ಬೆಂಗಳೂರು: ಐದು ರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯ ವಿಧಾನಸಭೆಯಲ್ಲಿ ಶುಕ್ರವಾರ ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಯಿತು. 2023 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳೇ ಗೆದ್ದು ಅಧಿಕಾರ ಹಿಡಿಯುವುದಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಪರಸ್ಪರ ಸವಾಲೆಸೆದರು.
ಈ ಚರ್ಚೆ ಲಘು ಧಾಟಿಯಲ್ಲಿ ಸಾಗಿದ್ದರಿಂದ ಕಾಂಗ್ರೆಸ್–ಬಿಜೆಪಿ ಸದಸ್ಯರ ಮಧ್ಯೆ ಹಾಸ್ಯ, ಕಿಚಾಯಿಸುವಿಕೆಗೂ ಕಾರಣವಾಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಯಡಿಯೂರಪ್ಪ ಅವರು, ‘ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಹಿಡಿದುಕೊಂಡುರಾಜ್ಯದಾದ್ಯಂತ ಪ್ರವಾಸ ಮಾಡಿ 130 ರಿಂದ 150 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನಿಮ್ಮನ್ನು ದೂಳೀಪಟ ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು.
ಈ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಅವಧಿಗೆ ಮುನ್ನವೇ ಮುಖ್ಯಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿರುವುದರಿಂದ ಯಡಿಯೂರಪ್ಪ ಅವರು ನೋವಿನಿಂದ ತಮ್ಮ ಪಕ್ಷದವರ ಬಗ್ಗೆಯೇ ವ್ಯಂಗ್ಯದ ಮಾತುಗಳನ್ನು ಆಡಿರಬೇಕು. ಏಕೆಂದರೆ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿದ್ದರು. ಆ ನೋವಿನಿಂದಲೇ ಅವರು ರಾಜ್ಯ
ಪ್ರವಾಸ ಮಾಡುತ್ತೇನೆಂದು ಹೇಳಿರಬೇಕು’ ಎಂದು ಕಾಲೆಳೆದರು.
‘ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಇಲ್ಲ. ಜನ ಮತ್ತೆ ನಮ್ಮನ್ನು ಅಧಿಕಾರಕ್ಕೆ ತರುತ್ತಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಜನ ಒಪ್ಪಿದ್ದಾರೆ. ಬಿಜೆಪಿಯನ್ನು ಹೊರ ಹಾಕಲು ಜನ ತೀರ್ಮಾನ ಮಾಡಿದ್ದಾರೆ. ಅಧಿಕಾರದಲ್ಲಿದ್ದ ನಾಲ್ಕು ರಾಜ್ಯಗಳಲ್ಲಿ ಮತ್ತೆ ಗೆದ್ದಿದ್ದೀರಿ. ಪಂಜಾಬ್‌ನಲ್ಲಿ ನಮ್ಮ ತಪ್ಪಿನಿಂದ ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ, ಕರ್ನಾಟಕದ ಸ್ಥಿತಿಯೇ ಬೇರೆ’ ಎಂದು ಸಿದ್ದರಾಮಯ್ಯ ಹೇಳಿದರು.
‘ಬಿಜೆಪಿಯನ್ನು ಸೋಲಿಸಲು ಜನ ತೀರ್ಮಾನ ಮಾಡಿದ್ದಾರೆ. ಜನರ ನಾಡಿಮಿಡಿತ ನಮಗೆ ಗೊತ್ತು. ನೀವಂತೂ (ಯಡಿಯೂರಪ್ಪ) ಸಿಎಂ ಆಗಲ್ಲ, ನಾವೇ ಅಧಿಕಾರಕ್ಕೆ ಬರೋದು. ನಿಮ್ಮ ಕನಸು ನನಸಾಗಲ್ಲ. ಆದರೆ ನಮ್ಮ ಕನಸು ನೈಜವಾದುದು’ ಎಂದರು.
‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದೆ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಇದರಲ್ಲಿ ಯಾವುದೇ ಒತ್ತಡವಿಲ್ಲ. ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ಹಿಡಿದುಕೊಂಡು ಹಳ್ಳಿ ಹಳ್ಳಿಗೂ ಹೋಗುತ್ತೇವೆ’ ಎಂದರು ಯಡಿಯೂರಪ್ಪ.
‘ಸಿದ್ದರಾಮಯ್ಯ ಹೇಳಿದ್ದು ಸತ್ಯ ಆಗಲ್ಲ’
‘ಸಿದ್ದರಾಮಯ್ಯ ಏನು ಹೇಳುತ್ತಾರೊ ಅದಕ್ಕೆ ತದ್ವಿರುದ್ಧವಾಗಿ ಎಲ್ಲವೂ ನಡೆಯುತ್ತವೆ. 2018 ರ ಚುನಾವಣೆ ಸಂದರ್ಭದಲ್ಲಿ ಅವರಪ್ಪನಾಣೆಗೂ ಎಚ್.ಡಿ.ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದಿದ್ದರು. ಈ ಇಬ್ಬರೂ ಮುಖ್ಯಮಂತ್ರಿ ಆಗಿದ್ದು ಸತ್ಯ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಚಾಯಿಸಿದರು.
‘ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದೇ ಹೇಳುತ್ತಿದ್ದೀರಿ. ನಿಮ್ಮ ಮಾತು ಸುಳ್ಳಾಗಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ನಮ್ಮ ನಾಯಕ ಯಡಿಯೂರಪ್ಪ ಅವರಶ್ರಮ ಮತ್ತು ಪ್ರಯತ್ನದ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.