ADVERTISEMENT

ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆ: ಕ.ವಿ.ವಿ ಕುಲಸಚಿವ ಬಂಧನ

ಮೈಸೂರಿನ ಮನೆಯಲ್ಲಿ ಪ್ರಶ್ನೆಪತ್ರಿಕೆ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 19:31 IST
Last Updated 28 ಏಪ್ರಿಲ್ 2022, 19:31 IST
ಎಚ್‌. ನಾಗರಾಜ್
ಎಚ್‌. ನಾಗರಾಜ್   

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣ ಸಂಬಂಧ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಎಚ್. ನಾಗರಾಜ್ ಅವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಾರ್ಚ್‌ 14ರಂದು ನಡೆದಿದ್ದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯ 18 ಪ್ರಶ್ನೆಗಳು, ಪರೀಕ್ಷೆಗೂ ಮುನ್ನ ಸೋರಿಕೆಯಾಗಿವೆ’ ಎಂಬುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕರು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದ ಆರೋಪದಡಿ ಅತಿಥಿ ಉಪನ್ಯಾಸಕಿ ಆರ್. ಸೌಮ್ಯಾ ಅವರನ್ನು ಇತ್ತೀಚಿಗೆಷ್ಟೇ ಬಂಧಿಸಿದ್ದರು.

ಮೈಸೂರಿನ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾದ ಸೌಮ್ಯಾ, ಮಾನಸಗಂಗೋತ್ರಿಯಲ್ಲಿ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ. ಎಚ್. ನಾಗರಾಜ್ ಮಾರ್ಗದರ್ಶನದಲ್ಲಿ ಪಿಎಚ್‌.ಡಿ ಮಾಡುತ್ತಿದ್ದರು. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ನಡೆಸಲು ಅಗತ್ಯವಾದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಗಳನ್ನು ಸಿದ್ಧಪಡಿಸಲು ನಾಗರಾಜ್‌ ಅವರಿಗೆ ಕೆಇಎ ಕೋರಿತ್ತು. ಅದರಂತೆ ನಾಗರಾಜ್ ಅವರು ಪ್ರಶ್ನೆಗಳನ್ನು ಸಿದ್ದಪಡಿಸಿ ನೀಡಿದ್ದರು. ಅದೇ ಪ್ರಶ್ನೆಗಳೇ ಸೋರಿಕೆಯಾದ ಮಾಹಿತಿ ತನಿಖೆಯಿಂದ ಪತ್ತೆಯಾಗಿತ್ತು.

ADVERTISEMENT

ರಜೆ ಹಾಕಿ ವಿಚಾರಣೆಗೆ ಹಾಜರಿ: ‘ನಾಗರಾಜ್ ಅವರನ್ನು ಕೆಲ ತಿಂಗಳ ಹಿಂದೆಯಷ್ಟೇ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾಗಿ (ಮೌಲ್ಯಮಾಪನ) ನೇಮಕ ಮಾಡಲಾಗಿತ್ತು. ಸೌಮ್ಯಾ ಅವರ ಬಂಧನ
ವಾಗುತ್ತಿದ್ದಂತೆ ನಾಗರಾಜ್ ಅವರಿಗೆ ನೋಟಿಸ್‌ ನೀಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸಕ್ಕೆ ರಜೆ ಹಾಕಿದ್ದ ನಾಗರಾಜ್, ಬೆಂಗಳೂರಿಗೆ ಬಂದು ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಸೌಮ್ಯಾ ಅವರ ಮೊಬೈಲ್‌ನಲ್ಲಿ ಸಿಕ್ಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದಾಗ, ನಾಗರಾಜ್ ತಪ್ಪೊಪ್ಪಿಕೊಂಡರು. ಹೀಗಾಗಿ, ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯಲ್ಲಿ ಪ್ರಶ್ನೆಪತ್ರಿಕೆ ಪತ್ತೆ: ನಾಗರಾಜ್ ಅವರ ಧಾರವಾಡ ಹಾಗೂ ಮೈಸೂರಿನ ಮನೆ ಮೇಲೆ ಮಲ್ಲೇಶ್ವರ ಪೊಲೀಸರು ದಾಳಿ ಮಾಡಿದ್ದು, ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

