ADVERTISEMENT

‘ದೇವೇಗೌಡ್ರು ವಿಕೆಟ್‌ ಹೋಗ್ತದೆ ಕುಮಾರಣ್ಣಂದು ಹೆಲ್ತ್‌ ಇಲ್ಲ’

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಆಕ್ಷೇಪಾರ್ಹ ಹೇಳಿಕೆ: ದಾಳಿ ಖಂಡಿಸಿ ಬಿಜೆಪಿ ಧರಣಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:15 IST
Last Updated 13 ಫೆಬ್ರುವರಿ 2019, 20:15 IST
   

ಬೆಂಗಳೂರು: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಕುರಿತು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಆಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಮಾತುಗಳು ರಾಜಕೀಯ ಕೋಲಾಹಲ, ಆಕ್ರೋಶಕ್ಕೆ ಕಾರಣವಾಗಿದೆ.

ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ಬಿಜೆಪಿಗೆ ಸೆಳೆಯುವ ಭರದಲ್ಲಿ ಪ್ರೀತಂಗೌಡ ಆಡಿದ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ಗುರಿಯಾಗಿವೆ. ಇದನ್ನು ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು, ಪ್ರೀತಂ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಗಾಯವಾಗಿದೆ.

‘ಜೆಡಿಎಸ್‌ ಕಾರ್ಯಕರ್ತರು ದುಂಡಾವರ್ತನೆ ನಡೆಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಎಚ್.ಡಿ. ರೇವಣ್ಣ ಕುಮ್ಮಕ್ಕು ನೀಡಿದ್ದಾರೆ’ ಎಂದು ಆರೋಪಿಸಿದ ಬಿಜೆಪಿ ನಾಯಕರು ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಧರಣಿ ನಡೆಸಿದರು. ಇದರಿಂದ ಮಧ್ಯಾಹ್ನದ ಬಳಿಕಕಲಾಪ ನಡೆಯಲಿಲ್ಲ.

ADVERTISEMENT

ಪ್ರೀತಂ ಹೇಳಿದ್ದೇನು?: ಜೆಡಿಎಸ್‌ ತೊರೆದು ಬಿಜೆಪಿಗೆ ಬಾ ಎಂಬ ಆಮಂತ್ರಣಕ್ಕೆ ಶರಣಗೌಡ ಪಾಟೀಲ ಒಪ್ಪುವುದಿಲ್ಲ. ಆಗ ಹಣದ ಆಮಿಷ ಒಡ್ಡುವ ಪ್ರೀತಂ, ಜೆಡಿಎಸ್‌ಗೆ ಉಳಿಗಾಲವಿಲ್ಲ ಎಂದು ವಿವರಿಸುವ ಭರದಲ್ಲಿ ಅಮಾನವೀಯವಾಗಿ ಮಾತನಾಡಿರುವುದು ಆಡಿಯೊದಲ್ಲಿದೆ.

‘ಹಿಂದೆ ಮುಂದೆ ಮಾತನಾಡುವುದು ಬೇಡ. ಮತ್ತೆ ಅಪ್ಪಾಜಿ (ಯಡಿಯೂರಪ್ಪ) ಹೋಗಿ ಕೈ ಮುಗಿಯುವುದು ಬೇಡ. ಯಂಗ್‌ಸ್ಟರ್ (ಶರಣ್‌ಗೌಡ) ಇದ್ದೀಯ. ಇನ್ನು ನೆಕ್ಸ್ಟ್‌ 40 ವರ್ಷ ರಾಜಕೀಯದಲ್ಲಿ ಇರ್ತೀಯ. ಇದೊಂದು ರಾಷ್ಟ್ರೀಯ ಪಕ್ಷ (ಬಿಜೆಪಿ). ಚಂದ್ರ, ಸೂರ್ಯ ಇರುವಷ್ಟು ದಿನ ನ್ಯಾಷನಲ್‌ ಪಾರ್ಟಿ ಇರುತ್ತದೆ. ದೇವೇಗೌಡ್ರ ವಿಕೆಟ್‌ ಹೋಗಲಿದೆ; ಕುಮಾರಣ್ಣನದ್ದು ಹೆಲ್ತ್‌ ಸರಿ ಇಲ್ಲ. ಆ ಪಾರ್ಟಿ ಬರ್ಖಾಸ್ತು ಆಗಲಿದೆ. ಈಗಂತೂ ಬಿದ್ರೆ ಸಾಕು ಎಂಬಂತಿದೆ. ನಂಗು ಇವಾಗ 35– 36 ವರ್ಷ. ಶಾಸಕನಾಗಿ ಇದೀನಿ. ನಿಂಗೂ 30 ವರ್ಷ. ನಾವೆಲ್ಲ ಇನ್ನೂ 40 ವರ್ಷ ರಾಜಕಾರಣ ಮಾಡಬೇಕು. ಎಲ್ಲ ಒಟ್ಟಿಗೆ ಇರೋಣ.’

