ಬೆಂಗಳೂರು: ‘ನಮ್ಮನ್ನು ಹೆಂಡತಿ ಮಕ್ಕಳೇ ಅನುಮಾನದಿಂದ ನೋಡುತ್ತಿದ್ದಾರೆ. ಬೆಂಗಳೂರಿಗೆ ಹೊರಟರೆ ಡೀಲ್ ಗೀಲ್ ಅಂತಾರೆ. ವಿಧಾನಸಭಾ ಅಧಿವೇಶನಕ್ಕಷ್ಟೇ ಹೋಗಿ ಮರ್ಯಾದೆಯಿಂದ ವಾಪಸ್ ಬನ್ನಿ ಅಂತಾರೆ’ ಎಂದು ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಳಲು ತೋಡಿಕೊಂಡರು.
ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಇತಿಮಿತಿಗಳೇ ಇಲ್ಲ. ಧಾರಾವಾಹಿ ರೀತಿಯಲ್ಲಿ ಇಲ್ಲಿಯವರೆಗೆ ಎಳೆದುಕೊಂಡು ಬಂದಿದ್ದಾರೆ. ಎಂಎಲ್‌ಎಗಳು ಅಪಾಪೋಲಿಗಳಂತಾಗಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದ್ದು, ಆತ್ಮಗೌರವ ಇಲ್ಲದೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಪಕ್ಷಾಂತರ ನಿಷೇಧ ಕಾಯ್ದೆ ಇಲ್ಲದಿದ್ದರೆ 15 ದಿನಕ್ಕೊಮ್ಮೆ ಮುಖ್ಯಮಂತ್ರಿಯನ್ನು ಬದಲಾಯಿಸುತ್ತಿದ್ದೀರಿ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಏನೇನೋ ಮಾತನಾಡಿ ಎಲ್ಲ ಶಾಸಕರ ಮರ್ಯಾದೆ ತೆಗೆಯಬೇಡಿ’ ಎಂದು ಬಿಜೆಪಿ ಶಾಸಕರು ಆಕ್ಷೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.