ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ: 72 ವರ್ಷದ ನಿವೃತ್ತ ಅಧಿಕಾರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:09 IST
Last Updated 4 ಆಗಸ್ಟ್ 2024, 16:09 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಹದಿನೈದು ವರ್ಷದ ಹಿಂದಿನ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಸಾರಿಗೆ ಇಲಾಖೆ 72 ವರ್ಷದ ನಿವೃತ್ತ ಅಧಿಕಾರಿ ಜೆ.ವಿ.ರಾಮಯ್ಯಗೆ ಸಿಬಿಐ, ಇ.ಡಿ ವಿಶೇಷ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ನಾಗಮಂಗಲ ತಾಲ್ಲೂಕು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ರಾಮಯ್ಯ ವಿರುದ್ಧ 2009 ರ ಸೆಪ್ಟೆಂಬರ್‌ನಲ್ಲಿ ಕೋಲಾರ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ₹ 1.24 ಕೋಟಿ ಮೌಲ್ಯದ ನಗ–ನಗದು ಮತ್ತು ಆಸ್ತಿ ಪತ್ರಗಳನ್ನು ಪತ್ತೆ ಮಾಡಿದ್ದರು.

ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ್ದರ ಸಂಬಂಧ ಆದಾಯ ತೆರಿಗೆ ರಿಟರ್ನ್‌ ದಾಖಲೆಗಳು, ಆಸ್ತಿ ಪತ್ರಗಳ ಪರಿಶೀಲನೆ, ನಗದು ವರ್ಗಾವಣೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ತನಿಖೆ ನಡೆಸಲಾಗಿತ್ತು. ರಾಮಯ್ಯ ಆದಾಯಕ್ಕಿಂತ ಶೇ 149.50ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು.  ರಾಮಯ್ಯ ವಿರುದ್ಧ 12 ಸಾಕ್ಷಿಗಳು ಮತ್ತು 53 ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲಾಗಿತ್ತು. ನಂತರ ನಡೆದ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಈಚೆಗೆ ಶಿಕ್ಷೆ ಪ್ರಕಟಿಸಿದೆ.

ರಾಮಯ್ಯ ಅವರಿಗೆ 3 ವರ್ಷ ಸಜೆ, ₹2 ಲಕ್ಷ ದಂಡ ವಿಧಿಸಿದೆ. ದಂಡ ಕಟ್ಟದಿದ್ದರೆ ಹೆಚ್ಚುವರಿ ಒಂದು ವರ್ಷ ಸಜೆ ಅನುಭವಿಸಬೇಕು ಎಂದು ಸೂಚಿಸಿದೆ. ಜತೆಗೆ ₹1.09 ಕೋಟಿ ಮೌಲ್ಯದಷ್ಟು ಆಸ್ತಿಯನ್ನು ರಾಜ್ಯ ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.