‘ಹಣದ ಹೊಣೆಯನ್ನು ಅಣ್ಣ (ವಿಜಯೇಂದ್ರ) ನನಗೆ ವಹಿಸಿದ್ದಾರೆ. ಪ್ರಾಪರ್ಟಿ ಮಾರಿಯಾದರೂ ಕೊಡ್ತೀನಿ. ಯಾಕೆಂದರೆ, ನಂಗೆ ಅಣ್ಣ ಹೇಳಿ ಆಗಿದೆ. ಅದರ ಬಗ್ಗೆ ಮತ್ತೆ ಎರಡು ಬಾರಿ ಮಾತಾಡೋಕೆ ನಾನು, ನಾವ್ ಏನ್‌ ತರಕಾರಿ ಮಾರೋದಕ್ಕೆ ಇದ್ದೀವಾ. ನಂಗೆ ನಿಭಾಯಿಸುವ ಹೊಣೆ ಕೊಟ್ಟಿದ್ದಾರೆ’ ಎಂದೂ ಪ್ರೀತಂ ಹೇಳುವ ಮಾತುಗಳು ಆಡಿಯೋದಲ್ಲಿದೆ.

ಸದನದಲ್ಲಿ ಧರಣಿ: ಪ್ರೀತಂ ಗೌಡ ಮನೆ ಮೇಲಿನ ದಾಳಿ ಪ್ರಕರಣವು ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.

ಬುಧವಾರ ಸಂಜೆ ಪುನರಾರಂಭವಾಗುತ್ತಿದ್ದಂತೆ ಬಿಜೆ‍ಪಿ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು.

ಆರ್‌.ಅಶೋಕ, ‘ಶಾಸಕರ ಮನೆ ಮೇಲೆ ದಾಳಿ ಮಾಡಿ ಗೂಂಡಾಗಿರಿ ಪ್ರದರ್ಶಿಸಲಾಗಿದೆ. ಇದು ಶೋಭೆ ತರುವುದಿಲ್ಲ’ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು.

‘ಶಾಸಕರ ಖರೀದಿ ಸಂಸ್ಕೃತಿ ಆರಂಭಿಸಿದವರು. ನಮಗೆ ನೀತಿಪಾಠ ಹೇಳುವುದು ಬೇಡ. ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ’ ಎಂದು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿರುಗೇಟು ನೀಡಿದರು.

‘ಶಾಸಕರ ತಾಯಿಯನ್ನು ಎಳೆದಾಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆಯನ್ನು ಕುಮಾರಸ್ವಾಮಿ ಸಮರ್ಥಿಸಿಕೊಳ್ಳುತ್ತಾರಾ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು. ಸದನದಲ್ಲಿ ಕೋಲಾಹಲ ಉಂಟಾದ ಕಾರಣಕ್ಕೆ ಕಲಾಪವನ್ನು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

ವಿಧಾನಪರಿಷತ್‌ನಲ್ಲೂ ಪ್ರತಿಧ್ವನಿ: ಪ್ರೀತಂಗೌಡ ಮನೆ ಮೇಲಿನ ದಾಳಿ ಪ್ರಕರಣವನ್ನು ಚರ್ಚಿಸಲು ಅವಕಾಶ ನೀಡಬೇಕು ಎಂದು ವಿಧಾನಪರಿಷತ್ತಿನಲ್ಲಿ ಒತ್ತಾಯಿಸಿದ ಬಿಜೆಪಿ ಸದಸ್ಯರು ಧರಣಿ ನಡೆಸಿದರು.

‘ಮುಖ್ಯಮಂತ್ರಿಯವರ ಜಿಲ್ಲೆಯಲ್ಲೇ ಶಾಸಕರಿಗೆ ರಕ್ಷಣೆಯೇ ಇಲ್ಲವಾಗಿದೆ’ ಎಂದು ವಿರೋಧಪಕ್ಷದ ನಾಯಕ ಶ್ರೀನಿವಾಸ ಪೂಜಾರಿ ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಗದ್ದಲ ಹೆಚ್ಚಿದಾಗ ಕಲಾಪವನ್ನು ಎರಡು ಬಾರಿ ಮುಂದೂಡಿದರು.

‘ಪ್ರತಿ ಬಾರಿಯೂ ಎಲ್ಲ ವಿಚಾರಗಳಿಗೂ ಗದ್ದಲ ಎಬ್ಬಿಸುವುದು, ಧರಣಿ ನಡೆಸುವುದು ಸರಿಯಾದ ವರ್ತನೆಯಲ್ಲ, ನಿಮ್ಮದು ಅತಿರೇಕದ ವರ್ತನೆ’ ಎಂದು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಬಿಜೆಪಿ ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಪ್ರೀತಂ ಗೌಡ ಮನೆಗೆ ಕಲ್ಲು

ಹಾಸನ: ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ಬುಧವಾರ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ್ದಾರೆ.

