ADVERTISEMENT

287 ನಗರಗಳಲ್ಲಿ ಅಟಲ್‌ ಪರಿವರ್ತನಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:46 IST
Last Updated 12 ಮೇ 2022, 15:46 IST
ಜೆ.ಸಿ. ಮಾಧುಸ್ವಾಮಿ
ಜೆ.ಸಿ. ಮಾಧುಸ್ವಾಮಿ   

ಬೆಂಗಳೂರು: ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ 287 ನಗರಗಳನ್ನು ‘ಅಟಲ್‌ ನಗರ ಪರಿವರ್ತನಾ ಅಭಿಯಾನ’ದ ವ್ಯಾಪ್ತಿಗೆ ತರುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ನಗರಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಮತ್ತು ಒಳಚರಂಡಿ ನಿರ್ಮಾಣಕ್ಕೆ ₹ 9,237 ಕೋಟಿ ವೆಚ್ಚ ಮಾಡಲಾಗುತ್ತದೆ.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ನಗರಸಭೆಗಳನ್ನು ಹೊರತುಪಡಿಸಿ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳೂ ಯೋಜನೆ ವ್ಯಾಪ್ತಿಗೆ ಬರುತ್ತವೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಕೇಂದ್ರ ಸರ್ಕಾರ ₹ 4,615 ಕೋಟಿ, ರಾಜ್ಯ ಸರ್ಕಾರ ₹ 3,692 ಕೋಟಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ₹ 923 ಕೋಟಿ ಭರಿಸಲಿವೆ’ ಎಂದರು.

ಸ್ವಚ್ಛ ಭಾರತ: ಸಣ್ಣ ನಗರಸಭೆಗಳು, ಪಟ್ಟಣ ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲೂ ಸ್ವಚ್ಛ ಭಾರತ ಯೋಜನೆ ಅನುಷ್ಠಾನಗೊಳಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ಒಟ್ಟು ₹ 3,966 ಕೋಟಿ ವೆಚ್ಚವಾಗಲಿದೆ. ರಾಜ್ಯವು ₹ 1,292 ಕೋಟಿ ಭರಿಸಲಿದೆ ಎಂದು ತಿಳಿಸಿದರು.

ADVERTISEMENT

ಬಜೆಟ್‌ನಲ್ಲಿ ಘೋಷಿಸಿದಂತೆ ಸಣ್ಣ ರೈತರಿಗೆ 5 ಎಕರೆಗಳವರೆಗೆ ಪ್ರತಿ ಎಕರೆಗೆ ₹ 250 ರಷ್ಟು ಡೀಸೆಲ್‌ ಸಹಾಯಧನ ನೀಡುವ ಯೋಜನೆ ಅನುಷ್ಠಾನಕ್ಕೂ ಒಪ್ಪಿಗೆ ನೀಡಲಾಗಿದೆ. 69.81 ಲಕ್ಷ ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.

ನಿಯಮ ಸಡಿಲಿಕೆ: ದೌರ್ಜನ್ಯಕ್ಕೊಳಗಾಗಿ ಮೃತರಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡುವುದಕ್ಕೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸುವ, ಮಗ, ಮಗಳು ಅಥವಾ ಪತ್ನಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ಇನ್‌ಸ್ಪೆಕ್ಟರ್‌ಗಳ ಹುದ್ದೆಗಳಲ್ಲಿ ಶೇಕಡ 5 ರಷ್ಟನ್ನು ಮುಂಬಡ್ತಿಯ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೂ ಸಂಪುಟ ಅಂಗೀಕಾರ ನೀಡಿದೆ ಎಂದರು.

ಉಗ್ರಾಣ ನಿಗಮಕ್ಕೆ ನೆರವು: ರಾಜ್ಯ ಉಗ್ರಾಣ ನಿಗಮವು ₹ 862 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿನ ತೊಡಕು ನಿವಾರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ನಿಗಮದ ಸಾಲಗಳಿಗೆ ನೀಡಿದ್ದ ಖಾತರಿಯನ್ನು ಭರಿಸುವುದು ಹಾಗೂ ಗುತ್ತಿಗೆದಾರರಿಗೆ ₹ 126 ಕೋಟಿ ಪಾವತಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಿಎಸ್‌ ನೇಮಕ: ಸಿಎಂಗೆ ಅಧಿಕಾರಿ

ಬೆಂಗಳೂರು: ನೂತನ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ.

‘ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಈ ತಿಂಗಳ ಅಂತ್ಯದಲ್ಲಿ ನಿವೃತ್ತರಾಗುತ್ತಾರೆ. ಒಂಬತ್ತು ಮಂದಿ ಐಎಎಸ್‌ ಅಧಿಕಾರಿಗಳು ಜೇಷ್ಠತಾ ಪಟ್ಟಿಯಲ್ಲಿದ್ದಾರೆ. ಅವರಲ್ಲಿ ಒಬ್ಬರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಗಿದೆ ಎಂದು ಸಚಿವೆ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಸೈಬರ್‌ ಭದ್ರತಾ ನೀತಿಗೆ ಒಪ್ಪಿಗೆ: ‘ಕರ್ನಾಟಕ ಸೈಬರ್‌ ಭದ್ರತಾ ನೀತಿ 2022–2027ಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸೈಬರ್‌ ಭದ್ರತೆ, ತರಬೇತಿ ಮತ್ತಿತರ ಅಂಶಗಳು ನೀತಿಯಲ್ಲಿವೆ’ ಎಂದರು.

ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯದಲ್ಲೂ ‘ಖಾಸಗಿ ಭದ್ರತಾ ಸಂಸ್ಥೆಗಳ ನಿಯಮಗಳು–2022’ಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಚಿವರ ಆಕ್ಷೇಪ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನಗಳ ಮಂಜೂರಾತಿಯಲ್ಲಿ ನೀಡುತ್ತಿದ್ದ ಸಹಾಯಧನವನ್ನು ಶೇ 50ರಿಂದ ಶೇ 75ಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಒಪ್ಪಿಗೆ ದೊರಕಿದೆ. ಕೆಲವು ಸಚಿವರು ಈ ಪ್ರಸ್ತಾವವನ್ನು ವಿರೋಧಿಸಿದರು. ಇದರಿಂದ ಶ್ರೀಮಂತರಿಗೆ ಮಾತ್ರ ಅನುಕೂಲ ಆಗುತ್ತದೆ ಈ ವರ್ಗಗಳಿಗೆ ಸೇರಿದ ಬಡವರಿಗೆ ಅನುಕೂಲ ಆಗುವುದಿಲ್ಲ ಎಂದು ಬಹುತೇಕ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ತಾವು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು ಮೂಲಗಳು ತಿಳಿಸಿವೆ.

ಪ್ರಮುಖ ತೀರ್ಮಾನಗಳು

* ಔರಾದ್‌ ತಾಲ್ಲೂಕಿನ ಬಬಲೂರಿನಲ್ಲಿ ₹ 89.94 ಕೋಟಿ ವೆಚ್ಚದಲ್ಲಿ ಕೇಂದ್ರೀಯ ಪೆಟ್ರೋಲಿಯಂ ಎಂಜಿನಿಯರಿಂಗ್‌ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ.

* ಹೀಮೋಫೀಲಿಯಾ ರೋಗಿಗಳಿಗೆ ಉಚಿತವಾಗಿ ವಿತರಿಸಲು ₹ 29 ಕೋಟಿ ವೆಚ್ಚದಲ್ಲಿ ಔಷಧಿ ಖರೀದಿ.

* ಸಿಕಲ್‌ಸೆಲ್‌ ಅನೀಮಿಯಾ ರೋಗಿಗಳಿಗೆ ವಿತರಿಸಲು ₹ 15 ಕೋಟಿ ವೆಚ್ಚದಲ್ಲಿ ಔಷಧಿ ಖರೀದಿ.

* ಶಿಗ್ಗಾಂವಿಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ₹ 28 ಕೋಟಿ ವೆಚ್ಚದಲ್ಲಿ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ.

* ನಾರಾಯಣಪುರ ಬಲದಂಡೆ ವ್ಯಾಪ್ತಿಯಲ್ಲಿ ದೇವದುರ್ಗ ತಾಲ್ಲೂಕಿನ 33 ಕೆರೆಗಳಿಗೆ ನೀರು ತುಂಬುವ ₹ 330 ಕೋಟಿ ವೆಚ್ಚದ ಕಾಮಗಾರಿ ಅಂದಾಜು ಪಟ್ಟಿಗೆ ಒಪ್ಪಿಗೆ.

* ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮೈಸೂರು ಜಿಲ್ಲೆಯ ಸಾತನಹಳ್ಳಿ, ಸಾದನಹಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ₹ 49.23 ಕೋಟಿ ವೆಚ್ಚದಲ್ಲಿ 724 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ.

* ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಲ್ಲಿನ ಗೋನಾಳ್‌ ಗ್ರಾಮದಲ್ಲಿ 50:50ರ ಪಾಲುದಾರಿಕೆಯಲ್ಲಿ 101.98 ಎಕರೆ ವಿಸ್ತೀರ್ಣದಲ್ಲಿ ಬಡಾವಣೆ ನಿರ್ಮಾಣ.

* ಅನುಭವ ಮಂಟಪ ಕಾಮಗಾರಿಯ ಅಂದಾಜು ವೆಚ್ಚವನ್ನು ₹ 612 ಕೋಟಿ ಹೆಚ್ಚಿಸುವ ಪ್ರಸ್ತಾವಕ್ಕೆ ಅನುಮೋದನೆ.

* ಬೆಂಗಳೂರಿನ ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸೇರಿದ ಜಾಗದಲ್ಲಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪ ಕಾಮಗಾರಿಯನ್ನು ಶೃಂಗೇರಿ ಶಾರದಾ ಪೀಠದ ಸಹಭಾಗಿತ್ವದಲ್ಲಿ ಪೂರ್ಣಗೊಳಿಸಲು ಒಪ್ಪಿಗೆ.

* ಮೈಸೂರಿನ ಕೆ.ಆರ್‌.ಎಸ್‌. ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಉತ್ತರಾದಿ ಮಠಕ್ಕೆ ದೀರ್ಘಾವಧಿಗೆ ಗುತ್ತಿಗೆಗೆ ನೀಡುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.