‘ನಾಗರಾಜ್ ಅವರು ಪರೀಕ್ಷೆಗೆಂದು ಸಿದ್ಧಪಡಿಸಿದ್ದ ಪ್ರಶ್ನೆಗಳು ಹಾಗೂ ಕೆಲ ಮಾದರಿ ಪ್ರಶ್ನೆಪತ್ರಿಕೆಗಳು ಸಿಕ್ಕಿವೆ. ಸೌಮ್ಯಾ ಬಳಿ ಸಿಕ್ಕಿರುವ ಪ್ರಶ್ನೆಗಳಿಗೂ ನಾಗರಾಜ್ ಮನೆಯಲ್ಲಿ ಲಭ್ಯವಾದ ಪ್ರಶ್ನೆಗಳಿಗೂ ಹೋಲಿಕೆಯಾಗಿವೆ. ಇದನ್ನೇ ಪುರಾವೆಯನ್ನಾಗಿ ಮಾಡಿಕೊಂಡು ನಾಗರಾಜ್ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು
ಹೇಳಿವೆ.

‘ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನವಿದೆ. ಕೆಲವರಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಕೆಲವರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿವೆ.

ಪ್ರಶ್ನೆ ಸಿದ್ಧಪಡಿಸಲು ಸೌಮ್ಯಾ ಸಹಾಯ: ‘ಕುಲಸಚಿವರಾದ ಮೇಲೆ ನಾಗರಾಜ್ ಅವರಿಗೆ ಕೆಲಸದ ಒತ್ತಡ ಹೆಚ್ಚಾಗಿತ್ತು. ಕೆಇಎ ಅಧಿಕಾರಿಗಳು ಪ್ರಶ್ನೆಗಳನ್ನು ಸಿದ್ಧಪಡಿಸಲು ಕೋರಿದಾಗ ನಾಗರಾಜ್, ಸೌಮ್ಯಾ ಅವರ ಸಹಾಯ ಪಡೆದಿದ್ದರು. ಅದನ್ನೇ ದುರುಪಯೋಗಪಡಿಸಿಕೊಂಡ ಸೌಮ್ಯಾ, ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಹೋದರಿ ‍ಪುತ್ರಿ, ಸ್ನೇಹಿತೆ ವಿಚಾರಣೆ: ಪ್ರಕರಣದಲ್ಲಿ ನಾಗರಾಜ್ ಅವರ ಸಹೋದರಿ ಪುತ್ರಿ ಹಾಗೂ ಆಕೆಯ ಸ್ನೇಹಿತೆ ಭಾಗಿಯಾಗಿರುವ ಅನುಮಾನ ಪೊಲೀಸರಿಗೆ ಇದೆ. ಹೀಗಾಗಿ, ಅವರಿಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

‘ನಾಗರಾಜ್ ಬಳಿ ಇದ್ದ ಪ್ರಶ್ನೆಗಳನ್ನು ಅವರ ಸಹೋದರಿ ಪುತ್ರಿ ಹಾಗೂ ಇತರೆ ಸ್ನೇಹಿತರಿಗೆ ಕಳುಹಿಸಿರುವ ಮಾಹಿತಿ ಗೊತ್ತಾಗಿದೆ. ಹೀಗಾಗಿ, ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಪುರಾವೆ ಸಿಕ್ಕ ಬಳಿಕವೇ ನಿಖರ ಮಾಹಿತಿ ತಿಳಿಯಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸೌಮ್ಯಾ ಪೋಸ್ಟ್ ಡಾಕ್ಟೊರಲ್‌ ಫೆಲೊಶಿಪ್ ಅಮಾನತು

ಮೈಸೂರು: ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಆರೋಪದಲ್ಲಿ ಬಂಧಿತರಾಗಿರುವ ಆರ್‌.ಸೌಮ್ಯಾ ಅವರ ಪೋಸ್ಟ್‌ ಡಾಕ್ಟೊರಲ್‌ ಫೆಲೊಶಿಪ್‌ ಅನ್ನು ಮೈಸೂರು ವಿಶ್ವವಿದ್ಯಾಲಯ ಅಮಾನತುಗೊಳಿಸಿದೆ.