ಪ್ರತಿಭಟನೆ ವೇಳೆ ಪ್ರೀತಂ ಬೆಂಬಲಿಗ ರಾಹುಲ್‌ ಎಂಬುವವರ ತಲೆಗೆ ಪೆಟ್ಟು ಬಿದ್ದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್‌ನಲ್ಲಿ ಮೆರವಣಿಗೆ ಬಂದು ನಂತರ ಧರಣಿ ನಡೆಸಿದ ಜೆಡಿಎಸ್‌ನ ನೂರಾರು ಕಾರ್ಯಕರ್ತರು, ಪ್ರೀತಂ ವಿರುದ್ಧ ಘೋಷಣೆ ಕೂಗಿದರು.

‘ಅಭಿವೃದ್ಧಿ ಮರೆತು ಕೀಳುಮಟ್ಟದ ರಾಜಕೀಯ ಮಾಡುತ್ತಿರುವ ಶಾಸಕ ಪ್ರೀತಂ ಕೂಡಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮುಗಿಸಿ ವಾಪಸ್‌ ಹೋಗುತ್ತಿದ್ದ ವೇಳೆ ಶಾಸಕರ ಮನೆಯೊಳಗಿದ್ದ ಬೆಂಬಲಿಗರು ಪ್ರೀತಂ ಪರ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಹಾಕಿದಾಗ ಮಾತಿನ ಚಕಮಕಿ ನಡೆಯಿತು. ಈ ವೇಳೆಗೆ ಪ್ರತಿಭಟನಾಕಾರರು ಶಾಸಕರ ಮನೆ ಆವರಣಕ್ಕೆ ನುಗ್ಗಲು ಯತ್ನಿಸಿದ್ದನ್ನು ಪೊಲೀಸರು ವಿಫಲಗೊಳಿಸಿದರು. ಆಗ ನೂಕುನುಗ್ಗಲು ಸಂಭವಿಸಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಈ ವೇಳೆ ಜೆಡಿಎಸ್ ಗುಂಪಿನಲ್ಲಿದ್ದ ಕೆಲವರು ಪ್ರೀತಂ ಗೌಡ ಮನೆಯ ಬಾಗಿಲತ್ತ ಕಲ್ಲು ತೂರಿದರು. ಇದು ಅಲ್ಲೇ ನಿಂತಿದ್ದ ಕಾರಿನ ಮೇಲೆ ಬಿದ್ದಿತ್ತಲ್ಲದೇ, ಶಾಸಕರ ಬೆಂಬಲಿಗ ರಾಹುಲ್ ಕಿಣಿ ಎಂಬುವವರ ಹಣೆಗೆ ಬಡಿಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮಾರಾಮಾರಿ ಹಂತಕ್ಕೂ ತಲುಪಿತು. ಪೊಲೀಸರು ಹೆಚ್ಚಿನ ಅನಾಹುತ ನಡೆಯುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಪ್ರೀತಂ ತಾಯಿ ನಾಗರತ್ನಾ, ‘ಇದು ರಾಜಕೀಯ ಪ್ರೇರಿತ. ಚುನಾವಣೆ ಹೊಸ್ತಿಲಲ್ಲಿ ಹೀಗೆ ಮಾಡುತ್ತಿದ್ದಾರೆ. ಇಂಥ ಘಟನೆಗಳಿಗೆ ಉಸ್ತುವಾರಿ ಸಚಿವರು ಅವಕಾಶ ಮಾಡಿಕೊಡಬಾರದು. ಇಂಥ ಬೆದರಿಕೆ ನಾವು ಹೆದರುವುದಿಲ್ಲ. ನನ್ನ ಮಗ ತಪ್ಪು ಮಾಡುವವನಲ್ಲ’ ಎಂದರು.

***

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ. ಇದನ್ನು ಖಂಡಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ

-ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

ಶಾಸನದ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಬಾರದು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ

-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಪ್ರೀತಂ ಶಾಸಕರಾಗಿ ಆಯ್ಕೆಯಾಗಿದ್ದರಿಂದ ಮುಖ್ಯಮಂತ್ರಿ ಹಾಗೂ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಹೊಟ್ಟೆ ಉರಿ ಉಂಟಾಗಿದೆ. ಪ್ರೀತಂ ಕುಟುಂಬಕ್ಕೆ ಏನಾದರೂ ಆದರೆ ಮುಖ್ಯಮಂತ್ರಿ ಹೊಣೆ

-ಸಿ.ಟಿ.ರವಿ, ಬಿಜೆಪಿ ಶಾಸಕ

ಜೆಡಿಎಸ್‌ ಕಾರ್ಯಕರ್ತರ ಗೂಂಡಾಗಿರಿಗೆ ಹೆದರಿ ಸುಮ್ಮನಿರುವುದಿಲ್ಲ. ನಾನೂ ಕಾನೂನು ಹೋರಾಟ ಮಾಡುತ್ತೇನೆ. ಗೃಹ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದೇನೆ

-ಪ್ರೀತಂ ಗೌಡ, ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.