ಬೆಂಗಳೂರು: ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಗೊಂಡಿರುವ 1,016 ಅಭ್ಯರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆಯು ಶನಿವಾರ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿ, ಸ್ಥಳ ನಿಯುಕ್ತಿ ಆದೇಶ ನೀಡಿದೆ.
ಸಹಾಯಕ ಪ್ರಾಧ್ಯಾಪಕರ ಮಂಜೂರಾದ ಹುದ್ದೆಗಳಲ್ಲಿ ಒಟ್ಟು 1,654 ಹುದ್ದೆಗಳು ಖಾಲಿ ಇದ್ದವು. ಈ ಪೈಕಿ, ಪ್ರಸ್ತುತ 1,016 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಗೂ ಮೊದಲು ಕಾರ್ಯನಿರತ ಕಾಯಂ ಬೋಧಕರ ಸಂಖ್ಯೆ ಶೇ 73.58ರಷ್ಟಿತ್ತು. ಹೊಸ ನೇಮಕಾತಿಯಿಂದ ಶೇ 88.85ರಷ್ಟಾಗಿದೆ. ಆ ಮೂಲಕ, ಬೋಧಕರ ಸಂಖ್ಯೆ ಶೇ 15.27 ಹೆಚ್ಚಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
‘ಕಾಯಂ ಸಹಾಯಕ ಪ್ರಾಧ್ಯಾಪಕರ ಕೊರತೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದರು. ಹೊಸ ನೇಮಕಾತಿಯಿಂಸ ಕಲ್ಯಾಣ ಕರ್ನಾಟಕ ಭಾಗವನ್ನೂ ಒಳಗೊಂಡಂತೆ, ‘ಇ’ ಮತ್ತು ‘ಡಿ’ ವಲಯಗಳ ಗ್ರಾಮೀಣ ಭಾಗದ ಸರ್ಕಾರಿ ಕಾಲೇಜುಗಳಿಗೆ ಪೂರ್ಣಕಾಲಿಕ ಅಧ್ಯಾಪಕರು ನೇಮಕಗೊಂಡಂತಾಗಿದೆ. ಅಲ್ಲದೆ, ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಾಗ, ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂಜೂರಾದ ಸಹಾಯಕ ಪ್ರಾಧ್ಯಾಪಕರ ಬಹುತೇಕ ಹುದ್ದೆಗಳನ್ನು ಭರ್ತಿ ಮಾಡಿದಂತಾಗುತ್ತದೆ’ ಎಂದೂ ಅವರು ವಿವರಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 26 ವಿವಿಧ ವಿಷಯಗಳಲ್ಲಿ ಖಾಲಿ ಇದ್ದ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2021ರ ಸೆ. 30ರಂದು ಅಧಿಸೂಚನೆ ಹೊರಡಿಸಿತ್ತು. ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳ ಅರ್ಹತೆಯ ಕುರಿತು ಸಂಬಂದಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಪಡೆದ ದಾಖಲೆಗಳನ್ನು ಪರಿಶೀಲಿಸಿ, ಪರಿಶೀಲನಾ ಸಮಿತಿಯ ಶಿಫಾರಸಿನ ಆಧಾರದಲ್ಲಿ ಒಟ್ಟು 1,016 ಅಭ್ಯರ್ಥಿಗಳ ನೇಮಕಕ್ಕೆ 2024ರ ಸೆ. 5ರಂದು ಅಧಿಸೂಚನೆ ಹೊರಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.