‘ಸರ್ಕಾರ ಅಥವಾ ಪೊಲೀಸರಿಂದ ನಮಗೆ ಯಾವುದೇ ಮಾಹಿತಿ, ಸೂಚನೆ ಬಂದಿಲ್ಲ. ಆದರೆ, ಭೂಗೋಳ ವಿಜ್ಞಾನ ವಿಭಾಗದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಸೌಮ್ಯಾ ವಿರುದ್ಧ ಶಿಸ್ತಿನ ಕ್ರಮವಾಗಿ ಅಮಾನತು ಮಾಡಲಾಗಿದೆ’ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣ ದಾಖಲಾಗಿರುವುದರಿಂದ ಅಮಾನತು ಮಾಡಲಾಗಿದೆ ಎಂಬ ವಿಚಾರವನ್ನು ಪತ್ರದ ಮೂಲಕ ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಗೂ (ಐಸಿಎಸ್‌ಎಸ್‌ಆರ್‌) ತಿಳಿಸಲಿದ್ದೇವೆ’ ಎಂದರು. ‘ಸೌಮ್ಯಾ ಅವರ ನಿವಾಸ ಹಾಗೂ ಫೆಲೋಶಿಪ್‌ ಮಾಡುತ್ತಿದ್ದ ಭೂಗೋಳ ವಿಜ್ಞಾನ ವಿಭಾಗಕ್ಕೆ ಅಮಾನತು ಪತ್ರ ಕಳುಹಿಸಿದ್ದೇವೆ’ ಎಂದು ಕುಲಸಚಿವ ಪ್ರೊ.ಆರ್‌.ಶಿವಪ್ಪ ಹೇಳಿದರು.

‘ಪರೀಕ್ಷೆ ಅಕ್ರಮ ನಡೆದಿದ್ದರೆ ನಿಷ್ಪಕ್ಷಪಾತ ತನಿಖೆ’

ರಾಮನಗರ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದರು.

ನಗರದಲ್ಲಿ ಗುರುವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಭೂಗೋಳ ವಿಜ್ಞಾನ ವಿಷಯದಲ್ಲಿ ಕೆಲವು ಪ್ರಶ್ನೆಗಳು ಸೋರಿಕೆಯಾಗಿವೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರೇ ಭಾಗಿದ್ದಾರೆ ಎಂಬ ಮಾಹಿತಿ ಇದೆ. ಎಲ್ಲವನ್ನೂ ಪಾರದರ್ಶಕವಾಗಿ ತನಿಖೆ ಮಾಡಲಾಗುವುದು’ ಎಂದರು.

ನೇಮಕಾತಿ‌ ಅಕ್ರಮಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಸಂಸದ ಡಿ.ಕೆ. ಸುರೇಶ್ ಒತ್ತಾಯದ ಕುರಿತು ಪ್ರತಿಕ್ರಿಯಿಸಿ 'ಪಾರದರ್ಶಕತೆ, ಆಡಳಿತ ಎಂಬ ಒಳ್ಳೆಯ ಮಾತುಗಳು ಅವರ ಬಾಯಲ್ಲಿ ಬಂದದ್ದು ಕೇಳಿ ಖುಷಿಯಾಗುತ್ತಿದೆ’ ಎಂದು ವ್ಯಂಗ್ಯವಾಡಿದರು. ‘ಅವರ ಕಣ ಕಣದಲ್ಲೂ ಭ್ರಷ್ಟಾಚಾರ ತುಂಬಿದೆ. ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ ಇಂತಹವುಗಳನ್ನೇ ಜೀವನದುದ್ದಕ್ಕೂ ಮಾಡುತ್ತ ಬಂದಿದ್ದಾರೆ’ ಎಂದು ಟೀಕಿಸಿದರು.

ಹಣದ ವಹಿವಾಟಿನ ಬಗ್ಗೆ ತನಿಖೆ’

‘ಪ್ರಕರಣದಲ್ಲಿ ಎರಡನೇ ಆರೋಪಿ ನಾಗರಾಜ್ ಬಂಧನವಾಗಿದ್ದು, ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಣಕ್ಕಾಗಿ ಪ್ರಶ್ನೆಗಳನ್ನು ಸೋರಿಕೆ ಮಾಡಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ’ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋರಿಕೆ ಬಗ್ಗೆ ಗೊತ್ತಿರಲಿಲ್ಲ’

‘ಸೌಮ್ಯಾ ಸಹಾಯ ಪಡೆದು ಪ್ರಶ್ನೆಗಳನ್ನು ಸಿದ್ಧಪಡಿಸಿ ಕಳುಹಿಸಿದ್ದೆ. ಆದರೆ, ಆಕೆ ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದ ಸಂಗತಿ ನನಗೆ ಗೊತ್ತಿರಲಿಲ್ಲ’ ಎಂಬುದಾಗಿ ನಾಗರಾಜ್ ಪೊಲೀಸರಿಗೆ ಹೇಳಿರುವುದಾಗಿ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.