ಹಾಸನ: ಜೆಡಿಎಸ್‌ನಿಂದ ಹೊರನಡೆದಿರುವ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳು ಆರಂಭವಾಗಿವೆ. ಪಕ್ಷದ ರಾಷ್ಟ್ರೀಯ ವರಿಷ್ಠರೇ ಈ ವಿಷಯದಲ್ಲಿ ಆಸಕ್ತಿ ತೋರಿದಂತೆ ಕಾಣುತ್ತಿದ್ದು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ರಾಮಸ್ವಾಮಿ ಅವರಿಗೆ ಕರೆ ಮಾಡಿದ್ದಾರೆ.
ಫೆ.21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಜಿಲ್ಲೆಯ ಬೇಲೂರಿಗೆ ಬರಲಿದ್ದಾರೆ. ಅಂದು ವಿಜಯ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ರಾಮಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಉದ್ದೇಶವಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
‘ರಾಮಸ್ವಾಮಿ ಸಜ್ಜನ ರಾಜಕಾರಣಿ ಎಂದು ಹೆಸರಾಗಿದ್ದು, ಇಂಥವರನ್ನು ಪಕ್ಷಕ್ಕೆ ಕರೆತರುವ ಮೂಲಕ ಜಿಲ್ಲೆಯ ಜನರಿಗೆ ಸಂದೇಶ ಕೊಡಬೇಕು’ ಎನ್ನುವ ಉದ್ದೇಶ ಬಿಜೆಪಿ ವರಿಷ್ಠರದ್ದು. ಹೀಗಾಗಿ ಮುಖ್ಯಮಂತ್ರಿಯೇ ಕರೆ ಮಾಡಿ
ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್‌ನ ಭದ್ರಕೋಟೆಯಾದ ಜಿಲ್ಲೆಯಲ್ಲಿ ಬಿಜೆಪಿ ತನ್ನ ನೆಲೆ ವಿಸ್ತರಿಸಲು ಮುಂದಾಗಿದ್ದು, ರಾಮಸ್ವಾಮಿ ಅವರನ್ನು ಸೆಳೆಯುವ ಮೂಲಕ ಪಕ್ಷದ ಬಲವರ್ಧನೆಗೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಮೊದಲು ಕಾಂಗ್ರೆಸ್‌ನಲ್ಲಿದ್ದ ರಾಮಸ್ವಾಮಿ, ನಂತರ ಜೆಡಿಎಸ್‌ಗೆ ಬಂದಿದ್ದರು. ಇದೀಗ ಬಿಜೆಪಿಗೆ ಸೇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದ ರಾಮಸ್ವಾಮಿ ಅವರು, ‘ಕ್ಷೇತ್ರದ ಜನರ ಅಭಿಪ್ರಾಯ
ಕೇಳಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದಷ್ಟೆ
ಹೇಳಿದರು.
ದೇವೇಗೌಡರ ಮಕ್ಕಳ ವಿರುದ್ಧ ಆಕ್ರೋಶ: ರಾಮಸ್ವಾಮಿ ಅವರು ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇದೀಗ ದೇವೇಗೌಡರ ಮಕ್ಕಳು ತಮ್ಮನ್ನು ನಡೆಸಿಕೊಳ್ಳುತ್ತಿರುವುದರ ಬಗ್ಗೆ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
‘2019ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಅಭಿಪ್ರಾಯ ಕೇಳದೇ ಪ್ರಜ್ವಲ್ ಅವರನ್ನು ಹಾಸನದಿಂದ ಕಣಕ್ಕೆ ಇಳಿಸಲಾಯಿತು. ಆಗ ನಾನು ಪ್ರಜ್ವಲ್ ಹೆಸರು ಹೇಳದೇ ಇರುವುದಕ್ಕೆ ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ’ ಎಂದು ಹೊಳೆನರಸೀಪುರ ತಾಲ್ಲೂಕಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರಾಮಸ್ವಾಮಿ ಅಸಮಾಧಾನ ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.