ಶ್ರೀರಂಗಪಟ್ಟಣ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಇಲ್ಲಿನ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ ಬುಧವಾರ ವಿಸರ್ಜಿಸಲಾಯಿತು.
ಮಧ್ಯಾಹ್ನ 2 ಗಂಟೆ 8 ನಿಮಿಷಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸ್ಥಿಯನ್ನು ವಿಸರ್ಜಿಸಿದರು. ಇದಕ್ಕೂ ಮುನ್ನ ಬೆಂಗಳೂರಿನ ಜಗನ್ನಾಥ ಭವನದಿಂದ ತಂದ ಅಸ್ಥಿ ಕುಡಿಕೆಯನ್ನು ನದಿಯ ದಂಡೆಯಲ್ಲಿರಿಸಿ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡ ಅಸ್ಥಿ ವಿಸರ್ಜನೆಯ ವಿಧಿ, ವಿಧಾನಗಳನ್ನು ನೆರವೇರಿಸಿತು.
ಕೇಂದ್ರ ಸಚಿವ ಅನಂತಕುಮಾರ್, ಶಾಸಕ ಆರ್.ಅಶೋಕ್, ಸಂಸದರಾದ ಪ್ರತಾಪಸಿಂಹ, ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇದ್ದರು.
‘ಕೃಷ್ಣಾ, ತುಂಗಭದ್ರಾ, ನೇತ್ರಾವತಿ, ಮಲಪ್ರಭಾ ಸೇರಿ ರಾಜ್ಯದ 8 ನದಿಗಳಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ ನಡೆಯಲಿದೆ. ಸ್ಥಳೀಯ ಬಿಜೆಪಿ ಮುಖಂಡರು ಚಿತಾಭಸ್ಮ ವಿಸರ್ಜನೆ ಮಾಡಲಿದ್ದಾರೆ’ ಎಂದು ಯಡಿಯೂರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.