ಆಪರೇಷನ್ ಹಸ್ತ’ ಬಿರುಸುಗೊಳಿಸುವ ತಂತ್ರಗಾರಿಕೆ ರೂಪಿಸಿದ್ದ ಕಾಂಗ್ರೆಸ್ ನಾಯಕರು, ಈಗ ತಮ್ಮ ಬುಡವನ್ನೇ ಭದ್ರ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದಾದ ಪರಿಣಾಮವನ್ನು ಫಲಿತಾಂಶ ಮಾಡಿದೆ.
ಪ್ರಾದೇಶಿಕ ವಿಚಾರ ಹಾಗೂ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡದೇ ಈ ಚುನಾವಣೆಯನ್ನು ಬಿಜೆಪಿ ಎದುರಿಸಿತು. ಕರ್ನಾಟಕದಲ್ಲಿ ಸೋತ ಬಳಿಕ, ಬಿ.ಎಸ್. ಯಡಿಯೂರಪ್ಪ ಅವರ ಹಟಕ್ಕೆ ಮಣಿದಿದ್ದ ಆ ಪಕ್ಷದ ವರಿಷ್ಠರು, ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದರು. ಪ್ರಾದೇಶಿಕ ನಾಯಕತ್ವ ಅನಿವಾರ್ಯ ಎಂಬುದನ್ನು ಒಪ್ಪಿಕೊಂಡ ರೀತಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಉತ್ತರ ಫಲಿತಾಂಶ ನೋಡಿದರೆ, ಪ್ರಾದೇಶಿಕ ನಾಯಕತ್ವಕ್ಕಿಂತ ಪ್ರಧಾನಿ ಮೋದಿ ಪ್ರಭಾವಳಿ ಹಾಗೂ ಹಿಂದುತ್ವದ ರಾಜಕಾರಣ, ಕೋಮುವಾದ ಧ್ರುವೀಕರಣಕ್ಕೆ ಗೆಲುವು ಸಿಕ್ಕಂತೆ ಆಗಿದೆ. ಹೀಗಾಗಿ, ಲೋಕಸಭೆ ಚುನಾವಣೆ ಬಳಿಕ, ಕರ್ನಾಟಕ ಘಟಕದ ಬದಲಾವಣೆಗೂ ಇದು ದಾರಿ ಮಾಡಿಕೊಟ್ಟರೆ ಅಚ್ಚರಿಯೇನೂ ಇಲ್ಲ.
ಜೆಡಿಎಸ್‌ಗೂ ಆದ್ಯತೆ ಕಡಿಮೆ
ಪ್ರಾದೇಶಿಕ ನಾಯಕತ್ವ ಅಥವಾ ಪಕ್ಷಗಳ ನೆರವಿಲ್ಲದೇ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಮರಳಿ ಅಧಿಕಾರ ಹಿಡಿಯಬೇಕೆಂಬ ತವಕದಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಜತೆಗೆ ಮೈತ್ರಿಗೆ ಬಿಜೆಪಿ ಮುಂದಡಿ ಇಟ್ಟಿತ್ತು.
ಉತ್ತರದ ಮೂರು ರಾಜ್ಯಗಳಲ್ಲಿ ಇಂತಹ ಯಾವುದೇ ಹಂಗಿಲ್ಲದೇ ಭರ್ಜರಿ ಗೆಲುವನ್ನು ದಕ್ಕಿಸಿಕೊಂಡಿರುವ ಬಿಜೆಪಿ, ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್ ನಾಯಕರ ಹಂಗನ್ನು ತೊರೆಯಬಹುದಾದ ದಾರಿಯನ್ನು ಇದು ನಿಚ್ಚಳ ಗೊಳಿಸಿದೆ. ಯಾರ ಊರುಗೋಲು ಇಲ್ಲದೇ ವಿಜಯ ಕೈಹಿಡಿಯಬಹುದೆಂಬುದನ್ನು ಈ ಚುನಾವಣೆ ಬಿಜೆಪಿಗೆ ತೋರಿಸಿಕೊಟ್ಟಿದ್ದು, ಇದರ ಪರಿಣಾಮ ಜೆಡಿಎಸ್ ಈಗ ಸಿಕ್ಕಿರುವ ಆದ್ಯತೆ ಕಡಿಮೆಯಾಗಲೂ ಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.