ಬೆಂಗಳೂರು: ನೆರೆ ರಾಜ್ಯ ತೆಲಂಗಾಣದ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸಿರುವುದರ ಹಿಂದೆ, ಕರ್ನಾಟಕದ ‘ಕೈ’ ನಾಯಕರ ಪರಿಶ್ರಮ ಹಾಗೂ ಇಲ್ಲಿ ಜಾರಿ ಮಾಡಿರುವ ‘ಗ್ಯಾರಂಟಿ’ಗಳ ಪರಿಣಾಮ ಎದ್ದು ಕಾಣಿಸುತ್ತಿದೆ.
ಕಾಂಗ್ರೆಸ್‌ಗೆ ಅಷ್ಟಾಗಿ ನೆಲೆ ಇಲ್ಲದಂತಹ ಪರಿಸ್ಥಿತಿಯಲ್ಲಿ ತೆಲಂಗಾಣಕ್ಕೆ ನುಗ್ಗಿದ ಪಕ್ಷದ ರಾಜ್ಯ ನಾಯಕರ ದಂಡು, ಅಲ್ಲಿ ‘ಕೈ’ ಮೇಲಾಗುವಂತೆ ಮಾಡಿದೆ.
ಪಕ್ಷದ ವರಿಷ್ಠರ ನಿರ್ದೇಶನದಂತೆ, ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಬೆನ್ನಿಗೆ ನಿಂತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಘಟಕ ರೂಪಿಸಿದ್ದ ತಂತ್ರಗಾರಿಕೆ ಫಲ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ‘ಗ್ಯಾರಂಟಿ’ ಯೋಜನೆಗಳ ಕುರಿತು ತೆಲಂಗಾಣದ ದಿನಪತ್ರಿಕೆಗಳಲ್ಲಿ ನೀಡಿದ ಜಾಹೀರಾತುಗಳು ಅಲ್ಲಿನ ಜನರನ್ನು ಸೆಳೆಯುವಲ್ಲಿ ಕೆಲಸ ಮಾಡಿವೆ ಎಂದೂ ಹೇಳಲಾಗುತ್ತಿದೆ. ಹೀಗೆ, ಜಾಹೀರಾತು ಕೊಟ್ಟಿರುವುದಕ್ಕೆ ಚುನಾವಣಾ ಆಯೋಗ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿರುವುದನ್ನು ಗಮನಿಸಿದರೆ, ಅದರ ಪ್ರಭಾವವನ್ನು ಅಲ್ಲಗಳೆಯಲಾಗದು. ರಾಜ್ಯ ನಾಯಕರ ಸಂಪನ್ಮೂಲ, ಪ್ರಚಾರ ಹಾಗೂ ‘ಸರ್ಕಾರ’ದ ಹೆಸರಿನಲ್ಲಿ ಖರ್ಚು ಮಾಡಿದ ಜನರ ದುಡ್ಡು ಸಹ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಪರೋಕ್ಷವಾಗಿ ನೆರವು ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಅವರು ತೆಲಂಗಾಣದಲ್ಲಿ ನಡೆಸಿದ ಪ್ರಚಾರವೂ ಕಾಂಗ್ರೆಸ್ ಕೈ ಹಿಡಿದಿದೆ. ವರಿಷ್ಠರ ಸೂಚನೆ ಮೇರೆಗೆ, ಮೂರು ಹಂತಗಳಲ್ಲಿ ರೂಪಿಸಿದ ಕಾರ್ಯ ಯೋಜನೆಯೂ ಫಲ ಕೊಟ್ಟಿದೆ.
ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಯಾಗಿರುವ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಮುಖಂಡರಾದ ಮನ್ಸೂರ್ ಖಾನ್, ಪ್ರಕಾಶ ರಾಥೋಡ್ ಅವರು ತೆಲಂಗಾಣಕ್ಕೆ ತೆರಳಿ ತಳಮಟ್ಟದಲ್ಲಿ ಕೆಲಸ ಆರಂಭಿಸಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವು ಸಚಿವರನ್ನು ವರಿಷ್ಠರು ಆ ರಾಜ್ಯಕ್ಕೆ ಕಳುಹಿಸಿದರು. ಜಮೀರ್ ಅಹಮದ್ ಖಾನ್, ಡಾ. ಎಂ.ಸಿ. ಸುಧಾಕರ್, ದಿನೇಶ್ ಗುಂಡೂರಾವ್, ಕೆ.ಎಚ್. ಮುನಿಯಪ್ಪ, ಸಂತೋಷ್ ಲಾಡ್, ಬಿ. ನಾಗೇಂದ್ರ, ರಹೀಂಖಾನ್, ಶಿವರಾಜ್ ತಂಗಡಗಿ, ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ತೆಲಂಗಾಣದ ವಿವಿಧ ವಿಧನಸಭಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು.
ಅಲ್ಲದೆ, ಹಾಲಿ– ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ 40 ನಾಯಕರ ಮೂರನೇ ತಂಡ ಕೂಡಾ ಕ್ಷೇತ್ರಕ್ಕೆ ಇಳಿದು ಕೆಲಸ ಮಾಡಿದೆ. ಆ ಪೈಕಿ, ಬಿ. ಎನ್. ಚಂದ್ರಪ್ಪ, ರಿಜ್ವಾನ್ ಅರ್ಷದ್, ವಿಜಯಸಿಂಗ್, ರಾಜೇಂದ್ರಕುಮಾರ್, ಕೆ.ವೈ. ನಂಜೇಗೌಡ, ಪ್ರದೀಪ್ ಈಶ್ವರ್, ನಾಗೇಂದ್ರ ಯಾದವ್ ಪ್ರಮುಖರು.
ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ರೂಪಿಸಿದ ಮಾದರಿಯಲ್ಲಿ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ‘ವಾರ್ ರೂಂ’ ತೆರೆಯಲಾಗಿತ್ತು. ಮೆಹರೂಜ್ ಖಾನ್, ನಟರಾಜ ಗೌಡ, ಚಿನ್ನಪ್ಪ, ವಾಸುದೇವ ಅವರಿದ್ದ ಸುಮಾರು 20 ಮಂದಿಯ ತಂಡ ಆ ‘ರೂಂ‘ನಲ್ಲಿ ಕುಳಿತು ಸಾಮಾಜಿಕ ಮಾಧ್ಯಮಗಳ ಪ್ರಚಾರ ಹಾಗೂ ತಾರಾ ಪ್ರಚಾರಕರ ಕಾರ್ಯಕ್ರಮದ ಯೋಜನೆಗಳನ್ನು ರೂಪಿಸಿದ್ದರು. ನಾಯಕರು, ತಳ ಹಂತದ ಕಾರ್ಯಕರ್ತರಿಲ್ಲದೇ ಸೋತು ಸೊರಗಿದ್ದ ತೆಲಂಗಾಣ ಕಾಂಗ್ರೆಸ್ ಹೀಗೆ ಚೈತನ್ಯ ತುಂಬುವ ಕೆಲಸ ನಡೆಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ, ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ಬೃಹತ್ ರ‍್ಯಾಲಿಯಿಂದ ಆರಂಭಗೊಂಡ ಚುನಾವಣಾ ಚಟುವಟಿಕೆ ಈಗ ಗೆಲುವಿನ ಫಲ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.