ಶಿಗ್ಗಾವಿ (ಹಾವೇರಿ ಜಿಲ್ಲೆ): ‘ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆಂದು ಆಶ್ವಾಸನೆ ನೀಡಿ' ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಭಾನುವಾರ ಪ್ರಚಾರ ನಡೆಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
‘ಹೆಣ್ಣು ಮಕ್ಕಳಿಗಾಗಿ ನಾನು ‘ಭಾಗ್ಯಲಕ್ಷ್ಮಿ’ ಬಾಂಡ್ ಮಾಡಿದ್ದೆ. ಬಾಂಡ್ ಪಡೆದವರಿಗೆ ಈಗ ಹಣ ಪಾವತಿ ಮಾಡಬೇಕು. ಆದರೆ, ಈ ಸರ್ಕಾರ ಮಾಡುತ್ತಿಲ್ಲ. ರಸ್ತೆಯ ಗುಂಡಿ ಮುಚ್ಚಲು ಸಹ ಹಣವಿಲ್ಲ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ರಾಜ್ಯದಲ್ಲಿ 1 ಕಿ.ಮೀ. ರಸ್ತೆಯನ್ನೂ ಸಿದ್ದರಾಮಯ್ಯ ಅಭಿವೃದ್ಧಿ ಮಾಡಿಲ್ಲ. ರಾಜ್ಯ ಸರ್ಕಾರ ದಿವಾಳಿ ಆಗಿದೆ. ಚುನಾವಣೆ ಮುಗಿದ ಬಳಿಕ, ರಾಜ್ಯ ಸರ್ಕಾರದ ಬಣ್ಣ ಬಯಲಾಗಲಿದೆ’ ಎಂದು ಕಿಡಿಕಾರಿದರು.
‘ಅಬಕಾರಿ ಇಲಾಖೆಯಲ್ಲಿ ಹಣ ಲೂಟಿ ಮಾಡುತ್ತಿರುವುದಾಗಿ ಇಲಾಖೆಯವರೇ ಆರೋಪಿಸುತ್ತಿದ್ದಾರೆ. ಇದನ್ನು ತಡೆಯದೇ ಸುಮ್ಮನಿರುವ ನಿಮಗೆ (ಸಿದ್ದರಾಮಯ್ಯ) ನಾಚಿಕೆ ಆಗಲ್ವಾ? ಮೂರು ಉಪಚುನಾವಣೆ ನಂತರ ನಿಮ್ಮ (ಸಿದ್ದರಾಮಯ್ಯ ನೇತೃತ್ವದ ಸರ್ಕಾರ) ರಾಜಕೀಯ ದೊಂಬರಾಟ ಕೊನೆಯಾಗಲಿದೆ. ನಿಮ್ಮ ನಾಟಕ ಸಹ ಬಂದ್ ಆಗಲಿದೆ' ಎಂದರು.
‘ಉಪಚುನಾವಣೆ ಇರುವ ಮೂರು ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಗಾಳಿ ಜೋರಾಗಿ ಬೀಸುತ್ತಿದೆ. ಸೂರ್ಯ- ಚಂದ್ರ ಇರುವುದು ಎಷ್ಟು ಸತ್ಯವೋ ಶಿಗ್ಗಾವಿಯಲ್ಲಿ ಬಿಜೆಪಿ ಗೆಲ್ಲುವುದು ಅಷ್ಟೇ ಸತ್ಯ. 50 ಸಾವಿರ ಅಂತರದಿಂದ ಭರತ್ ಬೊಮ್ಮಾಯಿ ವಿಜಯ ಪತಾಕೆ ಹಾರಿಸಲಿದ್ದಾರೆ ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಣ ಹೆಂಡ ತೋಳ್ಬಲ ಅಧಿಕಾರ–ಜಾತಿ ಬಲದಿಂದ ಚುನಾವಣೆ ಗೆಲ್ಲಲಾಗದು. ಇದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ಮತದಾರರ ಆಯ್ಕೆ ಎಂದೆಂದಿಗೂ ಬಿಜೆಪಿ.–ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ
‘ಕ್ಷೇತ್ರಕ್ಕೆ ನಯಾಪೈಸೆ ನೀಡದ ಸರ್ಕಾರ’
ಹಾವೇರಿ: 'ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಶಿಗ್ಗಾವಿ ಕ್ಷೇತ್ರಕ್ಕೆ ನಯಾಪೈಸೆಯನ್ನೂ ನೀಡಿಲ್ಲ. ಕೊಟ್ಟಿದ್ದರೆ ಜನರಿಗೆ ತಿಳಿಸಬೇಕು' ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಪ್ರಚಾರ ನಡೆಸಿದ ಅವರು ‘ಕಾಂಗ್ರೆಸ್ ಸುಳ್ಳು ನಾಟಕ ಮಾಡುತ್ತಿದೆ. ಸುಳ್ಳೇ ಕಾಂಗ್ರೆಸ್ ಮನೆ ದೇವರು’ ಎಂದು ಗುಡುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.